ಮಡಿಕೇರಿ, ಏ. ೧೫: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ನೀಡದ ಕಾಂಗ್ರೆಸ್ ಪಕ್ಷದವರಿಗೆ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ಯಾವದೇ ಹಕ್ಕಿಲ್ಲವೆಂದು ಜಿಲ್ಲಾ ಬಿಜೆಪಿ ಪ್ರತಿಪಾದಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ವಕ್ತಾರ ತಳೂರು ಕಿಶೋರ್ ಕುಮಾರ್, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡಲಿದೆ ಎಂದು ಕಾಂಗ್ರೆಸ್ ಪಕ್ಷದವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಯಾವದೇ ಕಾರಣಕ್ಕೂ ಬದಲಾವಣೆ ಮಾಡುವದಿಲ್ಲ, ಮಾಡುವ ಹಕ್ಕು ಯಾರಿಗೂ ಇಲ್ಲ. ಅಂಬೇಡ್ಕರ್ ಅವರಿಗೆ ಗೌರವ ನೀಡದೆ ಎರಡು ಬಾರಿ ಚುನಾವಣೆಯಲ್ಲಿ ಅವರನ್ನು ಸೋಲಿಸಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಅವರ ಬಗ್ಗೆ ಮಾತನಾಡುವ ಯಾವದೇ ನೈತಿಕ ಹಕ್ಕು ಕಾಂಗ್ರೆಸ್ಸಿಗರಿಗಿಲ್ಲವೆAದು ಹೇಳಿದರು.

ತಾ.೧೮ರಿಂದ ಕಾರ್ಯಕರ್ತರು ಪ್ರತಿ ಮನೆ ಮನೆಗಳಿಗೆ ತೆರಳಿ ಬಿಜೆಪಿ ಸರಕಾರದ ಜನಪರ ಯೋಜನೆಗಳ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡಲಿದ್ದಾರೆ. ಮೋದಿ ನಾಯಕತ್ವಕ್ಕೆ ಜನತೆ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮತ್ತೋರ್ವ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ಮಾತನಾಡಿ; ಅಂಬೇಡ್ಕರ್ ಅವರು ರಚಿಸಿದಂತಹ ಸಂವಿಧಾನಕ್ಕೆ ೬೨ ಬಾರಿ ತಿದ್ದುಪಡಿ ಮಾಡಿದವರು ಯಾರು ಎಂದು ಪ್ರಶ್ನಿಸಿದರಲ್ಲದೆ, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಪ್ರಜೆಗಳ ಸ್ವಾತಂತ್ರö್ಯಯವನ್ನು ಕಸಿದುಕೊಂಡ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಇದೀಗ ಜನತೆಯ ಮುಂದೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರೈತರ ಕಿಸಾನ್ ಸಮ್ಮಾನ್ ಯೋಜನೆ, ವಿದ್ಯಾ ನಿಧಿ ಯೋಜನೆ ಸೇರಿದಂತೆ ಕೇಂದ್ರ ಸರಕಾರ ಜಾರಿಗೆ ತಂದಿದ್ದ ಎಲ್ಲ ಯೋಜನೆಗಳನ್ನು ರದ್ದುಗೊಳಿಸಿದೆ. ಇದು ಖಂಡನೀಯ; ಜಿಲ್ಲೆಯಲ್ಲೂ ಕೂಡ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಅನುದಾನದಲ್ಲಿ ಕಾಮಗಾರಿಗಳು ಆಗುತ್ತಿದ್ದು, ಅವುಗಳನ್ನು ತಮ್ಮದೆಂದು ಈಗಿನ ಕಾಂಗ್ರೆಸ್ ಶಾಸಕರು ಹೇಳಿಕೊಳ್ಳುತ್ತಿರುವದು ನಾಚಿಕೆಗೇಡಿನ ಸಂಗತಿ. ಈ ಬಗ್ಗೆ ಹೊರಡಿಸಿರುವ ಶ್ವೇತ ಪತ್ರ ಕೂಡ ಬೋಗಸ್ ಆಗಿದೆ. ಈ ಕಾಮಗಾರಿಗಳ ಬಗ್ಗೆ ಹಿಂದಿನ ಶಾಸಕರು ಸ್ಪಷ್ಟನೆ ಕೂಡ ನೀಡಿದ್ದಾರೆ ಎಂದು ಹೇಳಿದರು.

ತಲುಪದ ಗ್ಯಾರಂಟಿ

ಕಾAಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಜನ ಸಾಮಾನ್ಯರನ್ನು ತಲಪಿಲ್ಲ, ಗ್ಯಾರಂಟಿ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ ಅವರು; ಇದೀಗ ಕಾಂಗ್ರೆಸ್ ವಕ್ತಾರರು ಗಿರಿಜನರ ಬಗ್ಗೆ ಮಾತನಾಡುತ್ತಿದ್ದಾರೆ. ಗಿರಿಜನರ ಅಭಿವೃದ್ಧಿಗೆ ಮೀಸಲಾಗಿಟ್ಟಿದ್ದ ಹಣವನ್ನು ಕಾನೂನು ಬಾಹಿರವಾಗಿ ಇತರ ಯೋಜನೆಗೆ ಬಳಸಿಕೊಂಡು ಅನ್ಯಾಯ ಮಾಡಿದ್ದಾರೆ. ಗಿರಿಜನರು ಬಿಜೆಪಿಯಿಂದ ಹೊರತಾಗಿಲ್ಲ, ಜಿಲ್ಲೆಯಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆಯೂರಿದೆ. ಇದೀಗ ಗಿರಿಜನರಿಗೆ ಆಮಿಷವೊಡ್ಡುತ್ತಿರುವದು ಗಮನಕ್ಕೆ ಬಂದಿದೆ, ಕಾಂಗ್ರೆಸ್‌ನ ಈ ಕೆಟ್ಟ ಚಾಳಿಗೆ ತಡೆಯೊಡ್ಡಲಾಗುವದೆಂದು ಹೇಳಿದರು.

ಗೋಷ್ಠಿಯಲ್ಲಿ ವಕ್ತಾರ ಬಿ.ಕೆ. ಅರುಣ್‌ಕುಮಾರ್, ಜಿಲ್ಲಾ ಉಪಾಧ್ಯಕ್ಷ ಮನು ಮಂಜುನಾಥ್, ಮಡಿಕೇರಿ ನಗರ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಮಣಿ ಇದ್ದರು.