ಗೋಣಿಕೊಪ್ಪಲು, ಏ. ೩: ಕೇರಳ ಮೂಲದ ಇಬ್ಬರು ವ್ಯಕ್ತಿಗಳು ಮೈಸೂರು ಭಾಗದಿಂದ ಅಕ್ರಮವಾಗಿ ಗಾಂಜಾ ವನ್ನು ಕೊಡಗಿನ ಮೂಲಕ ಸಾಗಾಟ ಮಾಡುತ್ತಿರುವುದನ್ನು ಖಚಿತ ಮಾಹಿತಿಯ ಮೇರೆ ಗೋಣಿಕೊಪ್ಪ ಪೊಲೀಸರು ಮಾಲು ಸಹಿತ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಡಗಿನಲ್ಲಿ ಅಕ್ರಮ ಗಾಂಜಾ ಪೆಡ್ಲರ್ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದ ಕೊಡಗು ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆಯುವ ಮೂಲಕ ಜೈಲಿಗಟ್ಟಿದ್ದರು. ಇದೀಗ ಮತ್ತೆ ಇಂತಹ ದಂಧೆಗೆ ಇಳಿದಿದ್ದ ಸಂದರ್ಭ ಗೋಣಿಕೊಪ್ಪ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೇರಳ ಮೂಲದ ಮೂವರು ವ್ಯಕ್ತಿಗಳಾದ ಅಲ್ ಶಾಜ್, ತಲ್ಸಿಕ್ ಹಾಗೂ ಮೊಹಮ್ಮದ್ ಅಶ್ರಫ್ ಸುಮಾರು ೧ ಕೆ.ಜಿ. ನಾನೂರು ಗ್ರಾಂ. ತೂಕದ ಗಾಂಜಾ ಹಾಗೂ ೨ ಗ್ರಾಂ.ಎA.ಡಿ.ಎA.ಎ. ಡ್ರಗ್ಸ್ ಅನ್ನು ಮೈಸೂರಿನಿಂದ ತಿತಿಮತಿ -ಆನೆ ಚೌಕೂರು ಮಾರ್ಗವಾಗಿ ಕೊಡಗಿನ ಮೂಲಕ ಕೇರಳಕ್ಕೆ ಸಾಗಾಣಿಕೆ ಮಾಡುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ತಿತಿಮತಿ ಬಳಿಯ ಮತ್ತಿಗೋಡು ಸಾಕಾನೆ ಶಿಬಿರ ಬಳಿ ಗೋಣಿಕೊಪ್ಪ ಪೊಲೀಸರು ದಾಳಿ ನಡೆಸಿದ ವೇಳೆ ಗಾಂಜಾ ಇರುವುದು ಪತ್ತೆಯಾಗಿದೆ.
ವೀರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್ ಮಾರ್ಗದರ್ಶನದಲ್ಲಿ ಸಿಪಿಐ ಶಿವರಾಜ್ ಮುಧೋಳ್ ನಿರ್ದೇಶನ ಮೇರೆ ಗೋಣಿಕೊಪ್ಪ ಎಸ್.ಐ. ರೂಪಾದೇವಿ ಬೀರದಾರ್ ದಾಳಿ ನಡೆಸಿದ್ದು, ಮಾಲು ಸಹಿತ ಗಾಂಜಾ ಪೆಡ್ಲರ್ಗಳು ಪೊಲೀಸರ ಅತಿಥಿಯಾಗಿದ್ದಾರೆ. ಅವರ ಬಳಿ ಇದ್ದ ಮಾರುತಿ ರಿಡ್ಜ್ ಕಾರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳು ಮೂಲತಃ ಕೇರಳ ರಾಜ್ಯದ ಕೊಯಿಕ್ಕೋಡು ಜಿಲ್ಲೆಯ ತಾಮರಶೇರಿ ತಾಲೂಕು, ಅಂಬಾಯಿತ್ತೋಡು ಗ್ರಾಮದವರಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ಚಂದ್ರಶೇಖರ್, ತೇಜಸ್ ಕುಮಾರ್, ಸಜನ್ ಸೋಮಶೇಖರ್, ರವಿ ಇದ್ದರು.