ಅಮ್ಮತ್ತಿ, ಏ. ೩: ಅಮ್ಮತ್ತಿ-ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಡೇಶ್ವರಿ ನಗರದಲ್ಲಿ ವಿದ್ಯುತ್ ಕಡಿತ ಮತ್ತು ವೋಲ್ಟೇಜ್ ಇಲ್ಲದೆ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದು ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ವೀರಾಜಪೇಟೆ ಎಇ ಅವರಿಗೆ ಮನವಿ ಸಲ್ಲಿಸಲಾಯಿತು.

ಕಾರ್ಮಾಡು ಚೌಡೇಶ್ವರಿ ನಗರದಲ್ಲಿ ನೂರಾರು ಕುಟುಂಬಗಳಿದ್ದು, ಪತ್ರಿನಿತ್ಯ ವಿದ್ಯುತ್ ಕಡಿತ ಹಾಗೂ ವೋಲ್ಟೇಜ್ ಸಮಸ್ಯೆಯಿಂದ ಬಳಲುತಿದ್ದಾರೆ ಎಂದು ಅಲ್ಲಿನ ನಿವಾಸಿ ಸನೀಲ್ ಆರೋಪಿಸಿದ್ದಾರೆ. ಪ್ರತಿನಿತ್ಯ ವೋಲ್ಟೇಜ್ ಇಲ್ಲದ ಕಾರಣ ಬಾವಿ ಮತ್ತು ಬೋರ್‌ನ ಮೋಟಾರ್ ಕೆಲಸ ಮಾಡದೆ ಕುಡಿಯಲು ನೀರು ಸಿಗದೆ ಮಕ್ಕಳು, ವಯಸ್ಕರು, ಅನಾರೋಗ್ಯ ಪೀಡಿತರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವೀರಾಜಪೇಟೆ ಎಇ ಸುರೇಶ್ ಅವರಿಗೆ ಮನವಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ಮನವಿಗೆ ಸ್ಪಂದಿಸಿ ಸ್ಥಳ ಪರಿಶೀಲನೆ ನಡೆಸಿದ ಸುರೇಶ್ ಅವರು ಸೂಕ್ತ ಜಾಗ ಗುರುತಿಸಿ ಶೀಘ್ರದಲ್ಲಿ ಟ್ರಾನ್ಸ್ಫಾರ್ಮರ್ ಅಳವಡಿಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಅಲ್ಲಿನ ನಿವಾಸಿಗಳಾದ ಸುಬ್ರಮಣಿ, ರವಿ, ಹ್ಯಾರಿಸ್ ಸೇರಿದಂತೆ ಇತರರು ಇದ್ದರು.