ಕಣಿವೆ, ಏ. ೩ : ಕಳೆದ ಒಂದೂವರೆ ವರ್ಷಗಳಿಂದ ಮಳೆಯಿಲ್ಲದ ಪರಿಣಾಮ ಅನ್ನದಾತನ ಬದುಕು ಬೀದಿಗೆ ಬಂದಿದೆ.
ಈ ನಡುವೆ ಮತದಾರರ ಮನದೊಳಗೆ ಭರವಸೆ ಸುರಿಸುವ ಚುನಾವಣೆ ಬೇರೆ ಬಂದಿದೆ. ಆದರೆ, ಅನ್ನದಾತನಿಗೆ ಅತಿ ಅಗತ್ಯವಾಗಿ ಪ್ರಸಕ್ತ ಸನ್ನಿವೇಶದಲ್ಲಿ ಬೇಕಿರುವುದು ಕೇವಲ ಮಳೆ... ಮಳೆ.... ಮಳೆ.
ಹೊಲ ಗದ್ದೆಗಳಲ್ಲಿ ಮಾಡಿರುವ ಬೆಳೆಗೆ ನೀರಿಲ್ಲ. ಕೊರೆದಿರುವ ಕೊಳವೆ ಬಾವಿಗಳಲ್ಲಿ ಮೊದಲೇ ನೀರಿಲ್ಲ. ಅದಿರಲಿ, ಅನ್ನದಾತನಿಗೆ ಆಸರೆಯಾಗಿರುವ ಜಾನುವಾರು ಗಳಿಗೂ ಕುಡಿಯುವ ನೀರಿಲ್ಲ.
ಹಾಗಾಗಿ ನಿತ್ಯವೂ ವರುಣ ದೇವನಿಗೆ ದೇವಾ ಮಳೆ ಸುರಿಸು ಎಂದು ಆಗಸವನ್ನೇ ನೋಡುತ್ತಾ ಆಗಸದಲ್ಲಿ ಕಾಣುವ ಮೋಡಗಳನ್ನು ಕಂಡು ಕರಮುಗಿದು ಬೇಡಿದರೂ ಕೂಡ ಮಳೆ ಸುರಿಯುತ್ತಿಲ್ಲ.
ಕುಶಾಲನಗರ ವ್ಯಾಪ್ತಿಯಲ್ಲಿ ಅನೇಕ ಮಂದಿ ಬೇಸಿಗೆ ಕಾಲದಲ್ಲಿ ಬಿತ್ತನೆ ಮಾಡುವ ಹಣದ ಬೆಳೆ ಶುಂಠಿ ಬಿತ್ತನೆ ಮಾಡಿದ್ದು ನೀರಿಲ್ಲದ ಕಾರಣ ನಿತ್ಯವೂ ಮಳೆಗಾಗಿ ಪೂಜಿಸುತ್ತಾ ಪ್ರಾರ್ಥಿಸುತ್ತಾ, ಸಂಕಟದಲ್ಲಿ ದಿನಗಳೆಯುತ್ತಿದ್ದಾರೆ. ಆದರೆ ಮಳೆಯ ಮೋಡಗಳು ರೈತನ ನೆತ್ತಿಯ ಮೇಲೆ ತೇಲಿ ಹೋಗುತ್ತಿ ವೆಯೇ ಹೊರತು ಮಳೆಯನ್ನು ಮಾತ್ರ ಸುರಿಸುತ್ತಿಲ್ಲ. -ಮೂರ್ತಿ