ಮಡಿಕೇರಿ, ಏ.೧೭: ಸಮಾಜವನ್ನು ಒಗ್ಗೂಡಿಸಲು ಕ್ರೀಡೋತ್ಸವಗಳು ಸಹಕಾರಿಯಾಗಲಿವೆ ಎಂದು ಮಾಜಿ ವಿಧಾನ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅಭಿಪ್ರಾಯಪಟ್ಟರು.

ಕೊಡಗು ಗೌಡ ಯುವ ವೇದಿಕೆ ವತಿಯಿಂದ ಏರ್ಪಡಿಸಲಾಗಿರುವ, ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗೌಡ ಪ್ರೀಮಿಯರ್ ಲೀಗ್ ಸೀಸನ್ -೨ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು; ಹಿಂದೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗುತ್ತಿತ್ತು, ಇದೀಗ ಲೆದರ್ ಬಾಲ್ ಪಂದ್ಯಾವಳಿ ಆಯೋಜನೆ ಮಾಡುತ್ತಿರುವದರಿಂದ ಪ್ರತಿಭಾವಂತರಿಗೆ ಅವಕಾಶ ಸಿಕ್ಕಂತಾಗುತ್ತದೆ. ಈ ರೀತಿಯ ಸ್ಪರ್ಧಾತ್ಮಕ ಕ್ರೀಡಾಕೂಟ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಚಟುವಟಿಕೆಗಳಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಹೇಳಿದರು.

(ಮೊದಲ ಪುಟದಿಂದ) ಕೊಡಗು ಗೌಡ ಸಮಾಜದ ಅಧ್ಯಕ್ಷÀ ಪೇರಿಯನ ಜಯಾನಂದ್ ಮಾತನಾಡಿ; ಟೆನ್ನಿಸ್ ಬಾಲ್ನಲ್ಲಿ ಆಡಬಹುದು, ಆದರೆ ಲೆದರ್ ಬಾಲ್‌ನಲ್ಲಿ ಕಷ್ಟ. ಅದರಲ್ಲೂ ಐಪಿಎಲ್ ಮಾದರಿಯಲ್ಲಿ ಪಂದ್ಯಾವಳಿ ಆಯೋಜನೆ ಮಾಡುವದು ಸುಲಭವಲ್ಲ. ಕ್ರೀಡಾಕೂಟದಲ್ಲಿ ಮಹಿಳೆಯರಿಗೂ ಅವಕಾಶ ನೀಡಿರುವದು ಸಂತೋಷದ ವಿಚಾರ ಎಂದು ಹೇಳಿದರು.

ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಮಾತನಾಡಿ; ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಕೊರತೆ ಕಾಣುತ್ತಿರುವದು ಬೇಸರದ ಸಂಗತಿ. ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹ ನೀಡಬೇಕೆಂದು ಹೇಳಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿ; ಯುವ ವೇದಿಕೆ ಬೆಳ್ಳಿ ಮಹೋತ್ಸವ ಆಚರಿಸಿಕೊಳ್ಳುತ್ತಿರುವದು ಸಂತೋಷದ ವಿಷಯ. ಈ ಒಂದು ಕ್ರೀಡಾಕೂಟದಲ್ಲಿ ಲೆದರ್ ಬಾಲ್ ಪ್ರತಿಭೆಗಳಿಗೆ ಅವಕಾಶ ಸಿಕ್ಕಂತಾಗಿದೆ. ಆಟಗಾರರು ಮುಂದೆ ಬರಬೇಕು. ಮಹಿಳೆಯರೂ ಕೂಡ ಭಾಗವಹಿಸಬೇಕೆಂದು ಹೇಳಿದರು.

ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಮೆ ದಮಯಂತಿ ಮಾತನಾಡಿ; ಇಂತಹ ಕ್ರೀಡಾಕೂಟಗಳು ದೊಡ್ಡ ಮಟ್ಟದ ಕಾರ್ಯಕ್ರಮಕ್ಕೆ ಪ್ರೇರಣೆಯಾಗಬೇಕು. ಇದರೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕೂ ನಾಂದಿಯಾಗಲಿ, ದೈಹಿಕ ಸದೃತೆಯೊಂದಿಗೆ ಮಾನಸಿಕ ಸುಸ್ಥಿರತೆ, ಕ್ರಿಯಾಶೀಲತೆ ಮುಖ್ಯ, ಕ್ರೀಡಾಕೂಟ ಸಂಭ್ರಮೋತ್ಸವವಾಗಲಿ ಎಂದು ಹೇಳಿದರು.

ವೇದಿಕೆಯ ಕಾನೂನು ಸಮಿತಿ ಅಧ್ಯಕ್ಷ ಕೊಟ್ಟಕೇರಿಯನ ದಯಾನಂದ ಮಾತನಾಡಿ; ಬದಲಾವಣೆ ಜಗದ ನಿಯಮ. ಉತ್ಸಾಹಿ ಯುವಕ ಯುವತಿಯರನ್ನೊಳಗೊಂಡಿರುವ ಯುವ ವೇದಿಕೆ ೨೫ ವರ್ಷ ಪೂರೈಸಿರುವದು ಶ್ಲಾಘನೀಯವೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ; ಎಲ್ಲರ ಸಹಕಾರದೊಂದಿಗೆ ಕ್ರಿಡಾಕೂಟ ಹಮ್ಮಿಕೊಂಡು ಬರಲಾಗುತಿದೆ, ಹೆಚ್ಚಿಗೆ ಜನ ಸೇರುವದರೊಂದಿಗೆ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.

ಸ್ಥಾಪಕ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್, ನಿಕಟಪೂರ್ವ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಗೌರವ ಸಲಹೆಗಾರ ಕಟ್ಟೆಮನೆ ಸೋನಾಜಿತ್, ಉದಯೋನ್ಮುಖ ಕ್ರಿಕೆಟ್ ಆಟಗಾರ ಸುಳ್ಯಕೋಡಿ ರಿಷಿ ಬೋಪಣ್ಣ ಶುಭ ಹಾರೈಸಿದರು. ಕಾರ್ಯದರ್ಶಿ ಪುದಿಯನೆರವನ ರಿಶಿತ್ ಮಾದಯ್ಯ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಜನಾಂಗದ ಸಂಪ್ರದಾಯದAತೆ ತೋಟಂಬೈಲ್ ಅನಂತಕುಮಾರ್ ಅವರು ಗಣಪತಿಗೆ ಪೂಜೆ ನೆರವೇರಿಸಿ ಒಕ್ಕಣೆ ಹೇಳಿದರು. ಈ ಸಂದರ್ಭದಲ್ಲಿ ಗೌಡ ಮಹಿಳಾ ಒಕ್ಕೂಟದ ಸದಸ್ಯರು ಗಣಪತಿಯನ್ನು ಸ್ತುತಿಸಿದರು. ನಂತರ ಅತಿಥಿಗಳು ಮೈದಾನದಲ್ಲಿ ಗೌಡ ಸಂಪ್ರದಾಯದ ವಿಶೇಷತೆಯನ್ನು ಹೊಂದಿರುವ ಟ್ರೋಫಿ ಮತ್ತು ಚೆಂಡು ಅನಾವರಣಗೊಳಿಸಿದರು. ವೇದಿಕೆಯ ಖಜಾಂಜಿಯಾಗಿದ್ದ ನೆಯ್ಯಣಿ ಸಂಜು ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ನವೀನ್ ದೇರಳ ಸ್ವಾಗತಿಸಿ, ಪಾಂಡಿ ಕೀರ್ತಿ ಗಿರೀಶ್ ಪ್ರಾರ್ಥಿಸಿದರು. ಮೂಡಗದ್ದೆ ವಿನೋದ್ ನಿರೂಪಿಸಿ, ಕೆದಂಬಾಡಿ ಕಾಂಚನ ಗೌಡ ವಂದಿಸಿದರು.