ಮಡಿಕೇರಿ, ಏ. ೧೩: ಸರಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಕೃಷಿ ಮಾಡುತ್ತಿರುವವರಿಗೆ ಗುತ್ತಿಗೆ ಆಧಾರದಲ್ಲಿ ಸರಕಾರಿ ಜಾಗವನ್ನು ನೀಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಏ.೧೫ರಂದು ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭೂ-ಗುತ್ತಿಗೆ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆ, ಆದಿವಾಸಿ, ಮೂಲ ನಿವಾಸಿ ಸಂಘಟನೆಯ ಪ್ರಮುಖರು ಹಾಗೂ ಪದಾಧಿಕಾರಿಗಳು ಒಳಗೊಂಡು ಕೊಡಗಿನ ವೀರಾಜಪೇಟೆ, ಸೋಮವಾರಪೇಟೆ, ಕುಶಾಲನಗರ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ ಏ.೧೫ ರಂದು ಬೆಳಿಗ್ಗೆ ೧೦.೩೦ ಗಂಟೆಯಿAದ ಮಧ್ಯಾಹ್ನ ೧ ಗಂಟೆಯವರೆಗೆ ಏಕಕಾಲದಲ್ಲಿ ಪ್ರತಿಭಟನೆ ನಡೆಸಿ, ಸರಕಾರ ಹೊರಡಿಸಿರುವ ಸುತ್ತೋಲೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಲಾಗುವುದೆಂದರು.

ರಾಜ್ಯ ಸರ್ಕಾರ ತರಾತುರಿಯಲ್ಲಿ ಕಾನೂನಿಗೆ ತಿದ್ದುಪಡಿ ತಂದಿದ್ದು, ಕಲಂ ೯೪(ಇ)ಯನ್ನು ಹೊಸದಾಗಿ ಸೇರಿಸಲಾಗಿದೆ. ಇದರಿಂದ ಸರಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಕೃಷಿ ಮಾಡುತ್ತಿರುವವರಿಗೆ ಅಂತಹ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಕರ್ನಾಟಕ ಭೂಕಂದಾಯ ಅಧಿನಿಯಮ ೧೯೬೪ಕ್ಕೆ ತಿದ್ದುಪಡಿ ತಂದಿರುವುದು ಸರಿಯಲ್ಲ ಎಂದರು.

ಸಣ್ಣ ಬೆಳೆಗಾರರು ೨/೩ ಎಕರೆ ಕೃಷಿ ಮಾಡಿಕೊಂಡು ಬದುಕು ಸಾಗಿಸುತ್ತಿರುವವರಿಗೂ ತಲಾ ೫ ಎಕರೆ ಸರ್ಕಾರಿ ಭೂಮಿಯನ್ನ ಹಂಚಬೇಕು, ಹೊಳೆಕೆರೆ, ಪೈಸಾರಿ, ಅರಣ್ಯದಂಚಿನಲ್ಲಿ ವಾಸ ಮಾಡುವ ಬಡವರಿಗೆ ತಕ್ಷಣ ಬದಲಿ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.