ಮಡಿಕೇರಿ, ಏ. ೧೬: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಹಿಳಾ ಲೇಖಕಿ ಬರೆದ ಉತ್ತಮ ಕೃತಿಗೆ ನೀಡಲಾಗುವ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಯನ್ನು ಮೂರ್ನಾಡಿನ ಕೆ.ಜಿ. ರಮ್ಯ ರಚಿಸಿದ ‘ದಾಹಗಳ ಮೈ ಸವರುತ್ತಾ’ ಕವನ ಸಂಕಲನ ಪಡೆದುಕೊಂಡಿದೆ ಎಂದು ಕ.ಸಾ.ಪ. ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಧ್ಯಾಪಕಿಯಾಗಿರುವ ಕೆ.ಜಿ ರಮ್ಯಾ ಹಲವಾರು ಕವಿತೆಗಳನ್ನು ಕವಿಗೋಷ್ಠಿಗಳಲ್ಲಿ ವಾಚಿಸಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳಿಸಿದ್ದಾರೆ. ಇದುವರೆಗೆ ೧೯ ಲೇಖಕಿಯರು ಈ ಪ್ರಶಸ್ತಿ ಪಡೆದುಕೊಂಡಿದ್ದು ಗೌರಮ್ಮ ಅವರ ಪುತ್ರ ಬಿ.ಜಿ. ವಸಂತ್ ದತ್ತಿ ಸ್ಥಾಪಿಸಿದ್ದಾರೆ. ಪ್ರಶಸ್ತಿಗೆ ೯ ಲೇಖಕಿಯರು ತಮ್ಮ ಕೃತಿ ಸಲ್ಲಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.