ಸೋಮವಾರಪೇಟೆ,ಏ.೬: ಮಡಿಕೇರಿ ರಾಜ್ಯ ಹೆದ್ದಾರಿ ಬದಿಯಲ್ಲಿರುವ ವಾಸದ ಮನೆಗೆ ಕನ್ನ ಹಾಕಿರುವ ಕಳ್ಳರು, ನಗದು ಸೇರಿದಂತೆ ಬೆಳ್ಳಿ ವಸ್ತುಗಳು, ರೇಷ್ಮೆ ಸೀರೆಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.
ರಾಜ್ಯ ಹೆದ್ದಾರಿಗೆ ಒತ್ತಿಕೊಂಡಿರುವ ಬಳಗುಂದ ಗ್ರಾಮದ ನಿವಾಸಿಗಳಾದ ಹೆಚ್.ಜಿ. ಶುಭಾ ಮತ್ತು ಹೆಚ್.ಎಸ್. ಗಣೇಶ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು, ಬೆಲೆಬಾಳುವ ವಸ್ತುಗಳು, ನಗದನ್ನು ಕಳವು ಮಾಡಿದ್ದು, ಒಳಭಾಗದಲ್ಲಿ ಖಾರದ ಪುಡಿಯನ್ನು ಎರಚಿ ನಂತರ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಹೆಚ್.ಜಿ. ಶುಭಾ ಮತ್ತು ಅವರ ಪತಿ ಹೆಚ್.ಎಸ್. ಗಣೇಶ್ ಹಾಗೂ ಪುತ್ರ, ಮಡಿಕೇರಿಯ ಆದಾಯ ತೆರಿಗೆ ಇಲಾಖೆಯಲ್ಲಿ ಕರ್ತವ್ಯ ಮಾಡಿಕೊಂಡಿರುವ ಸಂಭ್ರಮ್ ಅವರುಗಳು ತಾ. ೪ ರಂದು ಬೆಂಗಳೂರಿನಲ್ಲಿರುವ ಸಂಬAಧಿಕರ ಮನೆಗೆ ತೆರಳಿದ್ದು, ತಾ. ೫ ರಂದು ರಾತ್ರಿ ಮನೆಗೆ ಹಿಂತಿರುಗಿದ ಸಂದರ್ಭ ಕಳ್ಳತನ ಮಾಡಿರುವುದು ತಿಳಿದುಬಂದಿದೆ.
ಮನೆಯ ಹಿಂಬದಿಯ ಬಾಗಿಲನ್ನು ಮುರಿದು ಒಳನುಗ್ಗಿರುವ ಕಳ್ಳರು ಎರಡು ಗೋಡ್ರೇಜ್ಗಳ ಒಳಗಿದ್ದ ಎರಡು ಕೆ.ಜಿ. ತೂಕದ ಬೆಳ್ಳಿ ದೀಪ, ತಟ್ಟೆಗಳು, ಬೆಳ್ಳಿಯ ಚೆಂಬು, ಚಮಚ ಮತ್ತು ಲೋಟಗಳು, ರೇಷ್ಮೆ ಸೀರೆಗಳು, ಪ್ರಾಚೀನ ಕಾಲದ ಚಿನ್ನದ ತುಣುಕುಗಳು ಹಾಗೂ ರೂ.೨೦,೦೦೦ ನಗದು ಹಣವನ್ನು ಅಪಹರಿಸಿದ್ದಾರೆ.
ಮನೆಯಲ್ಲಿ ಅಳವಡಿಸಿದ್ದ ಸಿ.ಸಿ.ಕ್ಯಾಮರಾ ಮತ್ತು ಡಿ.ವಿ.ಆರ್.ನ್ನೂ ತಮ್ಮೊಂದಿಗೆ ಕೊಂಡೊಯ್ದಿರುವ ಕಳ್ಳರು, ಯಾವುದೇ ಕುರುಹು ದೊರೆಯದಂತೆ ಮಾಡಲು ಮನೆಯ ತುಂಬಾ ಖಾರದ ಪುಡಿಯನ್ನು ಚೆಲ್ಲಿದ್ದಾರೆ. ಈ ಬಗ್ಗೆ ಶುಭಾ ಅವರು ಸೋಮವಾರಪೇಟೆ ಪೋಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.