ಕಣಿವೆ, ಏ. ೧೬ : ಮಳೆ ಬಂದು ಭೂಮಿ ಹಸನಾಗದ ಕಾರಣ ಸೂರ್ಯನ ಪ್ರತಾಪ ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಲೇ ಇದೆ. ಇದರ ಪರಿಣಾಮವಾಗಿ ಅಂತರ್ಜಲ ಪ್ರಪಾತಕ್ಕೆ ಇಳಿಯುತ್ತಿದೆ.

ಸಣ್ಣ ಹೊಟ್ಟೆಯ ಮನುಷ್ಯರಾದವರು ಇರುವವರ ಬಳಿ ಕೇಳಿ ಅಥವಾ ಬೇಡಿಕೊಂಡಾದರೂ ಪಡೆದು ಹಸಿವು ಮತ್ತು ದಾಹ ನೀಗಿಸಿಕೊಳ್ಳಬಹುದು.

ಆದರೆ, ದೊಡ್ಡ ಹೊಟ್ಟೆಯ ಅಮಾಯಕ ಮುಗ್ಧ ಜೀವಗಳು ಮಾಡುವುದಾದರೂ ಏನು? ಅವುಗಳ ಹಾಹಾಕಾರ ಕೇಳುವವರಾರು?

ಅರಣ್ಯದಲ್ಲಿ ಕಾಡಾನೆಗಳಿಗೆ ಸಮರ್ಪಕವಾಗಿ ಬೇಕಾದ ಆಹಾರ ಮೊದಲೂ ಇರಲಿಲ್ಲ. ಈಗಂತೂ ಮೊದಲೇ ಇಲ್ಲ. ಇನ್ನು ನೀರಂತೂ ಅರಣ್ಯದಲ್ಲಿ ಹುಡುಕಿದರೂ ಸಿಗುತ್ತಿಲ್ಲ.

ಹೀಗಿರುವಾಗ ಕಾಡಾನೆಗಳು ಸಹಜವಾಗಿ ಅನ್ನ - ನೀರು ಅರಸಿ ನಾಡಿನೆಡೆಗೆ ಮುಖ ಮಾಡುತ್ತಿವೆ.

ಹೀಗೆ ಮುಖ ಮಾಡುವ ಕಾಡಾನೆಗಳು ಕಳೆದ ಒಂಭತ್ತು ವರ್ಷಗಳಲ್ಲಿ ೧೧ ಗಂಡಾನೆ ಹಾಗೂ ೧೪ ಹೆಣ್ಣಾನೆಗಳು ಅಮಾನುಷವಾಗಿ ಸಾವನ್ನಪ್ಪಿವೆ.

ಆಹಾರ ಅರಸುವ ಈ ಕಾಡಾನೆಗಳ ಈ ನರಕ ಸಂಚಾರ ಕಾಡಂಚಿನ ಅಮಾಯಕ ಜನರ ಸಂಚಕಾರಕ್ಕೂ ಕಾರಣವಾಗುತ್ತಿದೆ.

ಕಾಡಾನೆಗಳಿಗೆ ದಿನವೊಂದಕ್ಕೆ ೨೫೦ ರಿಂದ ೪೦೦ ಕೆಜಿ ಆಹಾರ, ೮೦ ರಿಂದ ೧೨೦ ಲೀಟರ್ ಕುಡಿಯುವ ನೀರು ಬೇಕು. ಆದರೆ ಬಿಸಿಲ ಧಗೆಗೆ ಕಾಡಾನೆಗಳ ನೆಚ್ಚಿನ ಸೊಪ್ಪು ಸೆದೆಗಳು ಒಣಗಿ ನಿಂತಿವೆ. ಇನ್ನು ಕುಡಿಯಲು ಕಾಡಿನೊಳಗೆ ಹನಿ ನೀರೂ ಕೂಡ ಸಿಗದ ಸ್ಥಿತಿ ಇದೆ.

೨೫ ಕಾಡಾನೆಗಳು ಸಾವು

ಆಹಾರ ನೀರು ಅರಸಿ ನಾಡಿನೆಡೆಗೆ ಧಾವಿಸಿದ ಕಾಡಾನೆಗಳು ಕಳೆದ ೨೦೧೫ ರಿಂದ ಇದುವರೆಗೂ ಒಟ್ಟು ೨೫ ಕಾಡಾನೆಗಳು ಅಸಹಜವಾಗಿ ಸಾವನ್ನಪ್ಪಿವೆ.

ಅಂದರೆ ಬೆಳೆ ತಿಂದು ತುಳಿದು ಹಾನಿಪಡಿಸುತ್ತವೆ ಎಂಬ ಕಾರಣಕ್ಕೆ ರೊಚ್ಚಿಗೆದ್ದ ಕೆಲವರು ಕಾಡಾನೆಗಳಿಗೆ ತಂತಿಯಲ್ಲಿ ಕರೆಂಟ್ ಹರಿಸಿ ಸಾಯಿಸಿದ್ದರೆ, ಕೆಲವರು ಗುಂಡು ಹಾರಿಸಿ, ಇನ್ನು ಕೆಲವರು ವಿಷಾಹಾರ ಹಾಕಿದ ಪರಿಣಾಮ ಅವುಗಳು ಅಲ್ಲಲ್ಲಿ ಸಾವನ್ನಪ್ಪಿದ ಬಗ್ಗೆ ಕುಶಾಲನಗರ ಅರಣ್ಯ ಇಲಾಖೆ ಕಚೇರಿಯಲ್ಲಿ ದಾಖಲಾಗಿದೆ.

ಒಟ್ಟು ೨೫ ಕಾಡಾನೆಗಳ ಪೈಕಿ ಒಟ್ಟು ೧೧ ಗಂಡಾನೆಗಳು ಸಾವನ್ನಪ್ಪಿದ್ದರೆ, ೧೪ ಹೆಣ್ಣಾನೆಗಳು ಮೃತಪಟ್ಟಿವೆ. ಕೇಂದ್ರ ಅರಣ್ಯ ಮತ್ತು ಜೀವಿಶಾಸ್ತç ಇಲಾಖೆಯ ಮಾಹಿತಿಯ ಪ್ರಕಾರ ೨೪ ರಾಜ್ಯಗಳಲ್ಲಿ ೨೯,೯೬೪ ಕಾಡಾನೆಗಳು ಇರುವ ಬಗ್ಗೆ ಮಾಹಿತಿ ಲಭ್ಯವಿದೆ.

ಕರ್ನಾಟಕದಲ್ಲಿ ಅತೀ ಹೆಚ್ಚು ಅಂದರೆ ೬,೦೪೯ ಕಾಡಾನೆಗಳು ಇದ್ದರೆ ಅಸ್ಸಾಂ ರಾಜ್ಯದಲ್ಲಿ ೫೭೧೯, ಕೇರಳದಲ್ಲಿ ೫,೭೦೬ ಕಾಡಾನೆಗಳು ಇವೆ.

ನಿಲ್ಲದ ನಿರಂತರ ಸಂಘರ್ಷ

ಕಾಡಾನೆಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಆನೆ ಮಾನವ ಸಂಘರ್ಷ ನಿತ್ಯ ನಿರಂತರವಾಗಿ ನಡೆಯುತ್ತಲೇ ಇದೆಯಾದರೂ ಇದುವರೆಗೂ ಶಾಶ್ವತ ಪರಿಹಾರ ಮಾತ್ರ ಸಾಧ್ಯವಾಗಿಲ್ಲ.

ಕಳೆದ ಕೆಲವು ದಶಕಗಳ ಹಿಂದೆ ಸ್ವಾಭಾವಿಕ ಅರಣ್ಯ ಎಂಬುದು ನಮ್ಮ ಅಗತ್ಯಗಳಿಗೆ ಬರಿದಾಗುತ್ತಲೇ ಬಂತು.

ಹಾಗಾಗಿ ಕಾಡಾನೆಗಳ ಆವಾಸಸ್ಥಾನವೂ ಕ್ಷೀಣಿಸುತ್ತಾ ಬಂದ ಪರಿಣಾಮವೇ ಇಂದಿನ ಕಾಡಾನೆ ಮಾನವ ಸಂಘರ್ಷಕ್ಕೆ ಪ್ರಮುಖ ಕಾರಣವಾದ ಅಂಶ.

ಫಲಿತಾAಶ ಶೂನ್ಯ

ಕಾಡಾನೆಗಳ ಹಾವಳಿ ಹೆಚ್ಚಿದಂತೆಲ್ಲಾ ಅದನ್ನು ನಿಗ್ರಹಿಸಲು ಕಾಡಂಚಿನಲ್ಲಿ ನಿರ್ಮಿಸಿದ ಕಂದಕ, ವಿದ್ಯುತ್ ಹಾಗೂ ಸೋಲಾರ್ ಬೇಲಿ ನಿರ್ಮಾಣ, ರೈಲ್ವೆ ಕಂಬಿ ಅಳವಡಿಕೆ ಹೀಗೆ ಏನೆಲ್ಲಾ ಯೋಜನೆಗಳು ಜಾರಿಯಾದರೂ ಕೂಡ ಅವೆಲ್ಲಾ ನಿರರ್ಥಕ ಎಂಬAತಾಗಿವೆ.

(ಮೊದಲ ಪುಟದಿಂದ) ಏಕೆಂದರೆ ಕಾಡಿನಲ್ಲಿ ಕಾಡಾನೆಗಳಿಗೆ ಬೇಕಾದಂತಹ ಆಹಾರದ ಗಿಡ ಮರಗಳಾದ ಹಲಸು, ಮಾವು, ಬಿದಿರು, ಬೈನೇ ಮೊದಲಾದ ಮರಗಳ ಬದಲಾಗಿ ನೀಲಗಿರಿ, ಅಕೇಶಿಯಾ ಮರಗಳನ್ನು

ಬೆಳೆಸಿದ್ದು ಇಂತಹ ಮಾನವ ಆನೆ ಸಂಘರ್ಷ ಹೆಚ್ಚಾಗಲು ಕಾರಣವಾಯಿತು.

ಆದ್ದರಿಂದ ಕಾಡಿನಲ್ಲಿ ಕಾಡಾನೆಗಳಿಗೆ ಬೇಕಾದ ಆಹಾರದ ಮೂಲಗಳನ್ನು ಬೆಳೆಸುವಲ್ಲಿ ಎಡವಿರುವ ಇಲಾಖೆಯ ಇಂತಹ ಎಡವಟ್ಟಿನ ಯೋಜನೆಗಳೇ ಕಾಡಂಚಿನಲ್ಲಿ ನಿತ್ಯವೂ ಇಂದು ನಾವು ನೋಡುತ್ತಿರುವ ಬೆಳೆ ನಷ್ಟ ಹಾಗೂ ಪ್ರಾಣಿ ಹಾಗೂ ಮಾನವ ಜೀವ ಹಾನಿಗಳಿಗೆ ಕಾರಣವಾಗಿದೆ.

ಹಾಗಾಗಿ ಇನ್ನಾದರೂ ಅರಣ್ಯ ಹಾಗೂ ಜೀವ ವೈವಿಧ್ಯ ಪರಿಸರ ಇಲಾಖೆಗಳು ಹವಾನಿಯಂತ್ರಿತ ಕೊಠಡಿಗಳಿಂದ ರೈತರಲ್ಲಿಗೆ ಬಂದು ಅವರ ಸಲಹೆ ಪಡೆದು ಪೂರಕವಾದ ಯೋಜನೆಗಳನ್ನು ಯೋಜಿಸುವಲ್ಲಿ ಯೋಚಿಸಬೇಕಾದ ತುರ್ತು ಅನಿವಾ ರ್ಯತೆ ಇದೆ.

-ಕೆ.ಎಸ್.ಮೂರ್ತಿ