ಕಣಿವೆ, ಏ. ೧೨: ಪ್ರಕೃತಿಯ ಮೇಲೆ ಮನುಷ್ಯ ಸತತವಾಗಿ ಮಾಡುತ್ತಲೇ ಬಂದಿರುವ ವಿಕೃತಿಯಿಂದಾಗಿ ಹವಾಮಾನಗಳಲ್ಲಿ ತೀವ್ರತರದ ಬದಲಾವಣೆಗಳು ಘಟಿಸುತ್ತಿವೆ. ಏಕೋ ಏನೋ ವರುಣ ಮುನಿಸಿಕೊಂಡಿದ್ದಾನೆ. ಸಕಾಲಿಕವಾದ ಮಳೆ ಸುರಿಯುವುದಿರಲಿ, ಅಕಾಲಿಕ ಮಳೆಯೂ ಬರುತ್ತಿಲ್ಲ. ಹಾಗಾಗಿ ಭೂಮಿಯ ತಾಪಮಾನ ಹಿಂದೆAದಿಗಿAತಲೂ ಹೆಚ್ಚಾಗುತ್ತಿದೆ.

ಬೆಳಿಗ್ಗೆ ೯ ಗಂಟೆಯಾದರೆ ಸಾಕು ನೆತ್ತಿಯನ್ನು ಸುಡುವ ಸೂರ್ಯನ ಪ್ರತಾಪ ಸಂಜೆ ೬ ಗಂಟೆಯ ತನಕವೂ ಮುಂದುವರೆದಿದೆ ಹೊರತು ತಣ್ಣಗಾಗುತ್ತಲೇ ಇಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಭವಿಷ್ಯದಲ್ಲಿ ಭೂಮಿಯ ಗತಿಯೇನು? ನಿಸರ್ಗ ಕೊಟ್ಟ ಎಲ್ಲಾ ಸಂಪತ್ತನ್ನು ಮನುಷ್ಯರಾದ ನಾವು ಮನಬಂದAತೆ ಲೂಟಿ ಮಾಡಿಬಿಟ್ಟಿದ್ದೇವೆ. ಅಂದರೆ ಅರಣ್ಯ ಸಂಪತ್ತನ್ನು ನಾಶಮಾಡಿದ್ದೇವೆ. ಗಾಳಿ ಹಾಗೂ ನೀರನ್ನು ಬೇಕಾ ಬಿಟ್ಟಿಯಾಗಿ ಮಲಿನಗೊಳಿಸಿದ್ದೇವೆ. ತಾಯಿ ಸಮಾನ ಭೂಮಿಯನ್ನು ಇನ್ನಿಲ್ಲದಂತೆ ದುರ್ಬಳಕೆ ಮಾಡಿಬಿಟ್ಟಿದ್ದೇವೆ.

ಒಂದರ್ಥದಲ್ಲಿ ನಾವುಗಳು ನಮ್ಮ ಜೀವನ ಶೈಲಿಯ ತೆವಲಿಗೆ ಜೀವವೈವಿಧ್ಯಗಳ ಬದುಕನ್ನೇ ಕಿತ್ತುಕೊಳ್ಳುತ್ತಿದ್ದೇವೆ. ಇಷ್ಟೆಲ್ಲಾ ಅನಾಹುತಗಳ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದರೂ ಕೂಡ ನಮಗೆ ಬುದ್ಧಿ ಬಂದಿಲ್ಲ. ಕನಿಷ್ಟ ನಮ್ಮ ವರ್ತನೆಯೂ ಬದಲಾಗಿಲ್ಲ. ಆ ಲಕ್ಷಣವೇ ಕಾಣುತ್ತಿಲ್ಲ.

ಹಾಳಾಗುತ್ತಿರುವ ಓಜೋನ್ ಪದರ

ಕಳೆದ ಒಂದೂವರೆ ವರ್ಷಗಳಿಂದ ಬರಬೇಕಾದ ಮಳೆ ಬರುತ್ತಲೇ ಇಲ್ಲ. ಭೂಮಿಯನ್ನು ಗುಬ್ಬಚ್ಚಿಗೂಡಿನಂತೆ ರಕ್ಷಿಸುತ್ತಿದ್ದ ಓಜೋನ್ ಪದರ ಹಾಳಾಗಿರುವುದು ತಾಪಮಾನ ಹೆಚ್ಚಾಗಲು ಕಾರಣವಾಗಿದೆ. ಸೂರ್ಯನ ಮೇಲ್ಮೆöÊನಲ್ಲಿ ಅಂದಾಜು ೫೫೦೦ ರಿಂದ ೬೦೦೦ ಡಿಗ್ರಿ ತಾಪಮಾನವಿರುತ್ತದೆ. ಇಷ್ಟೊಂದು ತೀವ್ರತೆಯ ಕಿರಣಗಳನ್ನು ತಡೆದುಕೊಳ್ಳುವ ಶಕ್ತಿ ಭೂಮಿಗೂ ಇಲ್ಲ. ನಮಗೂ ಇಲ್ಲ. ಭೂಮಿಯಿಂದ ಸುಮಾರು ೧೫ ರಿಂದ ೩೫ ಕಿಲೋಮೀಟರ್ ವ್ಯಾಪ್ತಿಯಲ್ಲಿ ಓಜೋನ್ ಪದರ ನಿರ್ಮಾಣಗೊಂಡಿರುತ್ತದೆ.

ಇಲ್ಲಿ ಏರೋಸಾಲ್ಸ್ ಗಳು, ಸಾರಜನಕ, ಆಮ್ಲಜನಕ, ಸಣ್ಣ ಧೂಳಿನ ಕಣಗಳು, ಉಪಯುಕ್ತ ಅನಿಲಗಳು ಶೇಖರವಾಗಿರುತ್ತವೆ. ಈ ಓಜೋನ್ ಪದರದಲ್ಲಿರುವ ಏರೋಸಾಲ್ಸ್ಗಳು ಹಾಗೂ

(ಮೊದಲ ಪುಟದಿಂದ) ಧೂಳಿನ ಕಣಗಳು ಶೇ.೩೨ ಪ್ರತಿಶತ ಬೆಳಕಿನ ತೀವ್ರತೆಯನ್ನು ತಡೆಗಟ್ಟುತ್ತವೆ. ಹಾಗೆ ಸಾರಜನಕ, ಆಮ್ಲಜನಕ, ಗಾಳಿಯ ಜೊತೆ ಸಂಚರಿಸುವ ಸಣ್ಣ ಸಣ್ಣ ಕಣಗಳು ಹಾಗೂ ತೇವಾಂಶವು ಶೇ.೫ ರಿಂದ ೮ ರಷ್ಟು ಬೆಳಕಿನ ತೀವ್ರತೆಯನ್ನು ತಡೆಗಟ್ಟುತ್ತದೆ. ಈ ಕ್ರಿಯೆಯಿಂದ ತೀವ್ರವಾದ ಬೆಳಕು ಹಿಂದಕ್ಕೆ ಪ್ರತಿಫಲನವಾಗುತ್ತದೆ. ಜೊತೆಗೆ ಓಜೋನ್ ಪದರವು ಯು.ವಿ. ಬೆಳಕಿನ ವಿಕಿರಣವನ್ನು ಹೀರಿಕೊಂಡು ಭೂಮಿ ಮೇಲೆ ಉಸಿರಾಡುವ ಜೀವ ಸಂಕುಲವನ್ನು ಕಾಪಾಡುತ್ತದೆ. ಆದರೆ ಇಂದು ಓಜೋನ್ ಪದರ ಶೇ.೧೩ ರಷ್ಟು ಹಾಳಾಗಿದೆ. ಇದರಿಂದಾಗಿ ತೀವ್ರವಾದ ಬೆಳಕು ಭೂಮಿಗೆ ನೇರವಾಗಿ ಧಾಳಿ ಇಡುತ್ತಿದೆ. ಹೀಗಾಗಿಯೇ ನಾವು ಹಿಂದೆAದೂ ಕಾಣದ ತಾಪಮಾನವನ್ನು ಅನುಭವಿಸುತ್ತಿದ್ದೇವೆ.

ಓಜೋನ್ ಪದರದ ಹಾನಿಗೆ ಕಾರಣಗಳಿವು :

ಓಜೋನ್ ಪದರವನ್ನು ಹಾಳು ಮಾಡುತ್ತಿರುವ ಪ್ರಮುಖವಾದ ವಿಷ ಅನಿಲಗಳೆಂದರೆ ಕಾರ್ಬನ್ ಡೈ ಆಕ್ಸೈಡ್, ಮೀಥೇನ್, ನೈಟ್ರಸ್ ಆಕ್ಸೈಡ್, ಹೈಡ್ರೋಫ್ಲೋರೋ ಕಾರ್ಬನ್ಸ್, ಸಲ್ಫರ್ ಹೆಕ್ಸಾಫ್ಲೋರೈಡ್. ಈ ಅನಿಲಗಳು ಹೆಚ್ಚು ಹೆಚ್ಚು ಉತ್ಪತ್ತಿಯಾಗುತ್ತಿರುವುದು ವಾಹನಗಳ ಬಳಕೆಯಿಂದ, ಪ್ಲಾಸ್ಟಿಕ್ ಉತ್ಪತ್ತಿ ಮತ್ತು ಅದು ಕೊಳೆಯದೆ ಇರುವುದರಿಂದ ಹಾಗೂ ಪ್ಲಾಸ್ಟಿಕ್ ಸುಟ್ಟಾಗ ಬಿಡುಗಡೆಯಾಗುವ ಕಾರ್ಬನ್, ರಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳ ತಯಾರಿಕೆ ಮತ್ತು ಬಳಕೆಯಿಂದ ನೈಟ್ರಸ್ ಆಕ್ಸೈಡ್, ರೆಫ್ರಿಜರೇಟರ್‌ಗಳು, ಹವಾನಿಯಂತ್ರಣಗಳು, ಪೋಮ್‌ಗಳು ಇತ್ಯಾದಿಗಳಿಂದ ಹೊರಬರುತ್ತಿರುವ ಹೈಡ್ರೋಫ್ಲೋರೋ ಕಾರ್ಬನ್ಸ್ ಎಂಬುದು ಭೂ ವಿಜ್ಞಾನಿಗಳ ವಾದ.

ಹಾಗಾಗಿ ಜಾಗತಿಕ ತಾಪಮಾನ ತಡೆಯದಿದ್ದಲ್ಲಿ ಹಿಮಾಲಯದ ಹಿಮಗಡ್ಡೆಗಳು ಕರಗಿ ನೀರಾಗಿ ಸಮುದ್ರ ಸೇರುತ್ತವೆ. ಸಮುದ್ರ ಮಟ್ಟ ಹೆಚ್ಚಾಗುತ್ತಿದೆ. ಹೆಚ್ಚಿನ ನೀರನ್ನು ತಡೆದುಕೊಳ್ಳುವ ಶಕ್ತಿ ಸಮುದ್ರಕ್ಕಿಲ್ಲದ ಕಾರಣ ದಕ್ಷಿಣ ಭಾರತದ ಶೇ.೩೫ ರಿಂದ ೪೦ ಪ್ರತಿಶತ ಭೂ ಪ್ರದೇಶ ಜಲಾವೃತಗೊಳ್ಳುವ ಅಪಾಯವೂ ಇದೆ ಎನ್ನುವ ಭೂ ವಿಜ್ಞಾನಿಗಳು, ಪ್ರಕೃತಿ ಮುನಿದರೆ ಹೇಗೆಲ್ಲಾ ಏನೆಲ್ಲಾ ಅಪಾಯ ಅವಘಡಗಳು ಸಂಭವಿಸುತ್ತವೆ ಎಂಬುದಕ್ಕೆ ಕೊಡಗು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳ ಹಿಂದೆ ಘಟಿಸಿದ ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಉದಾಹರಣೆಯನ್ನು ಕೊಟ್ಟಿದ್ದಾರೆ.

ಬತ್ತಿದ ಜೀವ ಸಂಕುಲೆ ಕಾವೇರಿ.....

ಲೋಕಪಾವನೆ ಕಾವೇರಿಯನ್ನು ನಾವು ತಲಕಾವೇರಿಯಲ್ಲಿ ದೇವರಂತೆ ಪೂಜಿಸುತ್ತೇವೆ. ಆದರೆ ನದಿ ಹರಿಯುವ ಅಷ್ಟೂ ತೀರವನ್ನು ನಾವು ಕಲುಷಿತಗೊಳಿಸಿದ್ದೇವೆ. ನದಿ ತೀರದ ಪೇಟೆ, ಪಟ್ಟಣ, ನಗರ ಪ್ರದೇಶಗಳ ವಿಷಕಾರಿ ತ್ಯಾಜ್ಯಗಳನ್ನೆಲ್ಲಾ ಹರಿಯಬಿಟ್ಟ ಮತ್ತದೇ ನದಿಗೆ ನಾವುಗಳು ಕಾವೇರಮ್ಮಾ ಕಾಪಾಡಮ್ಮಾ ಎಂದು ಕರಮುಗಿದು ಪ್ರಾರ್ಥಿಸುತ್ತಿದ್ದೇವೆ.ಇದೆಂಥಾ ವ್ಯತಿರಿಕ್ತ ಧೋರಣೆ ?

ಹಾಗಂತಾ ನಾವು ವಾಸ್ತವವನ್ನು ನಾವು ಅರ್ಥ ಮಾಡಿಕೊಂಡೆವಾ ?

ನದಿ ಸ್ವಚ್ಛತೆ ಹಾಗೂ ರಕ್ಷಣೆ ಹೆಸರಿನಲ್ಲಿ ಕೋಟಿ ಕೋಟಿ ರೂಗಳನ್ನು ವಿನಿಯೋಗಿಸಿದರೂ ಕೂಡ ಕಾವೇರಿ ಶುದ್ದಳಾಗಲಿಲ್ಲ. ಸಕಾಲಿಕವಾದ ಮಳೆ ಬರದ ಕಾರಣ ಕಾವೇರಿ ನದಿಯ ಚಿತ್ರಣವೇ ಬದಲಾಗಿ ಹೋಗಿದೆ. ಅಂದರೆ ಕಾವು ಏರಿ ಹರಿದ ಕಾವೇರಿ ನದಿಯಲ್ಲಿ ಈಗ ಹನಿ ನೀರಿಗೂ ತತ್ವಾರ ಬಂದೊದಗಿದೆ. ಅರ್ಥಾತ್ ಕುಶಾಲನಗರ ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ಕಾವೇರಿ ನದಿಯ ಒಡಲು ಸಂಪೂರ್ಣ ಬರಿದಾಗಿದ್ದು ಒಣಗಿದ ಮರುಭೂಮಿಯಂತೆ ಗೋಚರಿಸುತ್ತಿದೆ. ಸೂರ್ಯನ ಪ್ರತಾಪಕ್ಕೆ ನದಿಯೊಡಲಲ್ಲಿ ಇದ್ದಂತಹ ಜೀವ ಕೋಟಿಗಳ ಮಾರಣ ಹೋಮವಾಗಿದೆ. ಇದು ನದಿ ಹಾಗೂ ಪರಿಸರ ಪ್ರೇಮಿಗಳಿಗೆ ಒಂಥರ ನೋವುಂಟು ಮಾಡುತ್ತಿದೆ.

ಹಾಗಾಗಿ ರೋಧಿಸುತ್ತಿರುವ ಪ್ರಕೃತಿಯ ಅಳಲನ್ನು ಆಳುವವರು ಇನ್ನಾದರೂ ಅರ್ಥಮಾಡಿಕೊಂಡು ಪೂರಕವಾದ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನದಿ ಹಾಗೂ ಪರಿಸರವನ್ನು ಜೋಪಾನ ಮಾಡುವಂತಹ ಪ್ರತಿಜ್ಞೆ ತೊಡಬೇಕಿದೆ.

-ವಿಶೇಷ ಲೇಖನ : ಕೆ.ಎಸ್. ಮೂರ್ತಿ