(ವಿಶೇಷ ವರದಿ : ಹೆಚ್.ಕೆ.ಜಗದೀಶ್)

ಗೋಣಿಕೊಪ್ಪಲು.ಏ.೨: ಬಹುನಿರೀಕ್ಷಿತ ದಕ್ಷಿಣ ಕೊಡಗಿನ ತಿತಿಮತಿ ಬಳಿಯ ಮತ್ತಿಗೋಡು ಸಾಕಾನೆ ಶಿಬಿರವು ಪ್ರವಾಸಿಗರಿಗೆ ಮುಕ್ತವಾಗಿದ್ದು ಏ.೧ರಿಂದ ಸಾರ್ವಜನಿಕರಿಗೆ ಸಾಕಾನೆ ಶಿಬಿರಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಕೊಡಗು-ಮೈಸೂರು ಮುಖ್ಯರಸ್ತೆಯ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ, ಗಡಿಭಾಗ ಆನೆಚೌಕೂರು ಸಮೀಪವಿರುವ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಮುಂಜಾನೆ ಹಾಗೂ ಸಂಜೆಯ ವೇಳೆಯಲ್ಲಿ ಮಾತ್ರವೇ ಆನೆಗಳನ್ನು ಅತ್ಯಂತ ಸಮೀಪದಿಂದ ವೀಕ್ಷಣೆ ಮಾಡುವ ಅವಕಾಶವನ್ನು ಇಲಾಖೆಯೇ ಒದಗಿಸಿದೆ.

ಇದರಿಂದಾಗಿ ಕೊಡಗಿನ ಪ್ರವಾಸಿ ತಾಣಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಗೊಂಡAತಾಗಿದೆ. ತಿತಿಮತಿ ಆನೆ ಚೌಕೂರು ಬಳಿಯ ಮತ್ತಿಗೋಡು ಸಾಕಾನೆ ಶಿಬಿರವು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ೧ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಂಡಿರುವ ಸಾಕಾನೆ ಶಿಬಿರದಲ್ಲಿ ಅಭಿಮನ್ಯು ಸೇರಿದಂತೆ ೧೭ ಆನೆಗಳನ್ನು ಪ್ರವಾಸಿಗರು ಸಮೀಪದಿಂದ ನೋಡುವ ಸೌಭಾಗ್ಯ ಒದಗಿಬಂದಿದೆ. ಮೊದಲ ದಿನವೇ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು ಆರಂಭ ದಿನದಲ್ಲಿ ೬,೩೦೦ ಹಣ ಸಂಗ್ರಹವಾಗಿದೆ. ಬೆಳಿಗ್ಗೆ ೯ರಿಂದ ೧೦.೩೦ರವರೆಗೆ ಹಾಗೂ ಸಂಜೆ ೪ ಗಂಟೆಯಿAದ ೫.೩೦ರವರೆಗೆ ಸಾಕಾನೆ ಶಿಬಿರವು ಸಾರ್ವಜನಿಕರಿಗೆ ತೆರೆದಿರುತ್ತದೆ.

ಸಾಕಾನೆ ಶಿಬಿರದಲ್ಲಿ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ವಾಹನಗಳ ನಿಲುಗಡೆಗೆ ಸೌಲಭ್ಯ ಒದಗಿಸಲಾಗಿದೆ. ಮೈಸೂರು ದಸರಾದಲ್ಲಿ ಪ್ರಸಿದ್ದಿ ಪಡೆದಿರುವ ಅಭಿಮನ್ಯು ಸೇರಿದಂತೆ ೧೭ ಸಾಕಾನೆಗಳ ದರ್ಶನ ಲಭ್ಯವಿದೆ. ಶಿಬಿರದಲ್ಲಿರುವ ಸಾಕಾನೆಗಳ ಮಾಹಿತಿಗಳನ್ನು ತಿಳಿದುಕೊಳ್ಳುವ ಸಲುವಾಗಿ ಪ್ರವೇಶ ದ್ವಾರದಿಂದ ೧೭ ನಾಮಫಲಕಗಳನ್ನು ಅಳವಡಿಸ ಲಾಗಿದೆ. ಆನೆಗಳ ತೂಕ ಸೇರಿದಂತೆ ಆನೆಗಳ ಹೆಸರು ಇತ್ಯಾದಿ ಮಾಹಿತಿಗಳುಳ್ಳ ನಾಮಫಲಕ ಹೆಚ್ಚಾಗಿ ಆಕರ್ಷಿಸುತ್ತಿದೆ.

ಶಿಬಿರದ ಒಳಭಾಗಕ್ಕೆ ಆಗಮಿಸುತ್ತಿದ್ದಂತೆಯೇ ಆನೆಗಳನ್ನು ಎತ್ತರದ ಸ್ಥಳದಿಂದ ಕುಳಿತುಕೊಂಡು ವೀಕ್ಷಣೆ ಮಾಡಲು ವಿಸ್ತಾರವಾದ ಗ್ಯಾಲರಿ ಮಾದರಿಯ ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೆ ಶಿಬಿರದಲ್ಲಿ ಆನೆಗಳ ಬಗ್ಗೆ ಮಾಹಿತಿ ಪಡೆಯಲು ಮಾಹಿತಿ ಕೇಂದ್ರ ತೆರೆಯಲಾಗಿದೆ. ಮುಖ್ಯರಸ್ತೆಗೆ ಹೊಂದಿಕೊAಡಿರುವ ಈ ಪ್ರದೇಶದಲ್ಲಿ ಆನೆ ಶಿಬಿರಕ್ಕೆ ತೆರಳಲು ಬೃಹತ್ ದ್ವಾರವು ವಿಶೇಷವಾಗಿ ಆಕರ್ಷಿಸುತ್ತಿದೆ. ನಡೆದುಕೊಂಡು ತೆರಳುವ ರಸ್ತೆಗೆ ಗುಣಮಟ್ಟದ ಇಂಟರ್‌ಲಾಕ್ ಅಳವಡಿಸಲಾಗಿದೆ.

ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹಾಗೂ ಆನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಲಭಿಸುವ ಸಲುವಾಗಿ ಮತ್ತಿಗೋಡುವಿನಲ್ಲಿ ಆನೆಗಳ ವೀಕ್ಷಣೆಗೆ ಮುಕ್ತ ಅವಕಾಶ ಒದಗಿಸಲಾಗಿದೆ. ಕಳೆದ ೧ ವರ್ಷದಿಂದ ಈ ಶಿಬಿರವನ್ನು ಉನ್ನತೀಕÀರಣಗೊಳಿಸಲು ಯೋಜನೆಯನ್ನು ೧ ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಪಡಿಸುವ ಮೂಲಕ ಅನುಷ್ಠಾನಗೊಳಿಸಲಾಗಿದೆ. ಕಳೆದ ೧ ತಿಂಗಳ ಹಿಂದೆ ಸಾಕಾನೆ ಶಿಬಿರವನ್ನು ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟನೆಗೊಳಿಸಿದ್ದರು.

ನಾಗರಹೊಳೆ ವನ್ಯಜೀವಿ ವಲಯಕ್ಕೆ ಒಳಪಟ್ಟಿರುವ ಆನೆಚೌಕೂರು ಗಡಿಯಿಂದ ತಿತಿಮತಿ-ಗೋಣಿಕೊಪ್ಪ ಮುಖ್ಯರಸ್ತೆಯ ಸಮೀಪವಿರುವ ಮತ್ತಿಗೋಡು ಸಾಕಾನೆ ಶಿಬಿರವು ಇದೀಗ ಜನಾಕರ್ಷಣೆ ಪಡೆಯಲಾರಂಬಿಸಿದೆ. ಇಲ್ಲಿರುವ ಸಾಕಾನೆಗಳು ವಿವಿಧ ಭಾಗದಲ್ಲಿ ಕಾಡಾನೆ ಕಾರ್ಯಾಚರಣೆ, ಹುಲಿ ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿವೆ. ಇಂತಹ ಆನೆಗಳನ್ನು ಅತ್ಯಂತ ಸಮೀಪದಿಂದ ನೋಡುವುದೇ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಶಿಬಿರದಲ್ಲಿ ಸಾಕಾನೆಗಳ ಆಹಾರ ಪದ್ಧತಿ, ಆನೆಗಳ ಭಾಷೆ, ಇವುಗಳ ಸ್ನಾನ ಕೊಳ, ಆಹಾರ ತಯಾರಿಕಾ ಕೊಠಡಿ, ಆನೆ ಪಳಗಿಸುವ ಜಾಗ ಇತ್ಯಾದಿಗಳ ಮಾಹಿತಿಗಳನ್ನು ಸಾರ್ವಜನಿಕರು ನೇರವಾಗಿ ತಿಳಿದುಕೊಳ್ಳುವ ಅವಕಾಶ ಕಲ್ಪಿಸಿದೆ. ಆನೆಗಳಿಗೆ ವೈದ್ಯರು ನೀಡುವ ಚಿಕಿತ್ಸೆಯ ಬಗ್ಗೆ ಕೂಡ ಮಾಹಿತಿ ಸಿಗಲಿದೆ.

ಮೈಸೂರು-ಗೋಣಿಕೊಪ್ಪಲು ಮುಖ್ಯ ರಸ್ತೆಯಲ್ಲಿ ಸಾಕಾನೆ ಶಿಬಿರವು ಲಭ್ಯವಿದ್ದು ಸಾರ್ವಜನಿಕರ ವೀಕ್ಷಣೆಗೆ ಬೆಳಿಗ್ಗೆ ಹಾಗೂ ಸಂಜೆ ಸಾಕಾನೆಗಳು ಲಭ್ಯವಿದೆ. ವಯಸ್ಕರಿಗೆ ತಲಾ ೧೦೦ ಹಾಗೂ ಮಕ್ಕಳಿಗೆ ತಲಾ ೫೦ ಶುಲ್ಕವನ್ನು ನಿಗದಿಪಡಿಸ ಲಾಗಿದೆ. ಶುಲ್ಕದ ರೂಪದಲ್ಲಿ ಬರುವ ಹಣದಿಂದ ಸಾಕಾನೆಗಳು ಹಾಗೂ ಶಿಬಿರದ ಅಭಿವೃದ್ದಿಗೆ ಈ ಹಣವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಶಿಬಿರದಲ್ಲಿ ಸಾಕಾನೆಗಳಾದ ಅಭಿಮನ್ಯು, ಭೀಮ, ಮಹೇಂದ್ರ, ಶ್ರೀಕಂಠ, ಅಶೋಕ, ರಾಮಯ್ಯ, ಕೃಷ್ಣ, ಶ್ರೀರಂಗ, ಕ್ಯಾತ, ಮಾಸ್ತಿ, ಏಕಲವ್ಯ, ರವಿ, ಸೋಮಶೇಖರ, ಚಾಮುಂಡೇಶ್ವರಿ, ಭುವನೇಶ್ವರಿ, ಅಭಿಮನ್ಯು ಹಾಗೂ ವಿರಾಟ್ ಸೇರಿದಂತೆ ೧೭ ಸಾಕಾನೆಗಳಿವೆ. ಸಾರ್ವಜನಿಕರ ವೀಕ್ಷಣೆ ನಂತರ ಸಮೀಪದ ವಿಸ್ತಾರವಾದ ಅರಣ್ಯ ಪ್ರದೇಶದಲ್ಲಿ ಸಾಕಾನೆಗಳನ್ನು ಅಡ್ಡಾಡಲು ಬಿಡಲಾಗುತ್ತದೆ.