ಗೋಣಿಕೊಪ್ಪಲು, ಏ.೧೬: ದೈವವನ್ನು ಪೊಲೀಸ್ ಠಾಣೆಗೆ ಬರ ಮಾಡಿಕೊಂಡು ಫಲಾಹಾರ ಆತಿಥ್ಯ ನೀಡಿ ಪ್ರಾಯಶ್ಚಿತಕ್ಕೆ ಪ್ರಾರ್ಥನೆ ಸಲ್ಲಿಸಲಾಯಿತು.!
ಇಂತಹ ವಿಶೇಷ ಆಚರಣೆ ನಡೆದಿರುವುದು ದಕ್ಷಿಣ ಕೊಡಗಿನ ಹುದಿಕೇರಿ ಗ್ರಾಮದಲ್ಲಿ. ಬಯವಂಡ ಮತ್ತು ದಡ್ಡೇರ ಕುಟುಂಬ ತಕ್ಕರಾಗಿ ಆಚರಣೆಯಾಗುವ ಕಲ್ಯಾಟಜ್ಜಪ್ಪ ತೆರೆ ಮಹೋತ್ಸವ ಸಂದರ್ಭ ದೈವ ಪೊಲೀಸ್ ಠಾಣೆಯತ್ತ ತೆರಳಿ ಪೊಲೀಸರ ಆತಿಥ್ಯ ಪಡೆಯುತ್ತದೆ. ಗ್ರಾಮದಲ್ಲಿ ಹಿಂದೊಮ್ಮೆ ಹಬ್ಬದ ದಿನ ದೈವದ ಮೇಲೆಯೇ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿದ್ದ ತಪ್ಪಿಗೆ ಪ್ರಾಯಶ್ಚಿತವಾಗಿ ಈ ರೀತಿ ಆಚರಣೆ ನಡೆಸಿಕೊಂಡು ಬರಲಾಗುತ್ತಿದೆ. ಹಬ್ಬದ ದಿನ ಅಜ್ಜಪ್ಪ ತೆರೆ ನೇರವಾಗಿ ಪೊಲೀಸ್ ಠಾಣೆಗೆ ಊರಿ ನವರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಆಗಮಿಸಿತು. ಠಾಣೆಗೆ ಆಗಮಿಸಿದ ದೈವವನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಫಲಾಹಾರ ನೀಡಲಾಯಿತು. ಈ ಆಚರಣೆ ಈಗಲೂ ಮುಂದುವರೆದಿದೆ. ಕೊಡವರ ಹೊಸವರ್ಷ ಎಡಮ್ಯಾರ್ ಒಂದು ಆಚರಣೆಯ ದಿನದಂದು ಈ ಆಚರಣೆ ನಡೆಯುವುದು ವಾಡಿಕೆ. ಹುದಿಕೇರಿ ಪೊಲೀಸ್ ಉಪಠಾಣೆಯ ಆತಿಥ್ಯ ಸ್ವೀಕರಿಸಿ ಸಿಬ್ಬಂದಿಗೆ ಆಶೀರ್ವದಿಸಿತು.
ಯಾಕಾಗಿ ಆಚರಣೆ?
ಹಲವು ವರ್ಷಗಳ ಹಿಂದೆ ತೆರೆ ಕಟ್ಟುವ ದಿನ ಅನುಮತಿ ಇಲ್ಲದ ಸಮಯದಲ್ಲಿ ಮದ್ಯ ಬಳಕೆ ಮಾಡಲಾಗಿತ್ತು ಎಂಬ ಆರೋಪದಡಿ ಪೊಲೀಸರು ತೆರೆ ಕಟ್ಟಿದ ದೈವ ಸೇರಿದಂತೆ ಭಾಗಿಯಾಗಿದ್ದವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಜೈಲಿನಲ್ಲಿ ಕೂರಿಸಿದ್ದರಂತೆ. ಅಲ್ಲಿ ದೈವ ತೆರೆ ಮೂಲಕ ದರ್ಶನ ನೀಡಿತ್ತು. ನಂತರ ಜೈಲಿನಿಂದ ಬಿಡುಗಡೆಯನ್ನೂ ಮಾಡಲಾಗಿತ್ತು. ಈ ಸಂದರ್ಭ ತನ್ನನ್ನು ಪ್ರತಿವರ್ಷ ಸತ್ಕರಿಸುವ ಮೂಲಕ ಪ್ರಾಯಶ್ಚಿತ ಮಾಡಿಕೊಳ್ಳುವಂತೆ ದೈವ ಸೂಚಿಸಿತ್ತು. ಇದೇ ಹಿನ್ನೆಲೆಯಲ್ಲಿ ಈಗಲೂ ಆಚರಣೆ ಮುಂದುವರೆಯುತ್ತಿದೆ.