ಕಣಿವೆ, ಏ. ೨ : ಕುಶಾಲನಗರ ತಾಲೂಕಿನ ಕಣಿವೆಯಲ್ಲಿರುವ ಐತಿಹಾಸಿಕ ದೇವಾಲಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಬ್ರಹ್ಮರಥೋತ್ಸವ ಏಪ್ರಿಲ್ ೧೭ ರಂದು ಜರುಗಲಿದೆ. ರಥೋತ್ಸವಕ್ಕೆ ಕೊಡಗು ಜಿಲ್ಲೆಯ ಭಕ್ತಾದಿಗಳು ಸೇರಿದಂತೆ ನೆರೆಯ ಹಾಸನ ಹಾಗೂ ಮೈಸೂರು ಜಿಲ್ಲೆಗಳ ಭಕ್ತರು ಪಾಲ್ಗೊಳ್ಳುತ್ತಾರೆ. ದೇವಾಲಯದ ಮುಂಬದಿಯಲ್ಲಿ ಹರಿದಿರುವ ಕಾವೇರಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗುಸೇತುವೆ ಇಲ್ಲಿಗೆ ಧಾವಿಸುವ ಭಕ್ತರು ಹಾಗು ಪ್ರವಾಸಿಗರ ಕಣ್ಮನ ತಣಿಸುವುದು ವಿಶೇಷ ಸಂಗತಿ. ರಥೋತ್ಸವದ ಹಿನ್ನೆಲೆಯಲ್ಲಿ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ಎನ್. ಸುರೇಶ್, ಕಾರ್ಯಾಧ್ಯಕ್ಷ ಕೆ.ಎಸ್.ಮಾಧವ ನೇತೃತ್ವದ ಭಕ್ತಗಣ ರಥೋತ್ಸವದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

ದೇವಾಲಯದ ಐತಿಹ್ಯ

ದೇವಾಲಯದ ಗರ್ಭಗುಡಿಯ ಉತ್ತರಾಭಿಮುಖವಾಗಿ ಹರಿದಿರುವ ಜೀವ ನದಿ ಕಾವೇರಿ ದೇವಾಲಯದ ಮಹತ್ವವನ್ನು ಹೆಚ್ಚಿಸಿದೆ. ನದಿಯ ದಂಡೆಯಲ್ಲಿ ಇರುವ ಈ ದೇವಾಲಯದ ಗರ್ಭಗುಡಿಯ ಶಿವಲಿಂಗವನ್ನು ಅಯೋಧ್ಯೆ ಬಿಟ್ಟು ವನವಾಸಕ್ಕೆಂದು ತೆರಳಿದ ಸಾಕ್ಷಾತ್ ಶ್ರೀರಾಮನೇ ಪ್ರತಿಷ್ಠಾಪಿಸಿದ ಲಿಂಗವೇ ಈ ರಾಮಲಿಂಗ ಎಂಬುದು ಪುರಾತನ ಕಾಲದಿಂದಲೂ ಭಕ್ತರ ನಂಬಿಕೆಯಾಗಿದೆ.

ಅಪೂರ್ವ ಪ್ರಕೃತಿ ಸೌಂದರ್ಯದಿAದ ರಾರಾಜಿಸಿರುವ ಬೆಟ್ಟ ಗುಡ್ಡಗಳ ರಾಶಿಯ ನಡುವೆ ಲೋಕಪಾವನೆ ಕಾವೇರಿ ನದಿಯ ದಂಡೆಯ ಮೇಲೆ ಇರುವ ರಾಮಲಿಂಗೇಶ್ವರ ಸನ್ನಿಧಿಯ ಎಡಭಾಗದ ಬೆಟ್ಟದ ಮೇಲೆ ಹರಿಹರೇಶ್ವರ ಹಾಗೂ ಬಲ ಬದಿಯ ಬೆಟ್ಟದ ಮೇಲೆ ಲಕ್ಷö್ಮಣೇಶ್ವರ ದೇವಾಲಯಗಳಿವೆ.

ಕಣಿವೆಗೆ ಬಂದ ರಾಮ

ಅಯೋಧ್ಯೆಯನ್ನು ತೊರೆದು ವನವಾಸಕ್ಕೆಂದು ಶ್ರೀ ರಾಮನು ಆಗಮಿಸುತ್ತಿದ್ದ ಸಂದರ್ಭ ಬೆಟ್ಟಗಳು ಹಾಗೂ ನದಿ ದಂಡೆಗಳಲ್ಲಿ ವಾಸವಿದ್ದ ಈತನ ಭಕ್ತರು ಲಿಂಗವನ್ನು ಪ್ರತಿಷ್ಠಾಪಿಸಿ ರಾಮಲಿಂಗೇಶ್ವರ ಎಂದು ಜಪಿಸುತ್ತಾ ಹಾಗೂ ಸ್ತುತಿಸುತ್ತಾ ಶ್ರೀರಾಮನ ಧ್ಯಾನದಲ್ಲಿ ಮಗ್ನರಾಗುತ್ತಿದ್ದ ಸಂದರ್ಭ ಸಾಕ್ಷಾತ್ ಶ್ರೀ ರಾಮನೇ ಈ ಕಣಿವೆಯ ಬೆಟ್ಟದ ತಪ್ಪಲಿನ ಕಾವೇರಿ ನದಿ ದಂಡೆಗೆ ಬಂದು ಲಿಂಗವನ್ನು ಪ್ರತಿಷ್ಠಾಪಿಸಿದನೆಂದು ಪೂರ್ವಜರ ನಂಬಿಕೆ ಎಂದು ಕಣಿವೆ ಗ್ರಾಮದ ಹಿರಿಯ ನಿವಾಸಿ ೧೦೦ ರ ಆಸುಪಾಸಿನ ವೃದ್ಧ ಹೋಟೆಲ್ ಅಣ್ಣಾ ಎಂಬವರು ‘ಶಕ್ತಿ' ಗೆ ವಿವರಿಸಿದರು.

ಶ್ರೀ ರಾಮನಿಂದ ಪ್ರತಿಷ್ಠಾಪಿಸಲ್ಪಟ್ಟ ರಾಮಲಿಂಗ ಮೂರ್ತಿಯ ಸನ್ನಿಧಿಯ ಕಾರಣಕ್ಕೆ ಈ ಗ್ರಾಮಕ್ಕೆ ರಾಮಸ್ವಾಮಿ ಕಣಿವೆ ಎಂದು ನಾಮಾಂಕಿತಗೊAಡ ಬಗ್ಗೆ ದೇವಾಲಯದ ಆವರಣದಲ್ಲಿ ಇರುವ ಲಿಖಿತ ರೂಪದಲ್ಲಿರುವ ಬರವಣಿಗೆಯೇ ಸಾಕ್ಷಿ ಎಂದು ಅವರು ವಿವರಿಸಿದರು. ಈ ದೇವಾಲಯದ ಗರ್ಭಗುಡಿಯಲ್ಲಿ ರಾಮ, ಸೀತೆ ಹಾಗೂ ಆಂಜನೇಯ ಮೂರ್ತಿಗಳಿವೆ. ಇಲ್ಲಿ ಪ್ರತಿ ವರ್ಷ ರಾಮನವಮಿಯಂದು ಅಭಿಜಿನ್ ಲಗ್ನದಲ್ಲಿ ಶ್ರೀ ಸ್ವಾಮಿಯ ವಾರ್ಷಿಕ ಬ್ರಹ್ಮರಥೋತ್ಸವ ನಡೆಯುತ್ತದೆ.

ರಾಮನ ಶಿವಲಿಂಗಕ್ಕೆ ಕಾಶಿಯ ತೀರ್ಥಸ್ನಾನ

ರಥೋತ್ಸವದ ಮುನ್ನಾ ದಿನ ಕಾಶಿಯಿಂದ ಅಂಚೆಯಲ್ಲಿ ತರಿಸುವ ಪವಿತ್ರ ಗಂಗಾ ತೀರ್ಥವನ್ನು ಅಲಂಕೃತ ಮಂಟಪದಲ್ಲಿಟ್ಟು ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆಯಲ್ಲಿ ರಾಮಲಿಂಗೇಶ್ವರ ಸನ್ನಿಧಿಗೆ ನೆರೆಯ ಹೆಬ್ಬಾಲೆ ಗ್ರಾಮಸ್ಥರು ತಂದು ರಾಮಲಿಂಗದ ಮೇಲೆ ಅಭಿಷೇಕ ಮಾಡಿದ ಬಳಿಕವಷ್ಟೇ ರಥ ಚಾಲನೆಗೊಳ್ಳುವುದು ಇಂದಿಗೂ ನಡೆದು ಬಂದಿರುವ ವಾಡಿಕೆಯಾಗಿದೆ.

ಕಾಶಿಯಲ್ಲಿನ ಸ್ಮಶಾನದ ಹೋಲಿಕೆ

ಈ ಸನ್ನಿಧಿಯಲ್ಲಿನ ದೇಗುಲದ ಗೋಪುರದ ಎದುರು ಸ್ಮಶಾನವೂ ಇದ್ದು ಇದು ಕಾಶಿಯಲ್ಲಿನ ಪರಿಸರವನ್ನೇ ಹೋಲುತ್ತದೆ. ಜೊತೆಗೆ ರಾಷ್ಟ್ರವ್ಯಾಪಿ ಇರುವ ಅನೇಕ ಪುರಾಣ ಪ್ರಸಿದ್ಧ ದೇವಾಲಯಗಳಿಗಿಂತ ಈ ರಾಮಲಿಂಗೇಶ್ವರ ಸನ್ನಿಧಿಗೆ ತನ್ನದೇ ಆದ ವಿಶೇಷ ಐತಿಹ್ಯ ಇರುವುದಾಗಿ ದೇವಾಲಯದ ಅಧ್ಯಕ್ಷ ಕೆ.ಎನ್. ಸುರೇಶ್ ಹೇಳುತ್ತಾರೆ.

ಹನುಮಂತ ಕಾಶಿಯಿಂದ ಲಿಂಗ ತರುವುದು ತಡವಾದಾಗ ರಾಮನಿಂದಲೇ ಲಿಂಗ ಪ್ರತಿಷ್ಠಾಪನೆ

ಈ ಪುರಾಣ ಪುಣ್ಯ ಕ್ಷೇತ್ರದ ಪೌರಾಣಿಕ ಹಿನ್ನೆಲೆಯನ್ನು ಅವಲೋಕಿಸುವುದಾದರೆ ತ್ರೇತಾಯುಗದ ಕೊನೆಯ ಹಂತದಲ್ಲಿ ಶ್ರೀ ರಾಮನು ಕಣಿವೆಗೆ ಬಂದು ಹನುಮಂತನನ್ನು ಲಿಂಗವನ್ನು ತರಲು ಕಾಶಿಗೆ ಕಳಿಸಿ, ಲಿಂಗ ಪ್ರತಿಷ್ಠಾಪನಾ ಕಾರ್ಯದಲ್ಲಿ ಮಗ್ನನಾಗುತ್ತಾನೆ. ಆದರೆ ಹನುಮಂತ ಕಾಶಿಯಿಂದ ಬರುವುದು ತಡವಾದಾಗ ಕಾವೇರಿ ನದಿಯೊಳಗಿನ ಪವಿತ್ರ ಮಣ್ಣಿನಿಂದಲೇ ಶ್ರೀರಾಮ ಲಿಂಗವನ್ನು ಪ್ರತಿಷ್ಠಾಪಿಸಿದ ವಿಷಯ ತಿಳಿದ ಹನುಮಂತ ತಂದ ಲಿಂಗ ದೊಂದಿಗೆ ವ್ಯಥೆ ಪಡುತ್ತಿದ್ದಾಗ ಹನುಮಂತ ತಂದ ಲಿಂಗವನ್ನು ಲಕ್ಷö್ಮಣನಿಂದ ಪ್ರತಿಷ್ಠಾಪಿಸಿದ್ದರಿಂದ ಲಕ್ಷö್ಮಣೇಶ್ವರ ದೇಗುಲವಾಗುತ್ತದೆ. ಹರಿಹರೇಶ್ವರ ದೇವಾಲಯ ಉದ್ಭವವಾದುದು ಎಂದು ಹೇಳಲಾಗುತ್ತಿದೆ.

ಪಂಚಲಿAಗಗಳ ಪುಣ್ಯ ಕ್ಷೇತ್ರ : ಕಣಿವೆಯ ದೇವಾಲಯದ ಈ ಪುಣ್ಯಕ್ಷೇತ್ರದಲ್ಲಿ ರಾಮ ಹಾಗೂ ಲಕ್ಷ್ಮಣರಿಂದ ಪ್ರತಿಷ್ಠಾಪಿಸಿದ ಲಿಂಗಗಳಿಗೆ ದೇವಾಲಯ ನಿರ್ಮಿಸಿ ನಿತ್ಯವೂ ಪೂಜೆ - ಪುನಸ್ಕಾರಗಳು ನೆರವೇರುತ್ತಿವೆ. ಅಲ್ಲದೇ ಇದೇ ಸನ್ನಿಧಿಯಲ್ಲಿ ಬಸವೇಶ್ವರ, ಲಕ್ಷö್ಮಣೇಶ್ವರ, ಹರಿಹರೇಶ್ವರ, ಗುಹೇಶ್ವರ ಹಾಗೂ ಶ್ರೀರಾಮಲಿಂಗೇಶ್ವರ ಎಂಬ ಪಂಚಲಿAಗಗಳಿದ್ದು ಇದು ದಕ್ಷಿಣದ ಕಾಶಿಯೆಂದೇ ಜಗಜನಿತವಾಗಿದೆ.

ಭಾವೈಕ್ಯತೆಯ ಗ್ರಾಮ : ಶ್ರೀ ರಾಮಲಿಂಗೇಶ್ವರನ ಸನ್ನಿಧಿಯ ಕಣಿವೆ ಗ್ರಾಮದಲ್ಲಿ ಹಿಂದೂ, ಮುಸ್ಲಿಂ, ಕ್ರೆöÊಸ್ತರಾದಿಯಾಗಿ ವಿವಿಧ ಧರ್ಮೀಯರು ನೆಲೆಸಿದ್ದು ಇದೊಂದು ಭಾವೈಕ್ಯತೆ ಬೆಸೆವ ಗ್ರಾಮವೆಂಬ ಖ್ಯಾತಿಗೆ ಒಳಗಾಗಿದೆ. ಈ ಪುರಾಣ ಪ್ರಸಿದ್ಧ ದೇವಾಲಯದ ಆಡಳಿತ ಮಂಡಳಿಯಲ್ಲಿ ಧರ್ಮಾತೀತವಾಗಿ ಗ್ರಾಮದ ಎಲ್ಲಾ ಭಕ್ತರು ಸೇವೆ ಮಾಡಿದ್ದಾರೆ. -ವಿಶೇಷ ಲೇಖನ : ಕೆ.ಎಸ್.ಮೂರ್ತಿ