ಕೊಳವೆ ಬಾವಿಗೆ ಬಿದ್ದಿದ್ದ ಬಾಲಕನ ರಕ್ಷಣೆ

ವಿಜಯಪುರ, ಏ. ೪: ಸತತ ೨೦ ಗಂಟೆಗಳ ಕಾರ್ಯಾಚರಣೆ ನಡೆಸಿದ ನಂತರ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ಕೊಳವೆ ಬಾವಿಗೆ ಬಿದ್ದಿದ್ದ ೨ ವರ್ಷದ ಬಾಲಕ ಸಾತ್ವಿಕ್‌ನನ್ನು ಸುರಕ್ಷಿತವಾಗಿ ಹೊರತಂದಿವೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಸತೀಶ್ ಮತ್ತು ಪೂಜಾ ದಂಪತಿಯ ಪುತ್ರ ಸಾತ್ವಿಕ್ ಬುಧವಾರ ಆಟವಾಡಲು ಹೋಗಿದ್ದ ವೇಳೆ ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿದ್ದ. ಸಂಜೆ ೫.೩೦ರ ಸುಮಾರಿಗೆ ಆತ ಕೊಳವೆಬಾವಿಗೆ ಬಿದ್ದಿದ್ದ. ಸಂಜೆ ೬ ಗಂಟೆಯಿAದಲೇ ರಕ್ಷಣಾ ಕಾರ್ಯಾಚರಣೆ ಆರಂಭವಾಗಿತ್ತು. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿ ಶಾಮಕ ಮತ್ತು ಪೊಲೀಸರು ಸತತವಾಗಿ ನಡೆಸಿದ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಮಧ್ಯಾಹ್ನ ೧.೪೪ಕ್ಕೆ ಮಗುವನ್ನು ಜೀವಂತವಾಗಿ ಹೊರ ತೆಗೆಯಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೯೦,೦೦೦ ಲೀಟರ್ ಮದ್ಯ ವಶಕ್ಕೆ

ದಕ್ಷಿಣ ಕನ್ನಡ, ಏ. ೪: ಲೋಕಸಭಾ ಚುನಾವಣೆ ೨೦೨೪ಕ್ಕೆ ನೀತಿ ಸಂಹಿತೆ ಜಾರಿಯಲ್ಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳು ೯೦,೪೪೩ ಲೀಟರ್‌ಗಳಷ್ಟು ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ನೀತಿ ಸಂಹಿತೆ ಜಾರಿಯಾದಾಗಿನಿಂದಲೂ ೧,೯೫,೪೭,೧೭೯ ರೂಪಾಯಿ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದ್ದರೆ, ತಾ. ೩ ರಂದು ರೂ. ೮,೬೯,೯೫೦ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಈವರೆಗೆ ೨೭೮ ಎಫ್.ಐ.ಆರ್. ದಾಖಲಾಗಿದೆ. ರಾಜ್ಯದಲ್ಲಿ ಲೋಕಸಭೆಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ತಾ. ೨೬ ರಂದು ಮೊದಲ ಹಂತದಲ್ಲಿ ನಡೆದರೆ ಮೇ ೭ ರಂದು ೨ನೇ ಹಂತದಲ್ಲಿ ಮತದಾನ ನಡೆಯಲಿದೆ.

ಮೋದಿಯವರೆ ಜನರಿಗೆ ಉತ್ತರಿಸಿ-ಸಿಎಂ ಆಗ್ರಹ

ಚಿತ್ರದುರ್ಗ, ಏ. ೪: ಮಿಸ್ಟರ್ ಮೋದಿಯವರೇ? ಆಪರೇಷನ್ ಕಮಲಕ್ಕೆ ಸಾವಿರಾರು ಕೋಟಿ ಎಲ್ಲಿಂದ ಬಂತು, ಕಾಂಗ್ರೆಸ್ ಮತ್ತು ಬೇರೆ ಪಕ್ಷದ ಶಾಸಕರುಗಳಿಗೆ ಕೋಟಿ ಕೋಟಿ ಕೊಡುವುದಕ್ಕೆ ಸಾವಿರಾರು ಕೋಟಿ ಹಣ ಎಲ್ಲಿಂದ ಬಂತು. ಅದು ಕಪ್ಪು ಹಣ ಅಲ್ಲವೇ ದೇಶದ ಜನಕ್ಕೆ ಉತ್ತರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು. ಚಿತ್ರದುರ್ಗ ಲೋಕಸಭಾ ಅಭ್ಯರ್ಥಿ ಚಂದ್ರಪ್ಪ ಅವರ ಪರವಾಗಿ ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬ ಭಾರತೀಯನ ಕುಟುಂಬಕ್ಕೆ ೧೫ ಲಕ್ಷ ರೂಪಾಯಿ ಕೊಡ್ತೀವಿ ಅಂದ್ರಲ್ಲಾ ಕೊಟ್ರಾ? ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂತ ಭಾಷಣ ಮಾಡಿದ್ರು. ಆದಾಯ ಒಂದು ರೂಪಾಯಿ ಕೂಡ ಹೆಚ್ಚಾಗಲಿಲ್ಲ. ವರ್ಷಕ್ಕೆ ೨ ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದ್ರಲ್ಲಾ? ಮಾಡಿದ್ರಾ ಮೋದಿಯವರೇ? ಪೆಟ್ರೋಲ್, ಡೀಸೆಲ್, ಅಡುಗೆ ಗ್ಯಾಸ್, ರಸಗೊಬ್ಬರ, ಎಣ್ಣೆ, ಕಾಳು ಬೇಳೆ ಎಲ್ಲವೂ ಅತ್ಯಂತ ಕಡಿಮೆ ಬೆಲೆಗೆ ಸಿಗುವಂತೆ ಮಾಡ್ತೀನಿ ಅಂದಿದ್ರಲ್ಲಾ ಮಾಡಿದ್ರಾ ಮಿಸ್ಟರ್ ಮೋದಿ? ಎಂದು ಪ್ರಶ್ನಿಸಿದರು.

ನನ್ನ ಭೇಟಿಗೆ ಅಮಿತ್ ಶಾ ನಿರಾಕರಿಸಿದ್ದಾರೆ-ಈಶ್ವರಪ್ಪ

ಬೆಂಗಳೂರು, ಏ. ೪: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು, ತಾವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿಲ್ಲ ಎಂದು ಗುರುವಾರ ಹೇಳಿದ್ದಾರೆ. ದೆಹಲಿಗೆ ಬರುವಂತೆ ಈಶ್ವರಪ್ಪಗೆ ಅಮಿತ್ ಶಾ ಬುಲಾವ್ ನೀಡಿದ್ದರು. ಅಮಿತ್ ಶಾ ಭೇಟಿಗಾಗಿ ದೆಹಲಿಗೆ ಹೋಗಿದ್ದ ಈಶ್ವರಪ್ಪಗೆ ಭೇಟಿಗೆ ಸಮಯ ನೀಡಲಾಗಿಲ್ಲ. ಹೀಗಾಗಿ ಬರಿಗೈಯಲ್ಲಿ ವಾಪಸ್ ಆಗಿದ್ದಾರೆ. "ಅಮಿತ್ ಶಾ ದೆಹಲಿಗೆ ಬರುವಂತೆ ಹೇಳಿದ್ದರು. ನಾನು ಅಲ್ಲಿಗೆ ಹೋಗದಿದ್ದರೆ ಅವರು ನನ್ನನ್ನು ದುರಹಂಕಾರಿ ಎಂದು ಕರೆಯುತ್ತಿದ್ದರು. ಹೀಗಾಗಿ ನಾನು ದೆಹಲಿಗೆ ಹೋದೆ. ನನಗೆ ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ನಾನು ಕೆಲವು ಪ್ರಶ್ನೆಗಳನ್ನು ಕೇಳಿದ್ದರಿಂದ ಸಭೆ ನಡೆಯಲಿಲ್ಲ ಎಂದು ಭಾವಿಸುತ್ತೇನೆ. ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಅವರಿಗೆ ಕಷ್ಟಕರವಾಗಿತ್ತು" ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಹೇಳಿದ್ದಾರೆ.

ಪ್ರಿಯತಮೆ, ಆಕೆಯ ಸ್ನೇಹಿತನಿಗೆ ಗುಂಡು ಹಾರಿಸಿ, ಆತ್ಮಹತ್ಯೆಗೆ ಶರಣಾದ ‘ಭಗ್ನ ಪ್ರೇಮಿ'

ಇಂದೋರ್, ಏ. ೪: ಪ್ರೀತಿ ನಿರಾಕರಿಸಿದ ಕಾರಣಕ್ಕೇ 'ಭಗ್ನ ಪ್ರೇಮಿ'ಯೊಬ್ಬ ತನ್ನ ಪ್ರಿಯತಮೆ ಮತ್ತು ಆಕೆಯ ಸ್ನೇಹಿತನಿಗೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಗುರುವಾರ ಮಧ್ಯಾಹ್ನ ಮಧ್ಯಪ್ರದೇಶದ ಇಂದೋರ್‌ನ ಭನ್ವಾರ್ಕುವಾನ್‌ನಲ್ಲಿರುವ ಸ್ವಾಮಿ ನಾರಾಯಣ ಮಂದಿರ ಕ್ಯಾಂಪಸ್‌ನಲ್ಲಿ ಈ ದಾರುಣ ಘಟನೆ ನಡೆದಿದ್ದು, ಅಭಿಷೇಕ್ ಯಾದವ್ (೨೬ ವರ್ಷ) ಎಂಬ ಭಗ್ನ ಪ್ರೇಮಿ, ಸ್ನೇಹಲತಾ ಜಾಟ್ (೨೨ ವರ್ಷ) ಮತ್ತು ಅವಳ ಸ್ನೇಹಿತ ದೀಪಕ್ ಜಾಟ್ (೨೫ ವರ್ಷ) ಎಂಬವರ ಮೇಲೆ ಗುಂಡು ಹಾರಿಸಿದ್ದಾನೆ. ಇಬ್ಬರ ಮೇಲೆ ಗುಂಡು ಹಾರಿಸಿದ ಬಳಿಕ ಸ್ವಲ್ಪದೂರ ಹೋಗಿ ತಾನೂ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ಮೂವರನ್ನೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಈ ವೇಳೆ ಹುಡುಗಿ ಸ್ನೇಹಲತಾ ಪರಿಸ್ಥಿತಿ ಗಂಭೀರವಾಗಿದ್ದು, ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಗುಂಡೇಟು ತಿಂದ ಆಕೆಯ ಸ್ನೇಹಿತ ದೀಪಕ್ ಜಾಟ್ ಮತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಭಗ್ನ ಪ್ರೇಮಿ ಅಭಿಷೇಕ್ ಯಾದವ್ ಇಬ್ಬರೂ ಸಾವಿಗೀಡಾಗಿದ್ದಾರೆ. ಸ್ವಾಮಿ ನಾರಾಯಣ ದೇವಸ್ಥಾನದ ಆವರಣದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿ ಮತ್ತು ಆಕೆಯ ಸ್ನೇಹಿತ ದರ್ಶನಕ್ಕೆ ಬಂದಿದ್ದರು. ಆಗಲೇ ಇನ್ನೊಬ್ಬ ಯುವಕ (ಅಭಿಷೇಕ್ ಯಾದವ್) ಅಲ್ಲಿಗೆ ಬಂದು ಇಬ್ಬರನ್ನೂ ಒಟ್ಟಿಗೆ ನೋಡಿ ಆಕ್ರೋಶದಿಂದ ಇಬ್ಬರಿಗೂ ಗುಂಡು ಹಾರಿಸಿದ್ದಾನೆ. ಗುಂಡು ಹಾರಿಸಿದ ಅಭಿಷೇಕ್ ಯಾದವ್ ಸ್ನೇಹಲತಾಳನ್ನು ಪ್ರೀತಿಸುತ್ತಿದ್ದ. ಆದರೆ ಸ್ನೇಹಲತಾ ಮಾತ್ರ ಆತನ ಪ್ರೇಮ ನಿರಾಕರಿಸಿದ್ದಳು ಎಂದು ಹೇಳಲಾಗಿದೆ.