ಸಿದ್ದಾಪುರ, ಏ. ೧೨: ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳ ಹಿಂಡಿನ ಪೈಕಿ ಗುಂಪಿನಿAದ ಬೇರ್ಪಟ್ಟು ತಪ್ಪಿಸಿಕೊಂಡಿದ್ದ ೫ ತಿಂಗಳ ಗಂಡು ಮರಿಯಾನೆಯನ್ನು ರಕ್ಷಿಸಿ ಇದೀಗ ದುಬಾರೆ ಸಾಕಾನೆ ಶಿಬಿರದಲ್ಲಿ ಆರೈಕೆ ಮಾಡಲಾಗುತ್ತಿದೆ.
ಅರಣ್ಯ ಇಲಾಖೆ ಕಳೆದ ೨೫ ದಿನಗಳಿಂದ ತಾಯಿ ಆನೆಯನ್ನು ಹುಡುಕಿ ಅದರೊಂದಿಗೆ ಬಿಡಲು ಪ್ರಯತ್ನಿಸಿದರೂ ಫಲ ನೀಡಲಿಲ್ಲ. ಬೇರೆ ಆನೆಗಳ ಗುಂಪಿಗೆ ಸೇರಿಸುವ ಪ್ರಯತ್ನವೂ ಕೈಗೂಡಲಿಲ್ಲ. ಅರಣ್ಯದಲ್ಲಿ ಓಡಾಡಿಯೂ ತಾಯಿ ಪತ್ತೆಯಾಗದೆ ಮರಳಿ ನಾಡಿಗೆ ಬಂದು ಅಸ್ವಸ್ಥಗೊಂಡಿದ್ದ ಮರಿಯಾನೆಯನ್ನು ಅರಣ್ಯ ಇಲಾಖೆ ಉಪಚರಿಸುತ್ತಿದೆ.
ಅವರೆಗುಂದ ಬಸವನಹಳ್ಳಿಯ ಸುಶೀಲ ಎಂಬವರ ಮನೆಯ ಬಳಿ ನಿತ್ರಾಣ ಸ್ಥಿತಿಯಲ್ಲಿದ್ದ ಆನೆಯನ್ನು ದುಬಾರೆ ವಲಯದ ಆರ್ಎಫ್ಓ ರತನ್ ಕುಮಾರ್ ಹಾಗೂ ವನ್ಯಜೀವಿ ವೈದ್ಯ ಡಾ. ಚಿಟ್ಯಪ್ಪ ಅವರನ್ನು ಸ್ಥಳಕ್ಕೆ ತೆರಳಿ ಸೂಕ್ತ ಚಿಕಿತ್ಸೆ ನೀಡಿ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡ ಮರಿಯಾನೆಯನ್ನ ವಾಹನದಲ್ಲಿ ದುಬಾರೆ ಶಿಬಿರಕ್ಕೆ ಸ್ಥಳಾಂತರಿಸಲಾಯಿತು.
೨೫ ದಿನಗಳಿಂದ ಒಬ್ಬಂಟಿ
ಕಳೆದ ೨೫ ದಿನಗಳ ಹಿಂದೆ ತಾಯಿ ಆನೆಯಿಂದ ಬೇರ್ಪಟ್ಟ ನಂತರ ಕಾಫಿ ತೋಟದಲ್ಲಿ ಒಬ್ಬಂಟಿಯಾಗಿ ಕಿರುಚುತ್ತ ತನ್ನ ತಾಯಿಯನ್ನು ಹುಡುಕುತ್ತಿರುವ ದೃಶ್ಯ ಕಾರ್ಮಿಕರಿಗೆ ಕಂಡುಬAದಿತ್ತು. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ವೀರಾಜಪೇಟೆ, ತಿತಿಮತಿ ಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪರಿಶೀಲಿಸಿ ಮೂರು ವಿಭಾಗದ ೧೫ಕ್ಕೂ ಹೆಚ್ಚು ಸಿಬ್ಬಂದಿಗಳು ಬೀಟಿಕಾಡು, ಮಾಲ್ದಾರೆ, ಕರಡಿಗೋಡು, ಬಾಡಗಬಾಣಂಗಾಲ, ಹುಂಡಿ, ಮೈಲಾಪುರ ಸೇರಿದಂತೆ ಸುತ್ತಮುತ್ತಲ ಕಾಪಿ ತೋಟಗಳಲ್ಲಿ ತಾಯಿಯಾನೆಯ ಪತ್ತೆಗಾಗಿ ಹುಡುಕಾಟ ಪ್ರಾರಂಭಿಸಿದ್ದರು. ಆದರೆ, ಇದುವರೆಗೂ ತಾಯಿ ಆನೆಯ ಸುಳಿವು ಮಾತ್ರ ಲಭ್ಯವಾಗಿಲ್ಲ.
ಕಾಫಿ ತೋಟದಲ್ಲಿ ಕಂಡು ಬಂದ ಎರಡು ಗುಂಪು ಆನೆಗಳ ನಡುವೆ ಮರಿಆನೆಯನ್ನು ಸೇರಿಸಲು ಪ್ರಯತ್ನ ನಡೆಸಿದರೂ ಗುಂಪು ಆನೆಗಳು ಮರಿಯಾನೆಯನ್ನು ಸೇರಿಸಿಕೊಳ್ಳಲು ಹಿಂದೇಟು ಹಾಕಿದ ಹಿನ್ನೆಲೆ ನಂತರ ದುಬಾರೆ ಅರಣ್ಯಕ್ಕೆ ಬಿಡಲಾಗಿತ್ತು. ಮತ್ತೆ ತಾಯಿ ಆನೆಯನ್ನು ಹುಡುಕಿ ಬಂದ ಮರಿಯಾನೆ ಅವರೆಗುಂದ ಬಸವನಹಳ್ಳಿ ಮಾಲ್ದಾರೆ ಭಾಗದ ಕಾಫಿ ತೋಟಗಳಲ್ಲಿ ಕಾಣಿಸಿಕೊಂಡಿತ್ತು.
ಕಳೆದೆರಡು ದಿನಗಳಿಂದ ಬಸವನಹಳ್ಳಿ ಭಾಗದ ಮನೆ ಸಮೀಪದ ಕಾಫಿ ತೋಟಗಳಲ್ಲಿ ಕಾಣಿಸಿಕೊಂಡ ಮರಿಯಾನೆ ಇಂದು ಬೆಳಿಗ್ಗೆ ಸುಶೀಲ ಎಂಬವರ ಮನೆಯ ಬಳಿ ಅಸ್ವಸ್ಥಗೊಂಡು ಕುಸಿದು ಬಿದ್ದಿತ್ತು. ದುಬಾರೆ ವಲಯದ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ವನ್ಯಜೀವಿ ವೈದ್ಯರಾದ ಡಾ. ಚಿಟ್ಯಪ್ಪ ಆರೈಕೆ ಮಾಡಿದ ನಂತರ ಚೇತರಿಸಿಕೊಂಡ ಆನೆಮರಿಯನ್ನ ದುಬಾರೆ ಶಿಬಿರಕ್ಕೆ ರವಾನಿಸಲಾಯಿತು.
ಈ ಸಂದರ್ಭ ಉಪವಲಯ ಅರಣ್ಯ ಅಧಿಕಾರಿ ಮಂಜುನಾಥ್ ಗೂಳಿ, ಅರಣ್ಯ ರಕ್ಷಕ ಮಣಿಕಂಠ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.