ನಾಪೋಕ್ಲು, ಏ. ೧೧: ಹುಲ್ಲಿನ ಮೆದೆಗೆ ಬೆಂಕಿ ಬಿದ್ದು ಕಾಫಿ ತೋಟಕ್ಕೆ ವ್ಯಾಪಿಸಿದ ಪರಿಣಾಮ ಸುಮಾರು ೫೦ ಕಾಫಿ ಗಿಡ ಸುಟ್ಟು ನಷ್ಟಗೊಂಡ ಘಟನೆ ಸಮೀಪದ ಬೇತು ಗ್ರಾಮದಲ್ಲಿ ನಡೆದಿದೆ.

ಕೊಂಡೀರ ಪೂವಣ್ಣ (ಗಿರಿ) ಅವರಿಗೆ ಸೇರಿದ ಗದ್ದೆಯ ಹುಲ್ಲಿನ ರಾಶಿಗೆ ಬುಧವಾರ ಮಧ್ಯಾಹ್ನ ಬೆಂಕಿ ತಗಲಿದ್ದು, ಕ್ರಮೇಣ ಗದ್ದೆ ಉದ್ದಕ್ಕೂ ವ್ಯಾಪಿಸಿದ ಬೆಂಕಿ ಕಾಫಿ ತೋಟಕ್ಕೂ ಹಬ್ಬಿ ಸುಮಾರು ೫೦ ಕಾಫಿ ಗಿಡಗಳಷ್ಟು ಸುಟ್ಟು ಹೋಗಿವೆ. ಈ ಸಂದರ್ಭ ಗ್ರಾಮಸ್ಥರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿಶಾಮಕ ದಳದ ವಾಹನ ಗ್ರಾಮಕ್ಕೆ ಆಗಮಿಸಿದರೂ ಸ್ಥಳಕ್ಕೆ ತೆರಳಲಾಗದೆ ಮಕ್ಕಿ ಶ್ರೀ ಶಾಸ್ತವು ದೇವಾಲಯದ ಸಮೀಪ ನಿಲುಗಡೆಗೊಂಡಿತು. ಬಳಿಕ ಸಿಬ್ಬಂದಿ ಮಾತ್ರ ಘಟನಾ ಸ್ಥಳಕ್ಕೆ ತೆರಳಿ ಬಾಕಿ ಉಳಿದ ಬೆಂಕಿಯನ್ನು ನಂದಿಸಿದರು.