ಸೋಮವಾರಪೇಟೆ,ಏ.೨: ಅರಣ್ಯ ಇಲಾಖೆಯ ಅವೈಜ್ಞಾನಿಕ ‘ಅರಣ್ಯ-ವನ್ಯಜೀವಿ ನಿರ್ವಹಣೆ’ ವಿಧಾನಗಳಿಂದ ಸಾರ್ವಜನಿಕರು ಸಮಸ್ಯೆಗೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ.

ಆದರೆ ಪ್ರಸಕ್ತ ವರ್ಷ ಮಾತ್ರ ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಗ್ರಾಮ ಕಾಡಾನೆಗಳ ಬೀಡಾಗಿ ಪರಿವರ್ತನೆಯಾಗಿದೆ. ಮಕ್ಕಳು, ಮಹಿಳೆಯರು, ವೃದ್ಧರು ಮನೆಯಿಂದ ಹೊರಬರಲೂ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಭಾಗದ ನಿವಾಸಿಗಳ ಗೋಳು ಮುಗಿಯವ ಲಕ್ಷಣ ಕಾಣಿಸುತ್ತಿಲ್ಲ.

ಕಾಜೂರು ಭಾಗದಲ್ಲಿ ಬೀಡುಬಿಟ್ಟಿರುವ ಒಂಟಿ ಸಲಗವೊಂದು ಸ್ಥಳೀಯರ ಮೇಲೆ ಆಗಾಗ್ಗೆ ಧಾಳಿ ನಡೆಸುತ್ತಿದ್ದು, ಯಾವ ಸಂದರ್ಭ ಪ್ರಾಣಹಾನಿಯಾಗಲಿದೆಯೋ ಎಂದು ಹೇಳಲಿಕ್ಕಾಗದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಕಾಜೂರು, ಸಜ್ಜಳ್ಳಿ, ಐಗೂರಿನ ಅರಣ್ಯಕ್ಕೆ ಒತ್ತಿಕೊಂಡಿರುವ ಜನವಸತಿ ಪ್ರದೇಶ, ಕಾಫಿ ತೋಟಗಳೀಗ ಕಾಡಾನೆಗಳ ಕಾರಿಡಾರ್‌ಗಳಾಗಿ ಮಾರ್ಪಟ್ಟಿವೆ. ಇಲ್ಲಿ ಮನುಷ್ಯರು ಜೀವ ಕೈಯಲ್ಲಿಡಿದು ಓಡಾಡಬೇಕಿದ್ದು, ಕಾಡಾನೆಗಳು ರಾಜಾರೋಷವಾಗಿ ಎಲ್ಲೆಂದರಲ್ಲಿ ಸಂಚರಿಸುತ್ತಿವೆ.

ಆಹಾರ, ನೀರನ್ನರಸಿ ಬರುವ ಕಾಡಾನೆಗಳು ಈ ಭಾಗದಲ್ಲೇ ಕಳೆದ ೩ ತಿಂಗಳಿನಿAದ ಮೊಕ್ಕಾಂ ಹೂಡಿದ್ದು, ಸ್ಥಳೀಯರು ಜೀವ ಕೈಯಲ್ಲಿಡಿದು ದಿನ ದೂಡುತ್ತಿದ್ದಾರೆ. ದ್ವಿಚಕ್ರ ವಾಹನಗಳ ಸವಾರರ ಮೇಲೆ ಆನೆಗಳು ಅನೇಕ ಬಾರಿ ಮುಗಿ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ. ಪ್ರಾಣ ಹಾನಿ ಸಂಭವಿಸುವ ಮುನ್ನ ಈ ಭಾಗದಲ್ಲಿ ಸಾರ್ವಜನಿಕರ ಮೇಲೆ ಧಾಳಿಗೆ ಮುಂದಾಗುತ್ತಿರುವ ಒಂಟಿ ಸಲಗವನ್ನು ಸೆರೆಹಿಡಿಯಬೇಕೆಂದು ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಬೆಳಿಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಕಾಡಾನೆಗಳ ಓಡಾಟ ಹೆಚ್ಚಿದ್ದು, ಈ ಸಮಯದಲ್ಲಿ ಸಂಚರಿಸುವ ಮಂದಿ ಮೈಯೆಲ್ಲಾ ಕಣ್ಣಾಗಿಸಿಕೊಂಡು ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕಿದೆ. ಕಳೆದ ಮೂರು ತಿಂಗಳಿನಿAದ ಈ ಭಾಗದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು, ಕಾಫಿ ತೋಟ, ರಾಜ್ಯ ಹೆದ್ದಾರಿ, ಜನವಸತಿ ಪ್ರದೇಶಗಳಲ್ಲಿ ಓಡಾಡುತ್ತಿವೆ.

ಅರಣ್ಯ ಭಾಗದಲ್ಲಿ ಆನೆಗಳ ಓಡಾಟಕ್ಕೆ ತಡೆಹಾಕಲೆಂದು ಅರಣ್ಯ ಇಲಾಖೆ ಕೋಟ್ಯಾಂತರ ವೆಚ್ಚದಲ್ಲಿ ರೈಲ್ವೇ ಬ್ಯಾರಿಕೇಡ್ ಅಳವಡಿಸಿದೆ. ಆದರೆ ಕಾಡಾನೆಗಳಿಗೆ ತಡೆ ಹಾಕುವಲ್ಲಿ ಬ್ಯಾರಿಕೇಡ್ ವಿಫಲವಾಗಿದೆ. ಇತ್ತೀಚೆಗಷ್ಟೇ ಬ್ಯಾರಿಕೇಡ್ ಕಾಮಗಾರಿ ಮುಕ್ತಾಯಗೊಂಡಿದ್ದು, ಕೆಲವೆಡೆ ಈ ಬ್ಯಾರಿಕೇಡ್‌ಗಳನ್ನು ಮುರಿದು, ಇನ್ನು ಕೆಲವೆಡೆ ಬ್ಯಾರಿಕೇಡ್‌ನೊಳಗೆ ನುಗ್ಗಿ ಕಾಡಾನೆಗಳು ಗ್ರಾಮಗಳಿಗೆ. ಕಾಫಿ ತೋಟಗಳಿಗೆ ಹಾಜರಾಗುತ್ತಿವೆ.

ಕಾಜೂರು, ಸಜ್ಜಳ್ಳಿ, ಯಡವಾರೆ ಭಾಗದಲ್ಲಿ ೩ ತಿಂಗಳ ಮರಿಯಾನೆ ಸಹಿತ ಒಟ್ಟು ೬ ಕಾಡಾನೆಗಳು ಬೀಡುಬಿಟ್ಟಿವೆ. ಮರಿಯಾನೆ ಸಲೀಸಾಗಿ ಬ್ಯಾರಿಕೇಡ್ ದಾಟಿ ಅರಣ್ಯ ಭಾಗಕ್ಕೆ ತೆರಳಿದರೆ, ದೊಡ್ಡ ಆನೆಗಳು ರೈಲ್ವೇ ಬ್ಯಾರಿಕೇಡ್‌ಗಳನ್ನು ದಾಟಿ, ಆನೆ ಕಂದಕವನ್ನು ಹಾರಿ ಜನವಸತಿ ಪ್ರದೇಶಕ್ಕೆ ಬರುತ್ತಿವೆ. ಕೋಟ್ಯಾಂತರ ರೂಪಾಯಿ ವ್ಯಯ ಮಾಡಿ ಅಳವಡಿಸಿರುವ ರೈಲ್ವೇ ಬ್ಯಾರಿಕೇಡ್ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬAತಾಗಿದೆ.

ಕಾಡಾನೆಗಳು ರೈಲ್ವೇ ಬ್ಯಾರಿಕೇಡ್ ದಾಟಿಕೊಂಡು ಗ್ರಾಮದೊಳಗೆ ಬರುತ್ತಿವೆ. ಕೆಲವು ಕಾಡಾನೆಗಳು ಗೇಟ್ ತೆರೆದು ಒಳಪ್ರವೇಶಿಸುತ್ತಿವೆ. ಕೋಟಿಗಟ್ಟಲೆ ಹಣ ವಿನಿಯೋಗಿಸಿ ಬ್ಯಾರಿಕೇಡ್ ಅಳವಡಿಸಿರುವುದು ಯಾವ ಪುರುಷಾರ್ಥಕ್ಕೆ ಎಂಬುದು ತಿಳಿಯುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಡಾನೆಗಳ ಚಲನವಲನ ಅರಿತು ಜನವಸತಿ ಪ್ರದೇಶಕ್ಕೆ ಆಗಮಿಸದಂತೆ ಅರಣ್ಯಕ್ಕೆ ಅಟ್ಟಲು ಎಲಿಫೆಂಟ್ ಟಾಸ್ಕ್ ಫೋರ್ಸ್ ಸಿಬ್ಬಂದಿಗಳು, ಆರ್‌ಆರ್‌ಟಿ ಸಿಬ್ಬಂದಿಗಳನ್ನು ಇಲಾಖೆ ನಿಯೋಜಿಸಿದೆ. ಇದೀಗ ಮೂವರು ಟಾಸ್ಕ್ ಫೋರ್ಸ್ ಸಿಬ್ಬಂದಿಗಳು ಮಾತ್ರ ಈ ಭಾಗದಲ್ಲಿದ್ದು, ಆರ್‌ಆರ್‌ಟಿ ಸಿಬ್ಬಂದಿಗಳನ್ನು ಯಡಪಾರೆ ಭಾಗದಲ್ಲಿ ಅರಣ್ಯ ಕಾಯಲು ನಿಯೋಜಿಸಲಾಗಿದೆ. ಇದರಿಂದಾಗಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಅಸಾಧ್ಯವಾಗಿದೆ.

ಈ ಕಾಡಾನೆಗಳ ಪೈಕಿ ಒಂಟಿ ಸಲಗವೊಂದು ರೋಷದಿಂದ ಸಂಚರಿಸುತ್ತಿದೆ. ಬೈಕ್ ಸವಾರರ ಮೇಲೆ ಆಗಾಗ್ಗೆ ಧಾಳಿ ನಡೆಸುತ್ತಿದೆ. ಬ್ಯಾರಿಕೇಡ್, ಕಂದಕ, ಸೋಲಾರ್ ಬೇಲಿಗಳು ಈ ಆನೆಯ ಓಡಾಟಕ್ಕೆ ತಡೆಯೊಡ್ಡುವಲ್ಲಿ ವಿಫಲವಾಗಿದೆ. ಸಾರ್ವಜನಿಕರ ಮೇಲೆ ನಿರಂತರ ಧಾಳಿಗೆ ಮುಂದಾಗುತ್ತಿರುವ ಈ ಸಲಗವನ್ನು ತಕ್ಷಣ ಸೆರೆಹಿಡಿದು ಸ್ಥಳಾಂತರ ಮಾಡಬೇಕೆಂದು ಈ ಭಾಗದ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ. - ವಿಜಯ್ ಹಾನಗಲ್