ಕೂಡಿಗೆ, ಏ. ೧೪: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ನಡೆದ ಗ್ರಾಮಮಟ್ಟದ ಪಂದ್ಯಾವಳಿಯಲ್ಲಿ ಜೌಡಮ್ಮ ಟೀಂ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು.

ದ್ವಿತೀಯ ಸ್ಥಾನವನ್ನು ಪಕ್ಷಿ ಫ್ರೆಂಡ್ಸ್, ತೃತೀಯ ಸ್ಥಾನವನ್ನು ಬಿ.ಆರ್. ಫ್ರೆಂಡ್ಸ್ ಪಡೆಯಿತು. ಕ್ರೀಡಾಕೂಟ ಉದ್ಘಾಟನೆಯನ್ನು ಕೂಡು ಮಂಗಳೂರು ಗ್ರಾಮ ಪಂಚಾಯತಿ ಸದಸ್ಯೆ ಫಿಲೋಮಿನಾ ನೆರವೇರಿಸಿ ಮಾತಾಡುತ್ತಾ ಗ್ರಾಮಾಂತರ ಪ್ರದೇಶಗಳಲ್ಲಿ ಕ್ರೀಡಾಕೂಟಗಳು ನಡೆಯುವುದರಿಂದ ಯುವ ಜನಾಂಗ ಸಂಘಟಿತರಾಗಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಪೂರಕವಾಗುವುದು ಎಂದರು.

ಸಹಕಾರ ಸಂಘದ ಮಾಜಿ ನಿರ್ದೇಶಕ ಕೆ.ಕೆ ನಾಗರಾಜಶೆಟ್ಟಿ ಮಾತನಾಡಿ, ಯುವಕರ ಆರೋಗ್ಯ ಮತ್ತು ಸರ್ವತೋಮುಖ ಬೆಳವ ಣಿಗೆಗೆ ಕ್ರೀಡೆ ಸಹಕಾರಿ, ಜೊತೆಗೆ ಎಲ್ಲರೂ ಒಗ್ಗೂಡುವುದರಿಂದ ಗ್ರಾಮದ ಅಭಿವೃದ್ಧಿ ಬಗ್ಗೆ ಚಿಂತನೆ ಹರಿಸಲು ಸಹಕಾರಿಯಾಗುವುದು ಎಂದರು.

ಈ ಸಂದರ್ಭದಲ್ಲಿ ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯೆ ಗೌರಮ್ಮ, ಮಾಜಿ ಸದಸ್ಯ ಚಂದ್ರಶೇಖರ್, ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಪಟು ಸೋಮಶೇಖರ್, ಗ್ರಾಮ ಪ್ರಮುಖರಾದ ಪುಟ್ಟೇಗೌಡ, ಶ್ರೀನಿವಾಸ್, ರವಿ, ಕೃಷ್ಣಪ್ಪ ಸೇರಿದಂತೆ ಗ್ರಾಮಸ್ಥರು ಕ್ರೀಡಾಪಟುಗಳು ಹಾಜರಿದ್ದರು. ವಿಜೇತ ತಂಡಕ್ಕೆ ಬಹುಮಾನವನ್ನು ಚಂದ್ರಶೇಖರ್ ವಿತರಣೆ ಮಾಡಿದರು. ಕ್ರೀಡಾ ಕೂಟದಲ್ಲಿ ೬ ತಂಡಗಳು ಭಾಗವಹಿಸಿದ್ದವು.