ನಾಪೋಕ್ಲು, ಏ. ೪: ಪಟ್ಟಣ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯವನ್ನು ಸುರಿದು ಮಾಲಿನ್ಯ ಉಂಟು ಮಾಡುವವರ ವಿರುದ್ಧ ಗ್ರಾಮ ಪಂಚಾಯಿತಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಪಟ್ಟಣದ ಹಳೆ ತಾಲೂಕಿನಿಂದ ಕಾವೇರಿ ನದಿ ಸೇತುವೆ ಬಳಿಯವರೆಗೆ ರಸ್ತೆಯ ವಿವಿಧ ಭಾಗಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ತ್ಯಾಜ್ಯ ತಂದು ಸುರಿಯುವವರನ್ನು ಪತ್ತೆಹಚ್ಚಿ ಅಂತಹವರಿಗೆ ರೂ. ೫ ಸಾವಿರವರೆಗೆ ದಂಡ ವಿಧಿಸಲಾಗುವುದು ಎಂದು ಪಂಚಾಯಿತಿ ಎಚ್ಚರಿಕೆ ನೀಡಿದೆ.

ವಿವಿಧ ಭಾಗಗಳಿಗೆ ಪ್ರತಿ ದಿನ ಬೆಳಿಗ್ಗೆ ಕಸ ವಿಲೇವಾರಿ ವಾಹನ ಹೋಗುತ್ತಿದ್ದರೂ ಕೆಲವರು ಅಂಗಡಿ ಹಾಗೂ ಮನೆಗಳ ತ್ಯಾಜ್ಯವನ್ನು ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ತಂದು ಸುರಿಯುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಪಂಚಾಯಿತಿ ತ್ಯಾಜ್ಯ ಸುರಿಯದಂತೆ ಎಚ್ಚರಿಕೆಯ ನಾಮಫಲಕವನ್ನು ಅಳವಡಿಸಿದೆ. ಆದರೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಸಾರ್ವಜನಿಕರು ಪಂಚಾಯಿತಿಯ ಕಸ ವಿಲೇವಾರಿ ವಾಹನಕ್ಕೆ ತಮ್ಮ ಮನೆ ಹಾಗೂ ಅಂಗಡಿಗಳ ತ್ಯಾಜ್ಯವನ್ನು ಹಾಕಿ ಸಹಕರಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಸದಸ್ಯರಾದ ಶಿವಚಾಳಿಯಂಡ ಜಗದೀಶ್, ಮೊಹಮ್ಮದ್ ಕುರೇಷಿ ಕೋರಿದ್ದಾರೆ.