ಮಡಿಕೇರಿ, ಏ. ೫: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಬಿರುಸಿನ ಪ್ರಚಾರಕ್ಕೆ ಧುಮುಕಿದ್ದಾರೆ. ನಾನಾ ಲೆಕ್ಕಾಚಾರದಲ್ಲಿ ತೊಡಗಿಕೊಂಡಿರುವ ಅಭ್ಯರ್ಥಿಗಳು ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆ.
ಏತನ್ಮಧ್ಯೆ ಕ್ಷೇತ್ರದಲ್ಲಿ ಜಾತಿ ಸಮೀಕರಣ ಬಲು ಜೋರಾಗಿಯೇ ನಡೆಯುತ್ತಿವೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ೪ ದಶಕಗಳ ಬಳಿಕ ಕಾಂಗ್ರೆಸ್ ಪಕ್ಷವು ಒಕ್ಕಲಿಗ ಜನಾಂಗದ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಕಳೆದ ಎರಡು ಚುನಾವಣೆಯಲ್ಲಿ ಒಕ್ಕಲಿಗ ಅಭ್ಯರ್ಥಿಗೆ ಟಿಕೆಟ್ ನೀಡಿ ಗೆಲುವು ಸಾಧಿಸಿದ್ದ ಬಿಜೆಪಿ ಈ ಬಾರಿ ಯದುವೀರ ಒಡೆಯರ್ ಅವರಿಗೆ ಟಿಕೆಟ್ ನೀಡಿದೆ.
ಒಂದೆಡೆ ಒಕ್ಕಲಿಗ ಜನಾಂಗದ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಕೊಕ್ ನೀಡಿರುವುದರಿಂದ ಒಕ್ಕಲಿಗರು ಮುನಿಸಿಕೊಳ್ಳುವ ಆತಂಕ ಬಿಜೆಪಿ ಪಾಳಯದಲ್ಲಿವೆ. ಅದಲ್ಲದೇ ಕ್ಷೇತ್ರದಲ್ಲಿ ಅಹಿಂದ ಮತಗಳನ್ನು ಸಂಪೂರ್ಣವಾಗಿ ಸೆಳೆಯಲು ಸಿ.ಎಂ. ಸಿದ್ದರಾಮಯ್ಯ ಅವರು ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ. ಒಕ್ಕಲಿಗ ಮತಗಳನ್ನು ಕಾಂಗ್ರೆಸ್ ಬುಟ್ಟಿಗೆ ಹಾಕಿಕೊಳ್ಳಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಸ್ವತಃ ಮೈಸೂರು ಅಖಾಡಕ್ಕಿಳಿಯುವ ಸಾಧ್ಯತೆಗಳಿವೆ. ಮತ್ತೊಂದೆಡೆ ರಾಜಮನೆತನದ ಯದುವೀರ ಒಡೆಯರ್ ಅವರು ಸ್ಪರ್ಧಿಸುತ್ತಿರುವುದರಿಂದ ಜಾತ್ಯತೀತವಾಗಿ ಮತಗಳು ಬೀಳುವ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.
ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷö್ಮಣ್ ಗೌಡ ಅವರು ನಾನು ಒಕ್ಕಲಿಗ ಗೌಡ ಎಂದು ಇತ್ತೀಚೆಗೆ ಮೈಸೂರಿನಲ್ಲಿ ಜಾತಿ ಪ್ರಮಾಣದ ಪತ್ರವನ್ನು ಮಾಧ್ಯಮದವರು ಮುಂದೆ ಪ್ರದರ್ಶಿಸಿದ್ದರು.
ನಾಲ್ಕು ದಶಕಗಳ ಬಳಿಕ ಕಾಂಗ್ರೆಸ್ ಒಕ್ಕಲಿಗರಿಗೆ ಟಿಕೆಟ್ ನೀಡಿದೆ, ಈ ಬಾರಿ ಒಕ್ಕಲಿಗರು ನನ್ನ ಕೈ ಹಿಡಿಯಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷö್ಮಣ್ ಗೌಡ ಅವರು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಅಹಿAದ ಮತಗಳೊಂದಿಗೆ ಒಕ್ಕಲಿಗ ಮತಗಳು ಕೈ ಹಿಡಿಯುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್!
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವು ದಿನದಿಂದ ದಿನಕ್ಕೆ ಚುನಾವಣಾ ಕಾವು ರಂಗೇರುತ್ತಿವೆ. ಕ್ಷೇತ್ರವನ್ನು ಕೈ ವಶಪಡಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಅವರೇ ಸ್ವತಃ ಅಖಾಡಕ್ಕಿಳಿದಿದ್ದಾರೆ.
ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತದಾರರಾದ ಅಲ್ಪಸಂಖ್ಯಾತ, ಮುಸ್ಲಿಂ, ದಲಿತ ಮತ್ತು ಹಿಂದುಳಿದ ವರ್ಗಗಳ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಗ್ಯಾರಂಟಿ ಎನ್ನುವ ನಂಬಿಕೆ ಅವರದ್ದು. ಅದರೊಂದಿಗೆ ಕುರುಬ ಜನಾಂಗದ ಮತಗಳು ಕಾಂಗ್ರೆಸ್ ಪರವಾಗಿ ಚಲಾವಣೆಯಾಗುವುದು ಪಕ್ಕಾ.
ಯಾಕೆಂದರೆ ಕುರುಬ ಜನಾಂಗದ ಸಿದ್ದರಾಮಯ್ಯ ಅವರು ಸಿ.ಎಂ. ಆಗಿರುವುದರಿಂದ ಕುರುಬ ಜನಾಂಗದ ಮತದಾರರು ಕಾಂಗ್ರೆಸ್ ಕೈ ಹಿಡಿಯುವುದು ನಿಶ್ಚಿತ ಎನ್ನುವ ವಿಶ್ವಾಸ ಅವರದ್ದು. ಇದರೊಂದಿಗೆ ಒಕ್ಕಲಿಗ ಜನಾಂಗದ ಮತಗಳನ್ನು ಸೆಳೆದು ಗೆಲ್ಲುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಪಕ್ಷ ಇದೆ. ಒಕ್ಕಲಿಗ ಸಮುದಾಯದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಿರುವುದರಿಂದ ಕಾಂಗ್ರೆಸ್ ಇದರ ಲಾಭ ಪಡೆಯುವ ಲೆಕ್ಕಾಚಾರದಲ್ಲಿ ಇದೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿರುವುದರಿಂದ ಅಹಿಂದ ಮತ್ತು ಮುಸ್ಲಿಂ ಮತಗಳು ವಿಭಜನೆಯಾಗುವ ಆತಂಕ ಕಾಂಗ್ರೆಸ್ ಪಕ್ಷಕ್ಕಿಲ್ಲ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರದ ಐವರು ಕಾಂಗ್ರೆಸ್ ಶಾಸಕರಲ್ಲಿ ಮೂವರು ಕೂಡ ಒಕ್ಕಲಿಗ ಜನಾಂಗದವರು. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಪಿರಿಯಾಪಟ್ಟಣ ಕ್ಷೇತ್ರದ ಶಾಸಕ, ಸಚಿವ ವೆಂಕಟೇಶ್ ಮತ್ತು ಚಾಮರಾಜ ಕ್ಷೇತ್ರದ ಹರೀಶ್ ಗೌಡ ಅವರು ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿರುವ ಒಕ್ಕಲಿಗ ಜನಾಂಗದ ಕಾಂಗ್ರೆಸ್ ಶಾಸಕರು.ಕ್ಷೇತ್ರದಲ್ಲಿ ಕೊಡವ ಮತದಾರರನ್ನು ಸೆಳೆಯಲು ಏಕೈಕ ಕೊಡವ ಶಾಸಕ ಎ.ಎಸ್. ಪೊನ್ನಣ್ಣ ಅವರು ಕೂಡ ಕಾಂಗ್ರೆಸ್ ಪಕ್ಷದವರೇ ಆಗಿದ್ದಾರೆ. ಮತ್ತೋರ್ವ ಶಾಸಕ ಮುಸ್ಲಿಂ ಸಮುದಾಯದ ತನ್ವೀರ್ ಸೇಠ್ ಅವರು ನರಸಿಂಹರಾಜ ಕ್ಷೇತ್ರದ ಶಾಸಕರಾಗಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಭಾಗದಲ್ಲಿ ಅಹಿಂದ ಮತಗಳೊಂದಿಗೆ ಒಕ್ಕಲಿಗರು ಮತ್ತು ಲಿಂಗಾಯತರು ಕೂಡ ಕಾಂಗ್ರೆಸ್ ಪರವಾಗಿ ಮತಚಲಾಯಿಸಿರುವುದರಿಂದ ಮೈಸೂರು ಭಾಗದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸ್ಥಾನಗಳನ್ನು ಕಾಂಗ್ರೆಸ್ ಕಿತ್ತುಕೊಂಡಿತ್ತು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಅಹಿಂದ ಮತಗಳೊಂದಿಗೆ ಒಕ್ಕಲಿಗ, ಲಿಂಗಾಯತ ಮತಗಳನ್ನು ಸೆಳೆದು ಗೆಲ್ಲುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಪಾಳಯವಿದೆ.
ಒಕ್ಕಲಿಗ ಮತ್ತು ಲಿಂಗಾಯತ ಮತಗಳೊಂದಿಗೆ ಅಹಿಂದ ಮತಗಳ ಮೇಲೆ ಬಿಜೆಪಿ ಕಣ್ಣು!
ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರ ಕೈ ಹಿಡಿದಿದ್ದ ಒಕ್ಕಲಿಗ ಗೌಡ ಜನಾಂಗದವರು ಬಿಜೆಪಿ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು. ಆದರೆ ಈ ಬಾರಿ ಪ್ರತಾಪ್ ಸಿಂಹ ಅವರು ಕಣದಲ್ಲಿಲ್ಲ.
ಒಬಿಸಿ ಕೋಟಾದಲ್ಲಿ ರಾಜವಂಶಸ್ಥ ಯದುವೀರ ಒಡೆಯರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಒಂದೆಡೆ ಒಕ್ಕಲಿಗ ಜನಾಂಗದವರು ಕೈ ಕೊಡುವ ಆತಂಕದಲ್ಲಿರುವ ಬಿಜೆಪಿಗರು ಅಹಿಂದ ಮತಗಳ ಮೇಲೆ ಕಣ್ಣಿಟ್ಟಿದೆ.
ತನ್ನ ಸಾಂಪ್ರದಾಯಿಕ ಮತದಾರರಾದ ಲಿಂಗಾಯುತ, ಬ್ರಾಹ್ಮಣ ಮತ್ತು ಒಕ್ಕಲಿಗ ಮತಗಳೊಂದಿಗೆ ಅಹಿಂದ ಮತಗಳನ್ನು ಸೆಳೆದು ಗೆಲುವು ಸಾಧಿಸಬಹುದೆಂಬ ಲೆಕ್ಕಾಚಾರದಲ್ಲಿದೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿರುವುದರಿಂದ ಕುಮಾರಸ್ವಾಮಿ ಮತ್ತು ಎಚ್.ಡಿ ದೇವೇಗೌಡ ಅವರನ್ನು ಕ್ಷೇತ್ರದಲ್ಲಿ ಪ್ರಚಾರದಲ್ಲಿ ಬಳಸಿಕೊಂಡು ಒಕ್ಕಲಿಗರ ಮತಗಳನ್ನು ಸೆಳೆಯುವ ಕಾರ್ಯತಂತ್ರ ರೂಪಿಸಿದ್ದಾರೆ.
ದಲಿತ ಎಡಗೈ ಮತ್ತು ಇತರ ಸಣ್ಣ ಪುಟ್ಟ ಜಾತಿಯ ಮತದಾರರನ್ನು ಸೆಳೆಯುವ ಉದ್ದೇಶವನ್ನು ಬಿಜೆಪಿ ಹೊಂದಿದೆ. ಕಳೆದ ಎರಡು ಚುನಾವಣೆಯಲ್ಲಿ ಕೂಡ ಗ್ರಾಮೀಣ ಭಾಗದಲ್ಲಿ ದಲಿತ ಮತಗಳು ಕಾಂಗ್ರೆಸ್ ಪರವಾಗಿ ಚಲಾವಣೆಯಾಗಿತ್ತು. ಒಂದು ವೇಳೆ ಬಿಜೆಪಿಗೆ ಒಕ್ಕಲಿಗರು ಕೈಕೊಟ್ಟರೆ ದಲಿತ ಮತಗಳು ಕೈ ಹಿಡಿದರೆ ಮಾತ್ರ ಗೆಲುವು ಸಾಧ್ಯ. ಈ ಲೆಕ್ಕಾಚಾರದಿಂದಲೇ ಬಿಜೆಪಿ ಇದೀಗ ದಲಿತ ಮತಗಳ ಮೇಲೆ ಕಣ್ಣಿಟ್ಟಿರುವುದು.
ಕ್ಷೇತ್ರದ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಕೇವಲ ಒಬ್ಬ ಶಾಸಕ ಮಾತ್ರ ಇರುವುದು. ಕೃಷ್ಣರಾಜ ಕ್ಷೇತ್ರ ಬ್ರಾಹ್ಮಣ ಸಮುದಾಯದ ಶ್ರೀವತ್ಸ ಅವರು ಬಿಜೆಪಿ ಶಾಸಕರಾಗಿದ್ದಾರೆ.
ಹುಣಸೂರು ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಜಿ.ಟಿ. ದೇವೇಗೌಡ ಮತ್ತು ಜಿ.ಡಿ. ಹರೀಶ್ ಗೌಡ ಒಕ್ಕಲಿಗರು. ವೈಯಕ್ತಿಕ ನೆಲೆಗಟ್ಟಿನಲ್ಲಿ ಒಕ್ಕಲಿಗರ ಮತಗಳನ್ನು ಸೆಳೆಯುವ ಸಾಮರ್ಥ್ಯವನ್ನು ತಂದೆ ಮತ್ತು ಮಗ ಹೊಂದಿದ್ದಾರೆ
ಮೈಸೂರು ಭಾಗದಲ್ಲಿ ರಾಜಮನೆತನದ ಮೇಲೆ ಜನರಿಗೆ ಜಾತ್ಯತೀತವಾಗಿ ಅಪಾರವಾದ ಗೌರವವಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮತದಾರರು ಜಾತಿ ಲೆಕ್ಕಾಚಾರಗಳನ್ನು ಮೀರಿ ಬಿಜೆಪಿ ಅಭ್ಯರ್ಥಿ ಯದುವೀರ ಒಡೆಯರ್ ಅವರ ಕೈ ಹಿಡಿಯುತ್ತಾರಾ ಎಂದು ಕಾದುನೋಡಬೇಕಾಗಿದೆ. - ಕೆ.ಎಂ. ಇಸ್ಮಾಯಿಲ್ ಕಂಡಕರೆ