ಕೋವರ್ ಕೊಲ್ಲಿ ಇಂದ್ರೇಶ್
ಬೆಂಗಳೂರು, ಏ. ೧೨: ಮಾರ್ಚ್ ೧ ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಇಬ್ಬರು ಉಗ್ರರನ್ನು ಎನ್‌ಐಎ ಬಂಧಿಸಿದೆ.
ಬಾಂಬ್ ಸ್ಪೋಟಿಸಿ ನಾಪತ್ತೆಯಾದ ಭಯೋತ್ಪಾಧಕರನ್ನು ಪತ್ತೆಹಚ್ಚಲು ಕ್ರಮಕೈಗೊಂಡ ರಾಷ್ಟಿçÃಯ ತನಿಖಾ ದಳದ ಅಧಿಕಾರಿಗಳು ಬರೋಬ್ಬರಿ ೪೩ ದಿನಗಳ ಸತತ ಪ್ರಯತ್ನದ ನಂತರ ಶಂಕಿತರ ಹೆಡೆಮುರಿ ಕಟ್ಟಿದ ಅಧಿಕಾರಿಗಳಿಗೆ ಉಗ್ರರ ಸುಳಿವು ಸಿಕ್ಕಿದ್ದು ಹೇಗೆ ಅನ್ನೋದು ಭಾರೀ ಚರ್ಚೆಗೂ ಗ್ರಾಸವಾಗಿದೆ.
ಆರೋಪಿ ಬಾಂಬ್ ಸ್ಫೋಟಿಸಿದ ಬಳಿಕ ಬಟ್ಟೆ ಬದಲಾಯಿಸಿ ಹೋಗುವಾಗ ಟೋಪಿ ಎಸೆದು ಹೋಗಿದ್ದ. ಆ ಒಂದು ಟೋಪಿಯನ್ನು ಹಿಡಿದು ತನಿಖೆಗೆ ಇಳಿದಿದ್ದ ಎನ್‌ಐಎ ೭-೮ ತಂಡಗಳನ್ನು ರಚಿಸಿ ತೀವ್ರ ಹುಡುಕಾಟ ನಡೆಸಿತ್ತು. ದಿನಗಳೆದಂತೆ ಆರೋಪಿಗಳ ಸುಳಿವು ಅಸ್ಪಷ್ಟವಾಗುತ್ತ ಹೋಗಿತ್ತು.
ಟೋಪಿಯ ಸುಳಿವು
ಟೋಪಿ ಸುಳಿವಿನ ಮೇರೆಗೆ ತನಿಖಾ ತಂಡ, ಟೋಪಿ ಖರೀದಿಸಿದ್ದು ಚೆನ್ನೆöÊನ ಮಾಲ್‌ನಲ್ಲಿ ಅನ್ನೋದನ್ನು ಪತ್ತೆ ಮಾಡಿತ್ತು. ಮಾಲ್‌ನಲ್ಲಿ ಸಿಕ್ಕ ದೃಶ್ಯದಿಂದ ಮುಸಾವಿರ್ ಎಂಬ ಶಂಕಿತನ ಗುರುತು ಪತ್ತೆಯಾಗಿತ್ತಲ್ಲದೆ ಮಂಗಳೂರಿನ ಕುಕ್ಕರ್ ಬಾಂಬ್ ಸ್ಪೋಟ ಆರೋಪಿ ಶಾರಿಕ್ ಜೊತೆಗಿನ ಉಗ್ರರ ನಂಟಿನ ಬಗ್ಗೆ ಮಾಹಿತಿ ಸಿಕ್ಕಿತ್ತು. ಕರ್ನಾಟಕ, ಕೇರಳ, ತಮಿಳುನಾಡು ಪೊಲೀಸರಿಂದಲೂ ಮಾಹಿತಿ ಸಂಗ್ರಹ ಮಾಡಲಾಗಿತ್ತು. ಮತೀನ್ ನೀಡಿದ ಸೂಚನೆಯಂತೆ ಬಾಂಬ್ ಇಟ್ಟು ‘ಎಸ್ಕೇಪ್’ ಆಗಿದ್ದ ಬಾಂಬರ್ ಮುಸಾವಿರ್, ಬಿಎಂಟಿಸಿ ಬಸ್‌ನಲ್ಲಿ ಹೋಗಿ ಅಲ್ಲಿಂದ ತುಮಕೂರು, ಚಿತ್ರದುರ್ಗ, ಬಳ್ಳಾರಿ, ಕಲಬುರಗಿಗೆ ಹೋಗಿ ಆ ಬಳಿಕ ಪಶ್ಚಿಮ ಬಂಗಾಳ ಸೇರಿಕೊಂಡಿದ್ದ . ಇನ್ನೋರ್ವ ತಮಿಳುನಾಡು ಮಾರ್ಗದಿಂದ ಪಶ್ಚಿಮ ಬಂಗಾಳ ಸೇರಿಕೊಂಡಿದ್ದ. ಇಬ್ಬರೂ ಪರಸ್ಪರ ಸಂಪರ್ಕದಲ್ಲಿ ಇದ್ದರು. ಬಂಧಿತರಿಬ್ಬರೂ ವಿದೇಶಿ ಹ್ಯಾಂಡ್ಲರ್‌ನಿAದ ನಿರಂತರವಾಗಿ ಸೂಚನೆಗಳನ್ನು ಪಡೆಯುತ್ತಿದ್ದರು ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಬಂಧನಗಳು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಹರಡಿರುವ ‘ಸ್ಲೀಪರ್ ಸೆಲ್ ಮಾಡ್ಯೂಲ್’ ಅನ್ನು ಬಹಿರಂಗಪಡಿಸಿದೆ.
ಶಂಕಿತ ಉಗ್ರರ ಬಂಧನ ಬಳಿಕ ಪೂರ್ವ ಮಿಡ್ನಾಪುರ್ ಎಸ್‌ಪಿ ಸೌಮ್ಯದೀಪ್ ಭಟ್ಟಾಚಾರ್ಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ನಮಗೆ ಶುಕ್ರವಾರ ರಾತ್ರಿ ಶಂಕಿತರು ವಾಸ್ತವ್ಯ ಹೂಡಿರುವ ಬಗ್ಗೆ ಮಾಹಿತಿ ಬಂದಿತ್ತು. ಕೇಂದ್ರ ಗುಪ್ತಚರ ಇಲಾಖೆ ಹಾಗು ಪಶ್ಚಿಮ ಬಂಗಾಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮಾಹಿತಿ ಸಿಕ್ಕ ಕೇವಲ ೨ ಗಂಟೆಯಲ್ಲಿ ಆರೋಪಿಗಳ ಬಂಧನ ಮಾಡಿದ್ದೇವೆ ಎಂದಿದ್ದಾರೆ. ಶನಿವಾರ ರಾತ್ರಿ ಬೆಂಗಳೂರಿಗೆ ಕರೆತಂದು ವಿಚಾರಣೆ ಮಾಡಲಾಗುತ್ತದೆ.
ಪಶ್ಚಿಮ ಬಂಗಾಳವೇ ಅಡಗುತಾಣ
ಶಂಕಿತರು ಪಶ್ಚಿಮ ಬಂಗಾಳದ ಮೂಲಕ ಬಾಂಗ್ಲಾ ದೇಶದೆಡೆಗೆ ಪರಾರಿಯಾಗುವ ಯೋಜನೆ ರೂಪಿಸಿಕೊಂಡಿದ್ದರು ಎಂದು ಎನ್‌ಐಎ ಅಧಿಕಾರಿಯೊಬ್ಬರು ತಿಳಿಸಿದರು. ಶಂಕಿತರು ತಮ್ಮ ಅಸಲಿ ಹೆಸರುಗಳನ್ನು ಬಿಟ್ಟು ಆಧಾರ್ ಕಾರ್ಡ್ಗಳನ್ನು ‘ಎಡಿಟ್’ ಮಾಡಿಕೊಂಡು ವಿಘ್ನೇಶ್ ಮತ್ತು ರಾಜಾರಾಂ ಎಂಬ ಹೆಸರಿನಲ್ಲಿ ಹೊಟೇಲ್ ರೂಂ ಪಡೆದುಕೊಂಡಿದ್ದರು.
ಮೊದಲಿಗೆ ಪಶ್ಚಿಮ ಬಂಗಾಳದ ಮಿಡ್ನಾಪುರ ಪೊಲೀಸರಿಗೆ ಏಪ್ರಿಲ್ ೧೧ರ ರಾತ್ರಿ ೧೧ ಗಂಟೆಗೆ ಉಗ್ರರು ಹೊಟೇಲ್‌ನಲ್ಲಿ ತಂಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕೂಡಲೇ ಕೋಲ್ಕತಾ ಎನ್‌ಐಎ ಗೆ ಮಾಹಿತಿ ನೀಡಿದ ಪೊಲೀಸರು ಅವರೊಂದಿಗೆ ಹೊಟೇಲ್ ಮೇಲೆ ಜಂಟಿಯಾಗಿ ದಾಳಿ ಮಾಡಿದ್ದು, ರಾತ್ರಿ ೧೨.೩೦ ಕ್ಕೆೆ ರೂಂ ಕದ ತಟ್ಟಿದ್ದಾರೆ. ಉಗ್ರರು ಬಾಗಿಲು ತೆರೆಯುತಿದ್ದಂತೆಯೇ ಕೈಗೆ ಬೇಡಿ ಹಾಕಿದ್ದಾರೆ. ಆದರೆ ಈ ಕಾರ್ಯಾಚರಣೆ ಬಗ್ಗೆ ಯಾರಿಗೂ ಗೊತ್ತಾಗದಂತೆ ಗೌಪ್ಯವಾಗಿ ಇಡಲಾಗಿತ್ತು. ಶಂಕಿತರನ್ನು ಅಜ್ಞಾತ ಸ್ಥಳದಲ್ಲಿ ರಾತ್ರಿಯಿಡೀ ವಿಚಾರಣೆ ನಡೆಸಿ ಶುಕ್ರವಾರ ಸಂಜೆ ಪರಗಣ ಜಿಲ್ಲೆಯ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಎನ್‌ಐಎ ವಿಶೇಷ ಕೋರ್ಟ್ ಇಬ್ಬರು ಉಗ್ರರನ್ನ ಮೂರು ದಿನ ಕಸ್ಟಡಿಗೆ ನೀಡಿದೆ.
ಶಿವಮೊಗ್ಗದ ಕಳಸ ಮೂಲದ ಮುಜಾಮಿಲ್, ಬಾಂಬರ್ ಮುಸಾವಿರ್ ಮತ್ತು ಮಾಸ್ಟರ್ ಮೈಂಡ್ ಮತೀನ್ ಜೊತೆ ನೇರ ಸಂಪರ್ಕದಲ್ಲಿದ್ದ. ಮತೀನ್‌ನನ್ನ ಮುಜಾಮಿಲ್ ೧೫ ಕ್ಕೂ ಹೆಚ್ಚು ಬಾರಿ ಭೇಟಿಯಾಗಿದ್ದ. ಅಲ್ಲದೇ, ಮುಸಾವೀರ್‌ಗೆ ಮೊಬೈಲ್ ಮತ್ತು ಸಿಮ್ ಕಾರ್ಡ್ ನೀಡಿದ್ದ. ಹೀಗಾಗಿ ಮುಜಾಮಿಲ್‌ನನ್ನು ತನಿಖೆಗೆ ಒಳಪಡಿಸಿದಾಗ ರಾಮೇಶ್ವರಂ ಕೆಫೆಯ ಸ್ಫೋಟಕ್ಕೆ ಸಂಚು ರೂಪಿಸಿದ್ದೇ ಮತೀನ್ ತಾಹ ಎನ್ನುವುದು ಗೊತ್ತಾಗಿದೆ.
ಬಾಂಬ್ ತಯಾರಿಸಿದ್ದು ಕಡಲೂರಿನಲ್ಲಿ
ತಮಿಳುನಾಡಿನ ಕಡಲೂರಿನಲ್ಲಿ ಕೆಲ ಕಾಲ ಇದ್ದ ಇಬ್ಬರೂ ಉಗ್ರರು ಅಲ್ಲೂ ಹಿಂದೂ ಹೆಸರಿನ ನಕಲಿ ಐಡಿ ನೀಡಿ ರೂಂ ಪಡೆದುಕೊಂಡಿದ್ದರು. ಅಲ್ಲಿಯೇ ಬಾಂಬ್ ತಯಾರಿಸಿ ಬೆಂಗಳೂರಿನ ಕೆ.ಆರ್.ಪುರಂ ಮೂಲಕ ರಾಮೇಶ್ವರಂ ಕೆಫೆಗೆ ಬಂದಿದ್ದ ಮುಸಾವಿರ್, ಮತೀನ್ ಮಾಡಿದ್ದ ಪ್ಲಾನ್‌ನಂತೆಯೇ ಬಾಂಬ್ ಇಟ್ಟು ಹೋಗಿದ್ದ. ಜೊತೆಗೆ ಬಾಂಬ್ ಇಟ್ಟಾಗ ಬೇಕಿಂತಲೇ ಫೋನ್ ಬಳಸಿದ ನಾಟಕವಾಡಿ ಪೋಲೀಸ್ ತನಿಖೆಯ ದಾರಿ ತಪ್ಪಿಸಲು ನೋಡಿದ್ದ. ಅಲ್ಲದೆ ಅನೇಕ ಬಾರಿ ಬಟ್ಟೆ ಬದಲಾಯಿಸಿ ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಲೂ ಪ್ರಯತ್ನಿಸಿದ್ದ.
೮ ವರ್ಷಗಳ ಹುಡುಕಾಟ
ಮುಸಾವಿರ್ ಮತ್ತು ಅಬ್ದುಲ್ ಮತೀನ್ ಇಬ್ಬರೂ ಉಗ್ರ ಚಟುವಟಿಕೆಗಳಿಗೆ ಹೊಸಬರೇನೂ ಅಲ್ಲ . ೨೦೨೧ರಲ್ಲಿ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ೨೦೨೨ರಲ್ಲಿ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಹಾಗೂ ೨೦೨೪ರಲ್ಲಿ ನಡೆದ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ಗಳಲ್ಲೂ ಈ ಯುವಕರದ್ದೇ ಕೃತ್ಯ ಇರುವುದು ಬಯಲಾಗಿದೆ. ಈಗ ಎನ್‌ಐಎ ಲಿಸ್ಟ್ನಲ್ಲಿ ಮಲೆನಾಡಿನ ೬ ಜನ ಶಂಕಿತ ಉಗ್ರರು ಇದ್ದಾರೆ.
ಈ ಇಬ್ಬರ ಮೇಲೂ ೧೦ಕ್ಕಿಂತ ಹೆಚ್ಚು ಉಗ್ರ ಚಟುವಟಿಕೆಗಳಿಗೇ ಸಂಬAಧಿಸಿದ ಕೇಸ್‌ಗಳಿದ್ದು, ಇವರನ್ನು ಎನ್‌ಐಎ ಅಧಿಕಾರಿಗಳು ೮ ವರ್ಷಗಳಿಂದ ಹುಡುಕುತಿದ್ದರು. ಆದರೆ ರಾಮೇಶ್ವರಂ ಕೆಫೆ ಬಾಂಬ್ ಹಾಕಿ ಅಮಾಯಕರ ಮಾರಣ ಹೋಮ ನಡೆಸಲು ಯೋಜಿಸಿದ್ದ ಇಬ್ಬರೂ ಸಿಕ್ಕಿ ಬಿದ್ದಿದ್ದಾರೆ.