ಕಣಿವೆ, ಏ. ೨: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಹಾರಂಗಿ ಜಲಾಶಯದ ಬಲಬದಿಯ ೧೦೦ ಎಕರೆಯಷ್ಟು ಇರುವ ವಿಶಾಲ ಅರಣ್ಯ ಪ್ರದೇಶದಲ್ಲಿ ಕಳೆದ ಒಂದು ವರ್ಷದ ಹಿಂದೆ ಅರಣ್ಯ ಇಲಾಖೆಯಿಂದ ಆರಂಭಿಸಿರುವ ಜಿಲ್ಲೆಯ ಎರಡನೆ ಸಾಕಾನೆ ಶಿಬಿರಕ್ಕೆ ಪ್ರಮುಖವಾಗಿ ರಸ್ತೆಯೇ ಇಲ್ಲದ ಪರಿಣಾಮ ಬಹಳ ದೂರದ ಊರುಗಳಿಂದ ಈ ಶಿಬಿರ ನೋಡಲೆಂದು ಧಾವಿಸುವ ಪ್ರವಾಸಿಗರು ಬಾಯ್ದೆರೆದು ನಿಂತ ಕಲ್ಲು ರಾಶಿಗಳ ನಡುವೆ ಹೆಜ್ಜೆ ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಇಲ್ಲಿನ ಶಿಬಿರ ವೀಕ್ಷಣೆಗೆ ಬರುವ ಪ್ರವಾಸಿಗರಿಂದ ವಾಹನ ನಿಲುಗಡೆಗೆ ರೂ. ೩೦ ಹಾಗೂ ಪ್ರವಾಸಿಗರು ಒಳತೆರಳಲು ತಲಾ ಒಬ್ಬರಿಗೆ ರೂ. ೫೦ ಸಂಗ್ರಹಿಸುತ್ತಾ ರಾದರೂ ಸೂಕ್ತ ರಸ್ತೆ ನಿರ್ಮಿಸುವಲ್ಲಿ ವಿಳಂಬ ಮಾಡಲಾಗಿದೆ.

ಆರಂಭದಲ್ಲಿ ನಿರ್ಮಿಸಿದ್ದ ಕಲ್ಲು ರಸ್ತೆ

ಶಿಬಿರವನ್ನು ಆರಂಭಿಸುವ ಸಂದರ್ಭ ಅರಣ್ಯ ಪ್ರದೇಶದ ಕಚ್ಚಾ ರಸ್ತೆಯನ್ನು ಅಗೆದು ಮಳೆಗಾಲದಲ್ಲಿ ಇಲ್ಲಿ ಧಾವಿಸುವ ಮಂದಿ ಜಾರಬಾರದೆಂಬ ಕಾರಣಕ್ಕೆ ಸಣ್ಣ ಕಲ್ಲುಗಳನ್ನು ಹರಡಿ ಅಳವಡಿಸಿದ್ದ ರಸ್ತೆ ಇದೀಗ ಕಿತ್ತು ನಿಂತಿದೆ. ಹಾಗಾಗಿ, ಈ ರಸ್ತೆಯಲ್ಲಿ ವಯಸ್ಸಾದವರು ಅಥವಾ ಮಕ್ಕಳು ಹೆಜ್ಜೆ ಇಡುವಾಗ ಆಯ ತಪ್ಪಿ ಕೆಳಗೆ ಬಿದ್ದರೆ ಹೆಚ್ಚು ಅಪಾಯವಾಗುವ ಸಂಭವ ಇದೆ. ಹಾಗಾಗಿ ಅರಣ್ಯ ಇಲಾಖೆ ಅಧಿಕಾ ರಿಗಳು ಕೂಡಲೇ ಇಲ್ಲಿ ಸುಸಜ್ಜಿತ ರಸ್ತೆ ನಿರ್ಮಿಸಬೇಕೆಂಬುದು ಪ್ರವಾಸಿಗರ ಆಗ್ರಹವಾಗಿದೆ.

ಮುಖ್ಯ ರಸ್ತೆಯಿಂದ ಒಂದು ಕಿಮೀ ಪಾದಯಾತ್ರೆ

ಶಿಬಿರಕ್ಕೆ ಧಾವಿಸುವ ಪ್ರವಾಸಿಗರು ಹಾರಂಗಿಗೆ ಪ್ರವೇಶವಾದ ಬಳಿಕ ಅಳವಡಿಸಿರುವ ಅರಣ್ಯ ಇಲಾಖೆಯ ಪ್ರವೇಶ ದ್ವಾರದಿಂದ ಒಂದು ಕಿ.ಮೀ. ಕಾಲ್ನಡಿಗೆಯಲ್ಲಿ ಸಾಕಾನೆ ಶಿಬಿರವನ್ನು ನೋಡಬಹುದಾಗಿದೆ. ಜೊತೆಗೆ ಸಂಜೆ ವೇಳೆಯಲ್ಲಿ ಒಂದೆಡೆ ಗಿಡ ಮರಗಳು ಹಾಗೂ ಜಲರಾಶಿಯ ನಡುವೆ ಕಾಣುವ ನಯನ ಮನೋಹರ ಪ್ರಕೃತಿ ವೈಭವವನ್ನು ಕಣ್ತುಂಬಿಕೊಳ್ಳ ಬಹುದಾಗಿದೆ.

ಶಿಬಿರಕ್ಕೆ ಕಾಲ್ನಡಿಗೆಯಲ್ಲಿ ಪ್ರಯಾಸದಿಂದ ಧಾವಿಸಿ ಬರುವ ಪ್ರವಾಸಿಗರಿಗೆ ಆಯಾಸವಾದಾಗ ಏನಾದರೂ ಸವಿಯಲು ಅಥವಾ ತಿನ್ನಲು ಬೇಕಾದಂತಹ ಕ್ಯಾಂಟೀನ್ ಅಥವಾ ಅಂಗಡಿಗಳು ಇಲ್ಲಿ ಅಗತ್ಯವಿದೆ ಎಂದು ಪ್ರವಾಸಿಗರು ಒತ್ತಾಯಿಸಿದ್ದಾರೆ.

ಹಾರಂಗಿ ಜಲಾಶಯದಲ್ಲಿ ಸಂಗ್ರಹವಿರುವ ನೀರಿ£ Àಲ್ಲಿ ಸಾಕಾನೆಗಳಿಗೆ ನೀರು ಕುಡಿಯಲು ಅಥವಾ ಸ್ನಾನ ಮಾಡಿಸಲು ಒಯ್ಯುತ್ತಿಲ್ಲ. ಏಕೆಂದರೆ ನೀರಿನ ತೀರದಲ್ಲಿ ಕೆಸರಿನೋಕುಳಿ ಇರುವ ಕಾರಣ ಸಾಕಾನೆಗಳ ಕಾಲುಗಳು ಹೂಳುವ ಅಪಾಯವಿರುವುದು ಒಂದೆಡೆಯಾದರೆ, ನೀರಿನೊಳಗೆ ಸಾಕಾನೆಗಳನ್ನು ಮಾವುತರು ಕರೆದೊಯ್ದಾಗ ನೀರನ್ನು ಕಂಡು ಸಂಭ್ರಮಿಸುವ ಕೆಲವು ಸಾಕಾನೆಗಳು ಜಲಾಶಯದ ನೀರಿನ ಬಹು ದೂರ ಸಾಗುತ್ತವೆ. ಇನ್ನು ಮದವೇರಿದ ಸಲಗಗಳು ನೀರನ್ನು ಹಾಯ್ದು ಈ ಕಡೆಯಿಂದ ಆ ಕಡೆಗೆ ದಾಟಿ ಅರಣ್ಯ ದಲ್ಲಿನ ಕಾಡಾನೆಗಳನ್ನು ಸಂದಿಸುವ ಅಪಾಯವೂ ಇರುವುದರಿಂದ ಕೃತಕವಾಗಿ ನಿರ್ಮಿಸಿರುವ ಕೆರೆಯಲ್ಲಿ ಇಲ್ಲಿನ ಆನೆಗಳ ದಾಹ ನೀಗಿಸುವುದಲ್ಲದೇ ಮಜ್ಜನವನ್ನೂ ಕೂಡ ಮಾಡಲಾಗುತ್ತಿದೆ.ಸುತ್ತಲೂ ಸೋಲಾರ್

ಬೇಲಿ ನಿರ್ಮಾಣ

ಬರೋಬ್ಬರಿ ನೂರು ಎಕರೆ ವಿಸ್ತೀರ್ಣದ ಶಿಬಿರದ ಸುತ್ತಲೂ ಅರಣ್ಯ ಇಲಾಖೆ ಸೋಲಾರ್ ತಂತಿ ಬೇಲಿ ನಿರ್ಮಾಣ ಮಾಡಿದೆ. ಹಾಗಾಗಿ ಸಾಕಾನೆಗಳು ಹೊರಹೋಗಲು ಆಗುತ್ತಿಲ್ಲ ಮತ್ತು ಕಾಡಾನೆಗಳು ಕೂಡ ಶಿಬಿರದೊಳಕ್ಕೆ ಬರದಂತೆ ಕ್ರಮ ವಹಿಸಲಾಗಿದೆ. ಒಟ್ಟಾರೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಬದ್ಧತೆ ವಹಿಸುವ ಮೂಲಕ ಶಿಬಿರವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಸೂಕ್ತ ಅನುದಾನ ಒದಗಿಸಬೇಕಿದೆ ಎಂಬುದು ಬಹಳಷ್ಟು ಪ್ರವಾಸಿಗರ ಒತ್ತಾಯ.

- ಕೆ.ಎಸ್. ಮೂರ್ತಿ