ಶನಿವಾರಸಂತೆ, ಏ. ೩: ಪಟ್ಟಣದಿಂದ ೩ ಕಿ.ಮೀ. ದೂರದ ಚಿಕ್ಕಕೊಳತ್ತೂರು ಗ್ರಾಮದಲ್ಲಿ ೪೦೦ ವರ್ಷಗಳ ಇತಿಹಾಸವಿರುವ ಬಾವಿ ಬಸವೇಶ್ವರ ದೇವಾಲಯದಲ್ಲಿ ದೇವರ ಆರಾಧನಾ ಮಹೋತ್ಸವ ಸೋಮವಾರ ಶ್ರದ್ಧಾಭಕ್ತಿಯಿಂದ ನೆರವೆರಿತು. ಸುತ್ತಲಿನ ವಿವಿಧ ಗ್ರಾಮಗಳಿಂದ ಬಂದಿದ್ದ ಸಾವಿರಾರು ಭಕ್ತರು ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು.

ವಿಶೇಷ: ಪ್ರತಿವರ್ಷ ಶಿವರಾತ್ರಿ ಹಬ್ಬದ ನಂತರ ಯುಗಾದಿ ಹಬ್ಬದ ಒಳಗೆ ಇಲ್ಲಿ ವಾರ್ಷಿಕ ವಿಶೇಷ ಪೂಜೆ ನಡೆಯುವುದು ಸಂಪ್ರದಾಯವಾಗಿದೆ.

ಪ್ರಕೃತಿಯ ಹಸಿರ ಸಿರಿಯ ನಡುವೆ ಮೇಲ್ಭಾಗದಲ್ಲಿ ಉದ್ಭವ ಬಸವೇಶ್ವರ ದೇವರ ಗುಡಿಯಿದೆ. ಕೆಳಭಾಗದಲ್ಲಿ ಸಿಹಿ ನೀರಿನ ತೀರ್ಥ ಕೊಳವಿದೆ. ಇದಕ್ಕೆ ಹೊಂದಿಕೊAಡAತೆ ಕೆರೆ ಇದೆ.ಮಹೋತ್ಸವದಲ್ಲಿ ಪಾಲ್ಗೊಂಡ ಭಕ್ತರು ಹೂ, ಹಣ್ಣು-ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿದರು. ನಂತರ ತೀರ್ಥದ ಕೊಳಕ್ಕೆ ಹರಕೆ ರೂಪದಲ್ಲಿ ನಾಣ್ಯ ಹಾಕಿ ತೀರ್ಥ ತೆಗೆದುಕೊಂಡು ಹೋದರು. ಈ ತೀರ್ಥವನ್ನು ಜಾನುವಾರುಗಳಿಗೆ ಕುಡಿಸಿದರೆ ವಿವಿಧ ಕಾಯಿಲೆ ವಾಸಿಯಾಗುವುದು ಎಂಬ ನಂಬಿಕೆ ರೈತರಲ್ಲಿದೆ. ಉತ್ಸವಕ್ಕೆ ಬಂದಿದ್ದ ಹಲವು ಭಕ್ತರು ತಮ್ಮ ಮಕ್ಕಳ ಮುಡಿ ತೆಗೆಸಿದರು. ಹರಕೆ ಹೊತ್ತವರು ಈಡುಗಾಯಿ ಹೊಡೆದು ಭಕ್ತಿ ಸಮರ್ಪಿಸಿದರು. ಮಹಿಳೆಯರು, ಮಕ್ಕಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅನ್ನಸಂತರ್ಪಣೆ ನಡೆಯಿತು. ಗ್ರಾಮದ ಮುಖಂಡರಾದ ಗಣಪತಿ, ಸಿ.ಜೆ. ಗಿರೀಶ್, ಡಿ.ಪಿ. ಬೋಜಪ್ಪ, ಮಂಜುನಾಥ್, ಸುನೀಲ್, ಬೆಳ್ಳಿಯಪ್ಪ, ಕೊಮಾರಪ್ಪ, ಚಂದ್ರಪ್ಪ, ಮತ್ತಿತರರು ಮಹೋತ್ಸವದ ನೇತೃತ್ವವನ್ನು ವಹಿಸಿದ್ದರು. ಯುವಕರ ತಂಡ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸಿತು.