ಪೆರಾಜೆ, ಏ. ೨: ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವದ ಅಂಗವಾಗಿ ಶ್ರೀ ಭಗವತಿ ದೊಡ್ಡಮುಡಿ ನಡೆಯಿತು.

ಸುಮಾರು ೩೦ ಅಡಿ ಎತ್ತರದ ವೈವಿಧ್ಯಮಯ ಅಲಂಕಾರಗಳಿAದ ಕೂಡಿದ ಭಗವತಿಯ ವಿರಾಟ್ ರೂಪದ ಮುಡಿಯ ದರ್ಶನಕ್ಕೆ ರಾಜ್ಯದ ವಿವಿಧೆಡೆ ಹಾಗೂ ಕೇರಳದಿಂದಲೂ ಭಕ್ತರು ಆಗಮಿಸಿದ್ದರು.

ಭಾಗಮಂಡಲ ಶ್ರೀ ಭಗಂಡೇಶ್ವರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪೆರಾಜೆ ಶಾಸ್ತಾವು ದೇವಸ್ಥಾನವು ತಲಕಾವೇರಿ ಶ್ರೀ ಕಾವೇರಿ ಕ್ಷೇತ್ರದೊಂದಿಗೂ ದಾರ್ಮಿಕ ನಂಟು ಹೊಂದಿದೆ. ನೂರೊಂದು ದೈವಗಳ ನೆಲೆಬೀಡಾಗಿರುವ ಪೆರಾಜೆಯಲ್ಲಿ ಭಗವತಿಯ ದೊಡ್ಡಮುಡಿ ಪ್ರಮುಖ ಆಕರ್ಷಣೆಯಾಗಿದೆ. ಬೆಳಿಗ್ಗೆಯಿಂದ ಪೊಟ್ಟನ್ ದೈವ, ರಕ್ತೇಶ್ವರಿ, ಆಯರ್ ಭಗವತಿ, ಪುಲ್ಲೂರ್ ಕಾಳಿ, ಪುಲ್ಲೂರು ಕಣ್ಣನ್, ವಿಷ್ಣುಮೂರ್ತಿ ಹಾಗೂ ಬೇಟೆ ಕರಿಮಗನ್ ಈಶ್ವರನ್ ದೈವಗಳ ಕೋಲಗಳು ನಡೆದವು. ನಂತರ ಶ್ರೀ ಭಗವತಿ ದೊಡ್ಡಮುಡಿ ನಂತರ ಪಯ್ಯೊಳಿ ಕಾರ್ಯಕ್ರಮ ನಡೆದವು. ಏಪ್ರಿಲ್ ೧೦ಕ್ಕೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

ಶ್ರೀ ಭಗವತಿ ದೇವಿಗೆ ಕಂಕಣ ಭಾಗ್ಯ, ಸಂತಾನ ಭಾಗ್ಯ ಹಾಗೂ ಇತರ ಕಾರ್ಯಗಳಿಗೆ ಹರಿಕೆ ಹೊತ್ತ ಭಕ್ತರು ಸೀರೆ, ಚಿನ್ನ, ಬೆಳ್ಳಿಗಳನ್ನು ಹರಕೆ ರೂಪದಲ್ಲಿ ಅರ್ಪಿಸಿದರು. ದೇವಾಲಯದ ಪ್ರಧಾನ ಅರ್ಚಕ ವೆಂಕಟರಮಣ ಕೆ. ಪಾಂಙಣ್ಣಾಯ, ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು, ಸಹ ಕಾರ್ಯದರ್ಶಿ ಚಿನ್ನಪ್ಪ ಅಡ್ಕ, ದೇವತಕ್ಕರಾದ ರಾಮಕಜೆ ರಾಜಗೋಪಾಲ, ತಕ್ಕ ಮುಖ್ಯಸ್ಥರುಗಳಾದ ಭಾಸ್ಕರ ಕೋಡಿ, ವಿಶ್ವನಾಥ ಮೂಲೆಮಜಲು, ಪ್ರಭಾಕರ ಕೋಡಿ, ಗಣಪತಿ ಕುಂಬಳಚೇರಿ, ಪುರುಷೋತ್ತಮ ನಿಡ್ಯಮಲೆ, ಮಾಜಿ ಮೊಕ್ತೇಸರುಗಳು, ಆಡಳಿತ ಮಂಡಳಿಯ ಪದಾಧಿಕಾರಿಗಳು, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ, ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಹಾಗೂ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷö್ಮಣ್ ಸೇರಿದಂತೆ ವಿವಿಧ ಪಕ್ಷದ ಮುಖಂಡರುಗಳು ಸೇರಿದಂತೆ ಭಕ್ತಾದಿಗಳು ಭಾಗವಹಿಸಿದ್ದರು.