ಎಸ್.ಎಂ. ಮುಬಾರಕ್

ಸಿದ್ದಾಪುರ, ಏ. ೫: ಜಿಲ್ಲೆಯ ದೊಡ್ಡ ಗ್ರಾಮ ಪಂಚಾಯಿತಿಗಳ ಸಾಲಿಗೆ ಸೇರುವ ಸಿದ್ದಾಪುರ ಪಟ್ಟಣ ಶರವೇಗದಲ್ಲಿ ಬೆಳೆಯುತ್ತಿದೆ. ವ್ಯಾಪಾರ-ಉದ್ಯಮಗಳು ತಲೆ ಎತ್ತುತ್ತಿವೆ. ಆದರೆ, ಕಸದ ಸಮಸ್ಯೆ ಮಾತ್ರ ಮುಕ್ತಿ ಕಂಡಿಲ್ಲ. ಅನೈರ್ಮಲ್ಯದಿಂದ ಆತಂಕ ಮನೆ ಮಾಡಿದ್ದು, ಸಮರ್ಪಕವಾಗಿ ಕಸ ವಿಲೇವಾರಿಯಾಗದ ಪರಿಣಾಮ ಚರಂಡಿಗಳು ಗಬ್ಬೆದ್ದು ನಾರುತ್ತಿವೆ. ಇದರೊಂದಿಗೆ ಜ್ವರ ಬಾಧಿಸುತ್ತಿದ್ದು, ಡೆಂಗ್ಯು ಭೀತಿ ಜನರಲ್ಲಿ ಆವರಿಸಿದೆ.

ಮಾರುಕಟ್ಟೆ ಸೇರಿದಂತೆ ಹಲವಡೆ ತ್ಯಾಜ್ಯದ ದುರ್ವಾಸನೆಯೊಂದಿಗೆ ಚರಂಡಿಗಳಲ್ಲಿ ತ್ಯಾಜ್ಯ ತುಂಬಿ ಕ್ರಿಮಿ-ಕೀಟಗಳ ವಾಸಸ್ಥಾನವಾಗಿದೆ. ಸೊಳ್ಳೆ ಕಾಟ ಅಧಿಕವಾಗಿರುವ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳಿಂದ ಸುತ್ತಮುತ್ತಲ ನಿವಾಸಿಗಳಲ್ಲಿ ಜ್ವರ ಕಾಣಿಸಿಕೊಂಡು ಸಿದ್ದಾಪುರ ಹಾಗೂ ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರಲ್ಲಿ ಡೆಂಗ್ಯು ಸೋಂಕಿನ ಲಕ್ಷಣಗಳು ಕಂಡು ಬಂದಿವೆೆ ಎನ್ನಲಾಗಿದೆ.

ಕಳೆದ ೫೦ ವರ್ಷಗಳಿಂದಲೂ ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗ ಕಂಡುಕೊಳ್ಳಲಾಗದ ಗ್ರಾಮ ಪಂಚಾಯಿತಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸಂತೆ ಮಾರುಕಟ್ಟೆ ಸೇರಿದಂತೆ ಸುತ್ತಮುತ್ತಲ ಮುಖ್ಯರಸ್ತೆ ಬದಿಯ ಚರಂಡಿಗಳಲ್ಲಿ ತ್ಯಾಜ್ಯದ ದುರ್ವಾಸನೆಯೊಂದಿಗೆ ಸಾರ್ವಜನಿಕರು ಮೂಗು ಮುಚ್ಚಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಿದ್ದಾಪುರದಿಂದ ಕರಡಿಗೋಡು ವಿಗೆ ಹೋಗುವ ರಸ್ತೆ ಬದಿಯ ಚರಂಡಿಯಲ್ಲಿ ಹಲವು ತಿಂಗಳಿನಿAದ ತ್ಯಾಜ್ಯ ತುಂಬಿ ದುರ್ವಾಸನೆ ಬೀರುತ್ತಿದ್ದರೂ ಗ್ರಾಮ ಪಂಚಾಯಿತಿ ಶುಚಿತ್ವಕ್ಕೆ ಮುಂದಾಗುತ್ತಿಲ್ಲ ಎಂದು ಸ್ಥಳೀಯರಾದ ಸುರೇಶ್ ಆರೋಪಿಸಿದ್ದಾರೆ.

ಮಾರುಕಟ್ಟೆ ಭಾಗದಲ್ಲಿ ತ್ಯಾಜ್ಯದ ದುರ್ವಾಸನೆಯಿಂದ ಇಲ್ಲಿನ ನಿವಾಸಿಗಳು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಬಾರಿ ತ್ಯಾಜ್ಯ ತೆರವುಗೊಳಿಸಲು ಸ್ಥಳೀಯರು ಪಂಚಾಯಿತಿಗೆ ಮನವಿ ಮಾಡಿದರೂ ಗ್ರಾಮ ಪಂಚಾಯಿತಿ ಮಾತ್ರ ಶುಚಿತ್ವಕ್ಕೆ ಮುಂದಾಗುತ್ತಿಲ್ಲ. ಚರಂಡಿಗಳಲ್ಲಿ ತ್ಯಾಜ್ಯದೊಂದಿಗೆ ದುರ್ವಾಸನೆ ಬೀರುತ್ತಿದ್ದು, ಈ ಭಾಗದಲ್ಲಿ ಸುಮಾರು ೧೦ಕ್ಕೂ ಹೆಚ್ಚು ಮಂದಿಗೆ ಜ್ವರ ಕಾಣಿಸಿಕೊಂಡಿದೆ. ಆರೋಗ್ಯ ಇಲಾಖೆ ಮಾಹಿತಿಯಂತೆ ಇಬ್ಬರಲ್ಲಿ ಡೆಂಗ್ಯು ಲಕ್ಷಣಗಳು ಪತ್ತೆಯಾಗಿವೆÉ ಎನ್ನಲಾಗಿದೆ.

ಸಮಸ್ಯೆ ಪರಿಹಾರಕ್ಕೆ ಒತ್ತಾಯ

ಆದಷ್ಟು ಬೇಗ ತ್ಯಾಜ್ಯವನ್ನು ತೆರವುಗೊಳಿಸಿ ಶುಚಿತ್ವಕ್ಕೆ ಮುಂದಾಗ ಬೇಕೆಂದು ಪಂಚಾಯಿತಿ ವಾರ್ಡ್ ಸದಸ್ಯ ಸೈನುಲ್ಲ ಒತ್ತಾಯಿಸಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಶುಚಿತ್ವದ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸಲಹೆ ನೀಡಿದ್ದಾರೆ.

ಮಾರುಕಟ್ಟೆ ಸುತ್ತಮುತ್ತಲ ಭಾಗದಲ್ಲಿ ಶುಚಿತ್ವ ಕಾಣದೆ ದುರ್ವಾಸನೆಯಿಂದ ಹಲವು ಸಾಂಕ್ರಾಮಿಕ ರೋಗಗಳ ಹರಡುವ ಭೀತಿ ಇದ್ದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದ ಬಗ್ಗೆ ಸಾರ್ವಜನಿಕರು ಆಕ್ಷೇಪಿಸಿದ್ದಾರೆ.

ಭಾನುವಾರದ ಸಂತೆಯು ಮಾರುಕಟ್ಟೆ ಭಾಗದಲ್ಲಿ ನಡೆಯುತ್ತಿದ್ದು, ಸಂತೆಗೆ ಜಿಲ್ಲೆ ಸೇರಿದಂತೆ ಬೇರೆ ಜಿಲ್ಲೆಯ ಸಾವಿರಾರು ಮಂದಿ ಆಗಮಿಸುತ್ತಾರೆ. ಮಾರುಕಟ್ಟೆ ಆವರಣ ದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯು ತ್ತಿರುವ ಪರಿಣಾಮ ದುರ್ವಾಸನೆ ಯೊಂದಿಗೆ ಬೀದಿನಾಯಿಗಳÀ ಹಾವಳಿಯು ಮಿತಿಮೀರಿದ್ದು ಕಿರಿಕಿರಿ ಸೃಷ್ಟಿಯಾಗಿದೆ.

ಆದಷ್ಟು ಬೇಗ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ತ್ಯಾಜ್ಯ ವಿಲೇವಾರಿಗೆ ಜಾಗ ಕಂಡು ಹಿಡಿದು ಸಮಸ್ಯೆ ಬಗೆಹರಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಸಮ್ಮದ್ ಒತ್ತಾಯಿಸಿದ್ದಾರೆ.