ನಾಪೋಕ್ಲು, ಏ. ೩: ಕೊಡವ ಕೌಟುಂಬಿಕ ಬೊಟ್ಟೋಳಂಡ ಕಪ್ ಹಗ್ಗ ಜಗ್ಗಾಟ -೨೦೨೪ ಕ್ರೀಡೋತ್ಸವಕ್ಕೆ ಮೈದಾನದ ತಯಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಸ್ಥಳೀಯ ಕೆಪಿಎಸ್ ಶಾಲಾ ಆಟದ ಮೈದಾನದಲ್ಲಿ ಪೂಜಾ ವಿಧಿ ವಿಧಾನಗಳೊಂದಿಗೆ ಕ್ರೀಡಾ ಸಮಿತಿಯ ಪ್ರಮುಖರು ಹಾಗೂ ಕುಟುಂಬಸ್ಥರು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಕ್ರೀಡಾ ಸಮಿತಿಯ ಅಧ್ಯಕ್ಷ ಬೊಟ್ಟೋಳಂಡ ಗಣೇಶ್ ಮಾತನಾಡಿ, ಕ್ರೀಡಾಕೂಟವು ತಾ. ೧೮ರಿಂದ ೨೩ ವರೆಗೆ ಆಯೋಜಿಸಲಾಗಿದೆ. ಎಲ್ಲರ ಸಹಕಾರದಿಂದ ಕೆಲಸ ಕಾರ್ಯಗಳು ಸಾಂಗವಾಗಿ ಜರುಗುತ್ತಿದೆ. ಇದೀಗಾಗಲೇ ೧೫೦ ತಂಡಗಳು ಹೆಸರನ್ನು ನೋಂದಾಯಿಸಿಕೊAಡಿದ್ದು, ನೋಂದಾವಣಿಗೆ ಬಾಕಿ ಉಳಿದವರಿಗೆ ತಾ.೧೦ರವರೆಗೆ ಸಮಯಾವಕಾಶವಿದೆ ಎಂದು ಹೇಳಿದರು. ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬಗಳು ನೋಂದಾಯಿಸಿ ಕ್ರೀಡೋತ್ಸವವನ್ನು ಯಶಸ್ವಿಗೊಳಿಸಬೇಕೆಂದರು.
ಕ್ರೀಡಾ ಸಮಿತಿ ಸಂಚಾಲಕ ಬೊಟ್ಟೋಳಂಡ ಮಿಟ್ಟು ಪೂಣಚ್ಚ ಯಾವುದೇ ತರದ ವಿಘ್ನಗಳಿಲ್ಲದೆ ಸುಸೂತ್ರವಾಗಿ ಕ್ರೀಡಾಕೂಟವು ಜರುಗಲೆಂದು ಪ್ರಾರ್ಥಿಸಿದರು.
ಪೂಜಾ ಕಾರ್ಯವನ್ನು ನಾಪೋಕ್ಲು ಶ್ರೀ ಭಗವತಿ ದೇವಾಲಯದ ಮುಖ್ಯ ಅರ್ಚಕ ಹರೀಶ್ ಭಟ್ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕ್ರೀಡಾ ಸಮಿತಿ ಕಾರ್ಯದರ್ಶಿ ಬೊಟ್ಟೋಳಂಡ ಚೇತನ್, ಸಹ ಕಾರ್ಯದರ್ಶಿ ಪಳಂಗಪ್ಪ, ಖಜಾಂಚಿ ರಮೇಶ್ ಪೊನ್ನಯ್ಯ, ಹಿರಿಯರಾದ ಗಣೇಶ್, ಗಿರೀಶ್ ಮಂದಪ್ಪ, ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲ ಶಿವಣ್ಣ ಎಂ.ಎಸ್. ಸೇರಿದಂತೆ ಕ್ರೀಡಾ ಸಮಿತಿ ನಿರ್ದೇಶಕರು ಹಾಗೂ ಕುಟುಂಬಸ್ಥರು, ಇನ್ನಿತರರು ಪಾಲ್ಗೊಂಡಿದ್ದರು.