*ಗೋಣಿಕೊಪ್ಪ, ಏ. ೧೨: ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತೂರು ಗ್ರಾಮದ ರಸ್ತೆ ಬದಿಗಳಲ್ಲಿ ಕಸ ಹರಡಿಕೊಂಡು ರೋಗ ಹರಡುವ ಭೀತಿಯನ್ನು ಸೃಷ್ಟಿಸುತ್ತಿದೆ. ಗೋಣಿಕೊಪ್ಪ-ಪಾಲಿಬೆಟ್ಟ ರಸ್ತೆಯ ತಿರುವಿನಿಂದ ಅತ್ತೂರು ಮಾರ್ಗದಲ್ಲಿ ಸಂಚರಿಸುವವರಿಗೆ ರಸ್ತೆಯ ಎರಡು ಬದಿಗಳಲ್ಲಿಯೂ ಕಸದ ರಾಶಿ ಹರಡಿಕೊಂಡಿರುವುದು ಕಾಣಸಿಗುತ್ತಿದೆ. ವಾಹನಗಳಲ್ಲಿ ಈ ಮಾರ್ಗವಾಗಿ ತೆರಳುವವರು ಕಸಗಳನ್ನು ಎಸೆದು ಹೋಗುತ್ತಿರುವುದರಿಂದ ಕಸದ ರಾಶಿಯೇ ತುಂಬಿಕೊಳ್ಳುತ್ತಿದೆ.
ಕಸ ಸಂಗ್ರಹಿಸಲು ಪಂಚಾಯಿತಿ ಸೂಕ್ತ ವ್ಯವಸ್ಥೆ ಕಲ್ಪಿಸದೆ ಇರುವುದರಿಂದ ಈ ಅವ್ಯವಸ್ಥೆ ನಿರ್ಮಾಣವಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸುತ್ತಿದ್ದಾರೆ.
ಈ ಬಗ್ಗೆ ಪಂಚಾಯಿತಿ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರುಗಳು ಸ್ಥಳೀಯರದ್ದಾಗಿದೆ. ಪ್ಲಾಸ್ಟಿಕ್ ತ್ಯಾಜ್ಯಗಳು, ಬೀರು, ಮದ್ಯದ ಮತ್ತು ನೀರಿನ ಖಾಲಿ ಬಾಟಲಿಗಳು, ರಸ್ತೆಯ ಬದಿಗಳಲ್ಲಿ ಹರಡಿಕೊಂಡಿವೆ. ತ್ಯಾಜ್ಯಗಳಿಂದಾಗಿ ವಾತಾವರಣ ಕಲುಷಿತಗೊಂಡು ದುರ್ವಾಸನೆ ಬೀರುತ್ತಿದೆ. ಪಂಚಾಯಿತಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.