ಮಡಿಕೇರಿ, ಏ. ೨: ಯುವ ಪೀಳಿಗೆಯು ಸೂಕ್ತ ಚಿಂತನೆಯ ರಹದಾರಿಯಲ್ಲಿ ಮುನ್ನಡೆಯಬೇಕು. ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ದೇಶದ ಅಭಿವೃದ್ಧಿಗೆ ಪೂರಕವಾಗಬೇಕು. ಮತದಾನದ ಂತಹ ಪ್ರಜಾಪ್ರಭುತ್ವದ ಹಬ್ಬದಲ್ಲಿ ಯುವ ತಲೆಮಾರು ಸಕ್ರಿಯವಾಗಿ ಭಾಗವಹಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯ ಬಲವರ್ಧನೆಗೆ ಸಹಕಾರಿಯಾಗಬೇಕು ಎಂದು ರೋಟರಿ ಮಿಸ್ಟಿಹಿಲ್ಸ್ನ ಅಧ್ಯಕ್ಷ ಪ್ರಮೋದ್ ರೈ ಹೇಳಿದರು.

ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕೊಡಗು ಜಿಲ್ಲಾ ಅಂತರ ಕಾಲೇಜು ಎನ್‌ಎಸ್‌ಎಸ್ ಸ್ವಯಂ ಸೇವಕರಿಗಾಗಿ ನಡೆಸಿದ ಯುವ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರಾಷ್ಟç ಮತ್ತು ರಾಜ್ಯ, ಪ್ರಶಸ್ತಿ ವಿಜೇತ ಪಿಡಿಒ ಅಬ್ದುಲ್ಲಾ ಅವರು, ಸ್ಪರ್ಧಾತ್ಮಕ ಜಗತ್ತು ಮತ್ತು ಯುವ ಜನತೆ: ಶೈಕ್ಷಣಿಕ, ಸಾಮಾಜಿಕ ಸಾಧ್ಯತೆ ಎಂಬ ವಿಷಯದ ಕುರಿತು ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿರುವ ನಾವು ಶೈಕ್ಷಣಿಕ ಸಾಧ್ಯತೆಯ ಮೂಲಕ ಸರಕಾರಿ ಉದ್ಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ನಮ್ಮ ನಡಾವಳಿಗಳನ್ನು ನಾವೇ ರೂಪಿಸಿಕೊಳ್ಳಬೇಕು. ಆಗಿದ್ದಾಗ ಮಾತ್ರ ಇಡೀ ಜಗತ್ತೇ ನಮ್ಮ ಸಾಧನೆಗೆ ಬೆನ್ನೆಲುಬಾಗಿ ನಿಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು. ಜೊತೆಗೆ ಯುಪಿಎಸಿ, ಕೆಪಿಎಸ್ ಸಿ ಪರೀಕ್ಷೆಗಳ ತಯಾರಿ ಮಾರ್ಗದರ್ಶನ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೆನರಾ ಬ್ಯಾಂಕ್ ಮಡಿಕೇರಿ ಪಶ್ಚಿಮ ಶಾಖೆಯ ವ್ಯವಸ್ಥಾಪಕ ಅವಿನಾಶ್ ಪಿ.ಕೆ. ಮಾತನಾಡಿ ತಂತ್ರಜ್ಞಾನದ ಮೂಲಕ ಹೇಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಬಹುದು ಎಂಬ ವಿಚಾರದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮೇ. ಪ್ರೊ. ರಾಘವ ಬಿ ಮಾತನಾಡಿ ನನಗೆ ಯಾವ ವಿಚಾದ ಕುರಿತು ಅರಿವಿಲ್ಲ ಎಂಬ ತಿಳುವಳಿಕೆ ಪ್ರತಿಯೊ ಬ್ಬನಿಗೂ ಅಗತ್ಯ. ಉತ್ತಮವಾದ ಮಾನವ ಸಂಪನ್ಮೂಲವನ್ನು ಶಿಕ್ಷಣ ಸಂಸ್ಥೆಗಳು ಉತ್ಪಾದಿಸಬೇಕಾಗಿದೆ. ಸಮಯವನ್ನು ವ್ಯರ್ಥ ಮಾಡಬೇಡಿ. ಸಂವಾದದ ನೆಲೆಯನ್ನು ಯುವಜನತೆ ಮೈಗೂಡಿಸಿಕೊಳ್ಳಬೇಕು. ಸಮಾಜ ವಿರೋಧಿ ನಿಲುವುಗಳ ಬಗ್ಗೆ ಎಚ್ಚರ ವಹಿಸಬೇಕು. ಯುವ ಸಂವಾದ ದೇಶವ್ಯಾಪಿ ರಾಷ್ಟ್ರೀಯ ಅಭಿಯಾನವಾಗಿ ಆಚರಿಸಲ್ಪಡುತ್ತಿರುವ ಯುವ ಸಮೂಹದ ಹಬ್ಬ. ಯುವ ಸಂವಾದದ ಮೂಲಕ ತಮ್ಮ ಸೃಜನಶೀಲತೆ, ಕೌಶಲ್ಯಾಭಿವೃದ್ಧಿ ಆಯಾಮವನ್ನು ವಿಸ್ತರಿಸಲಿರುವ ಮಹೋನ್ನತವಾದ ವೇದಿಕೆಯಾಗಿದೆ.

ಉನ್ನತ ಶಿಕ್ಷಣದ ಜೊತೆಯಲ್ಲಿ ಕೌಶಲ್ಯ ಭಾರತದ ಕಲ್ಪನೆಯನ್ನು ಇಲ್ಲಿ ಗ್ರಹಿಸಲು ಸಾಧ್ಯವಿದೆ. ತಂತ್ರಜ್ಞಾನ, ಕೃತಕ ಬುದ್ದಿಮತ್ತೆಯನ್ನು ದುಡಿಸಿಕೊಂಡೇ ದೇಶದ ಅಭಿವೃದ್ಧಿಗೆ ಯುವ ಜನತೆಯ ಮನೋಭೂಮಿಕೆಯನ್ನು ರೂಪಿಸುವ ಪ್ರಯತ್ನ ಇಲ್ಲಿದೆ ಎಂದು ಹೇಳಿದರು. ಡಾ. ಎ.ಎನ್. ಗಾಯತ್ರಿ ಹಾಗೂ ಡಾ. ಮಹದೇವಯ್ಯ ವಂದಿಸಿದರು.

ಅಪರಾಹ್ನದ ನಂತರ ಕೊಡಗು ಜಿಲ್ಲಾ ವ್ಯಾಪ್ತಿಯ ಅಂತರ ಕಾಲೇಜು ಎನ್ ಎಸ್ ಎಸ್ ಸ್ವಯಂ ಸೇವಕರಿಗೆ ಸಾಮಾಜಿಕ ಜವಾಬ್ದಾರಿ ಮತ್ತು ಯುವಜನತೆ ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡನೆ ಸ್ಪರ್ಧೆಯನ್ನು, ವಿವಿಧ ವಿಚಾರಗಳ ಕುರಿತು ವಿಚಾರ ಸಂವಾದವನ್ನು, ನನ್ನ ಕನಸಿನ ಭಾರತ ಎಂಬ ವಿಷಯದ ಬಗ್ಗೆ ಕೊಲಾಜ್ ಮೇಕಿಂಗ್ ಸ್ಪರ್ಧೆಯನ್ನು ಸಂಯೋಜಿಸಲಾಯಿತು. ವಿಜೇತರಿಗೆ ಪ್ರಮಾಣಪತ್ರ, ಪುಸ್ತಕ ಬಹುಮಾನ ವಿತರಿಸಲಾಯಿತು.