ಭಾಗಮಂಡಲ, ಏ. ೩: ಶ್ರೀ ಕಾವೇರಮ್ಮ ಕೊಡವ ಅಮ ್ಮಕೊಡವ, ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಮಳೆಗಾಗಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಎಂ.ಬಿ. ದೇವಯ್ಯ ಹಾಗೂ ಪ್ರಮುಖರು ಭಾಗಮಂಡಲದ ಭಗಂಡೇಶ್ವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ನಂತರ ತಲಕಾವೇರಿಗೆ ತೆರಳಿ ಕಾವೇರಿ ಮಾತೆಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಮಳೆ ಇಲ್ಲದೆ ಜಿಲ್ಲೆಯಲ್ಲಿ ಕೃಷಿಗೆ ತೊಂದರೆ ಆಗಿದೆ. ಜೀವ, ಜಲಚರಗಳು ನೀರಿಲ್ಲದೆ ಪರಿತಪಿಸುತ್ತಿವೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ನಾಡಿನಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವಂತೆ ಪ್ರಾರ್ಥನೆ ಸಲ್ಲಿಸಿದರು. ಜಿಲ್ಲೆ ಸೇರಿದಂತೆ ರಾಜ್ಯವು ಬರದಿಂದ ಬಳಲುತ್ತಿದೆ. ಬಿಸಿಲಿನ ತಾಪಮಾನದ ಹೆಚ್ಚಳದಿಂದಾಗಿ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು ಪರಿಸ್ಥಿತಿ ಹೀಗೆ ಮುಂದುವರೆದರೆ ಮಾನವ ಕುಲ ಭವಿಷ್ಯದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ನಾಡಿನ ಸುಭಿಕ್ಷೆಗಾಗಿ ದೇವರ ಮೊರೆ ಹೋಗಿದ್ದೇವೆ ಎಂದು ಎಂ.ಬಿ. ದೇವಯ್ಯ ಹೇಳಿದರು. ನಿರ್ದೇಶಕರಾದ ಹಂಚೆಟ್ಟಿರ ಮನು ಮುದ್ದಪ್ಪ, ಪಾಸುರ ಕಾವೇರಪ್ಪ, ಎಂ.ಕೆ. ಅಯ್ಯಪ್ಪ , ಕುಕ್ಕೆರ ಶ್ಯಾಮಲ. ಮುಕ್ಕಾಟಿರ ನಾಣಯ್ಯ, ಕುಚ್ಚೆಟ್ಟಿರ ಮನು, ಪ್ರಭು ಸೇರಿದಂತೆ ಇತರರು ಹಾಜರಿದ್ದರು.