ಇವುಗಳ ಮಧ್ಯೆ ಮತದಾರನ ಮತ ಯಾರಿಗೆ ಗ್ಯಾರಂಟಿ?

ಚುನಾವಣಾ ವಿಶ್ಲೇಷಣೆ - ಅನಿಲ್ ಎಚ್.ಟಿ.

ಈ ಮೊದಲಿನ ಎಲ್ಲಾ ಚುನಾವಣೆಗಳಿಗಿಂತಲೂ ಕೊಡಗು-ಮೈಸೂರು ಕ್ಷೇತ್ರದಲ್ಲಿ ಈ ಸಲದ ಲೋಕಸಭಾ ಚುನಾವಣೆ ಅತ್ಯಂತ ಮಹತ್ವ ಪಡೆದಿದೆ.

ಸ್ವಕ್ಷೇತ್ರ ಮೈಸೂರನ್ನು ಒಳಗೊಂಡಿರುವ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸುವುದು ಸಿದ್ದರಾಮಯ್ಯ ಪಾಲಿಗೆ ಅತ್ಯಂತ ಅಗತ್ಯವಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸುವುದು ಸಿದ್ದರಾಮಯ್ಯ ಪಾಲಿಗೆ ಅನಿವಾರ್ಯವಾಗಿದೆ.

ಹೀಗಾಗಿಯೇ ಸಿದ್ದರಾಮಯ್ಯ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಬೇರೆಲ್ಲಾ ಕ್ಷೇತ್ರಗಳಿಗಿಂತ ಹೆಚ್ಚು ಆದ್ಯತೆ ನೀಡಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯದ ಮೂಲಕ ತಮ್ಮ ಸ್ವಪ್ರತಿಷ್ಠೆಯ ಗೆಲುವಿಗಾಗಿ ಸಿದ್ದರಾಮಯ್ಯ ರಾಜಕೀಯ ರಣತಂತ್ರವನ್ನೇ ಹೂಡುತ್ತಿದ್ದಾರೆ.

ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರಾಜಿತರಾದರೆ ಅದು ಕಾಂಗ್ರೆಸ್‌ನಲ್ಲಿರುವ ಸಿದ್ದರಾಮಯ್ಯ ವೈರಿಗಳಿಗೆ ಪ್ರಬಲ ಅಸ್ತç ನೀಡುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಕ್ಷೇತ್ರದಲ್ಲಿಯೇ ಪಕ್ಷ ಸೋತಿದೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಅಗತ್ಯ ಎಂಬ ಕೂಗು ಕೇಳಿಬರುವ ಸಾಧ್ಯತೆಯೂ ಇದೆ. ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಮೂಲಕ ಸಿದ್ದರಾಮಯ್ಯ ಮುಂದಿನ ೪ ವರ್ಷಗಳೂ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯುವ ಎಲ್ಲಾ ಅವಕಾಶಗಳನ್ನು ಯಾವುದೇ ಕಷ್ಟವಿಲ್ಲದೇ ಸುಲಭವಾಗಿ ತಮ್ಮದಾಗಿಸಿಕೊಳ್ಳಬಹುದಾಗಿದೆ. ಹೀಗಾಗಿಯೇ ಸದ್ದಿಲ್ಲದೇ ಬಿಜೆಪಿಯ ಪ್ರಮುಖ ನಾಯಕರಾಗಿದ್ದ ರಘು, ಸೇರಿದಂತೆ ಕೆಲವರನ್ನು ಕಾಂಗ್ರೆಸ್‌ಗೆ ಸೆಳೆಯುವ ಮೂಲಕ ಈ ಚುನಾವಣೆ ನೀವು ಎಣಿಸಿದಂತೆ ಇಲ್ಲ, ನಾನೂ ಲೆಕ್ಕಾಚಾರ ಮಾಡಿ ಅಭ್ಯರ್ಥಿ ಕಣಕ್ಕಿಳಿಸಿದ್ದೇನೆ ಎಂಬ ಸೂಕ್ಷö್ಯ ಸಂದೇಶವನ್ನು ಸಿದ್ದರಾಮಯ್ಯ ತನ್ನ ವಿರೋಧಿ ಪಾಳಯಕ್ಕೆ ನೀಡಿದ್ದಾಗಿದೆ. ಆಪರೇಷನ್ ಬಿಜೆಪಿಯನ್ನು ಕಾಂಗ್ರೆಸ್ ಕ್ಷೇತ್ರ ವ್ಯಾಪ್ತಿಯಲ್ಲಿ ಭರ್ಜರಿಯಾಗಿ ಮಾಡುತ್ತಿದೆ.

ಕಾಂಗ್ರೆಸ್ ಅನಿವಾರ್ಯತೆಗಳು

ಕಳೆದ ೧೦ ವರ್ಷ ಅಂದರೆ ಎರಡು ಅವಧಿಯಲ್ಲಿಯೂ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲವು ಸಾಧಿಸಿದೆ. ಅದಕ್ಕೂ ಮುನ್ನ ಈ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಂತಿತ್ತು. ಮೈಸೂರು ರಾಜವಂಶಸ್ಥರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರೇ ಕಾಂಗ್ರೆಸ್‌ನಿAದ ನಾಲ್ಕು ಬಾರಿ ಈ ಕ್ಷೇತ್ರದಲ್ಲಿ ಸಂಸದರಾಗಿದ್ದರು. ನಂತರ ಮಾತಿನ ಮಲ್ಲ ಅಡಗೂರು ವಿಶ್ವನಾಥ್ ಕೂಡ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಅಂದರೆ, ಈ ಕ್ಷೇತ್ರ ಕಾಂಗ್ರೆಸ್ ಪಾಲಿನ ಗೆಲುವಿಗೆ ಕಷ್ಟಸಾಧ್ಯವಾದ ಕ್ಷೇತ್ರವೇನಲ್ಲ. ೧೦ ವರ್ಷಗಳಿಂದ ಕಾಂಗ್ರೆಸ್ ಸಂಸದ ಇರಲಿಲ್ಲ ಎಂಬುದು ಬಿಟ್ಟರೆ ಈ ಕ್ಷೇತ್ರದ ಒಳಹೊರಗನ್ನು ಸಿದ್ದರಾಮಯ್ಯ ಖಚಿತವಾಗಿ ಬಲ್ಲವರಾಗಿದ್ದಾರೆ.

ಕಳೆದ ಎರಡು ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪ್ಲಸ್ ಪಾಯಿಂಟ್ ಎಂದರೆ, ಈ ಕ್ಷೇತ್ರದಲ್ಲಿರುವ ೮ ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ನ ೫ ಶಾಸಕರಿದ್ದಾರೆ. ಅದರಲ್ಲಿಯೂ ಕೊಡಗು ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರ ಹವಾ ಇದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಎರಡೂವರೆ ದಶಕಗಳ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದ ಕಾಂಗ್ರೆಸ್‌ನ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ ಕೊಡಗಿನಲ್ಲಿ ತಮ್ಮದೇ ವರ್ಚಸ್ಸು ಹೊಂದಿದ್ದಾರೆ. ಕಾಂಗ್ರೆಸ್ ಅಲೆ ಕೊಡಗಿನಲ್ಲಿ ಇನ್ನೂ ಇದೆ. ಹೀಗಾಗಿಯೇ ಇಬ್ಬರೂ ಶಾಸಕರು ಕೂಡ ಕೊಡಗಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷö್ಮಣ್ ಅವರಿಗೆ ಲೀಡ್ ಕೊಡಬೇಕು ಎನ್ನುವ ಛಲ ಇಟ್ಟುಕೊಂಡಿದ್ದಾರೆ.

ಚಾಮರಾಜ, ನರಸಿಂಹರಾಜ, ಪಿರಿಯಾಪಟ್ಟಣ, ಕ್ಷೇತ್ರದಲ್ಲಿ ಕಾಂಗ್ರೆಸ್ ಅಬ್ಬರ ಇದೆ. ನರಸಿಂಹರಾಜ ಕ್ಷೇತ್ರ ಶಾಸಕ ತನ್ವೀರ್ ಸೇಠ್ ಇದೀಗ ಕಾಂಗ್ರೆಸ್ ಚುನಾವಣಾ ಉಸ್ತುವಾರಿಯಾಗಿರುವುದರಿಂದಾಗಿ ಮತ್ತಷ್ಟು ಸಂಖ್ಯೆಯಲ್ಲಿ ಮೈಸೂರು ಜಿಲ್ಲೆಯಲ್ಲಿನ ಮತಗಳು ಅದರಲ್ಲಿಯೂ ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್ ಪಾಲಿಗೆ ದೊರಕುವ ಸಾಧ್ಯತೆ ಇದೆ.

ತಾನು ಒಕ್ಕಲಿಗ ಎಂದು ಪದೇಪದೇ ಲಕ್ಷö್ಮಣ್ ಹೇಳುತ್ತಿರುವುದರಿಂದಾಗಿ ಕ್ಷೇತ್ರದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಒಕ್ಕಲಿಗ ಮತಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕೈ ವಶವಾಗುವ ಸಾಧ್ಯತೆ ಇಲ್ಲದಿಲ್ಲ.

ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಪಂಚಗ್ಯಾರAಟಿ ಯೋಜನೆಗಳ ಮೂಲಕ ಕೊಡಗು ಸೇರಿದಂತೆ ಮೈಸೂರು ಕ್ಷೇತ್ರದಲ್ಲಿ ಮಹಿಳಾ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಗ್ಯಾರಂಟಿ ಯೋಜನೆ ನೀಡಿದ್ದು ಕಾಂಗ್ರೆಸ್. ಹೀಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿಯಿರಿ ಎಂಬ ಭಾವನಾತ್ಮಕ ಕೋರಿಕೆಯೂ ಮುಂದಿಡಲ್ಪಡುತ್ತಿದೆ. ಯುವನಿಧಿ ಮೂಲಕ ನಿರುದ್ಯೋಗಿ ಯುವಕ, ಯುವತಿಯರಿಗೆ ಮಾಸಿಕ ೩ ಸಾವಿರ ನೀಡಿಕೆ ಕೂಡ ಯುವಪೀಳಿಗೆಯನ್ನು ಸೆಳೆಯುತ್ತಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದಾಗಿ ಈ ಚುನಾವಣೆಯಲ್ಲಿ ಇದು ಕೂಡ ಸಾಕಷ್ಟು ಅನುಕೂಲಕರ ವಾತಾವರಣವನ್ನು ಕೈ ಪರವಾಗಿರುವಂತೆ ಮಾಡಲಿದೆ. ಅನೇಕ ವರ್ಷಗಳ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಾಗಿ ಅಭ್ಯರ್ಥಿ ಗೆಲುವಿಗೆ ಉತ್ಸಾಹದಿಂದ ಶ್ರಮಿಸುತ್ತಿರುವುದು ಕ್ಷೇತ್ರವ್ಯಾಪ್ತಿಯಲ್ಲಿ ಸ್ಪಷ್ಟವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ರುಚಿ ಕಂಡಿರುವ ಕಾಂಗ್ರೆಸ್ಸಿಗರಿಗೆ ಈಗ ಲೋಕಸಭೆಯ ಗೆಲುವು ಕೂಡ ಬೇಕು ಎನ್ನಿಸಿದೆ.

ಬಿಜೆಪಿ ಪಾಲಿಗೆ ಮೋದಿ ಮಂತ್ರವೇ ತಂತ್ರ

ಟೀಕೆಗಳು ಏನೇ ಇರಲಿ, ೧೦ ವರ್ಷಗಳಲ್ಲಿ ಪ್ರತಾಪ್ ಸಿಂಹ ರಾಜ್ಯದಲ್ಲಿಯೇ ಮಾದರಿ ಸಂಸದರಾಗಿ ಕಾರ್ಯನಿರ್ವಹಿಸಿದ್ದಾರೆ. ಓರ್ವ ಸಂಸದ ಎಂತಹ ಯೋಜನೆಗಳಿಗೆ ಆದ್ಯತೆ ನೀಡಬೇಕು ಎಂಬುದನ್ನು ಪ್ರತಾಪ್ ಸಿಂಹ ನಿಚ್ಚಳವಾಗಿ ಕಾರ್ಯಗತ ಮಾಡಿ ನಿರೂಪಿಸಿದ್ದಾರೆ. ಹಿಂದುತ್ವದ ವಿಚಾರಕ್ಕೂ ಸಿಂಹ ಸ್ಪಂದಿಸಿದ್ದಾರೆ. ಹೀಗಿದ್ದರೂ ಪ್ರತಾಪ್ ಸಿಂಹ ಪಾಲಿಗೆ ಯಾವ ಅಂಶ ಟಿಕೆಟ್ ದೊರಕಲು ಮುಳುವಾಯಿತು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಮೊನ್ನೆ ಮೊನ್ನೆಯವರೆಗೂ ಪ್ರತಾಪ್ ಸಿಂಹ ಜಿಂದಾಬಾದ್ ಎನ್ನುತ್ತಿದ್ದವರೇ ಈಗ ಯದುವೀರ್ ಮಹಾರಾಜ್ ಕೀ ಜೈ ಎನ್ನುತ್ತಿರುವುದು ರಾಜಕೀಯದ ಸೋಜಿಗಳಲ್ಲೊಂದು. ಪ್ರತಾಪ್ ಸಿಂಹ ಹೇಳುವಂತೆ, ನಾನೋರ್ವ ಉತ್ತಮ ಸಂಸದನಾದೆ. ಆದರೆ ತಂತ್ರಗಾರಿಕೆಯ ರಾಜಕಾರಣಿಯಾಗಲಿಲ್ಲ!

ಮೈಸೂರು ರಾಜವಂಶಸ್ಥರನ್ನು ೨೫ ವರ್ಷಗಳ ಬಳಿಕ ಕಣಕ್ಕಿಳಿಸುವ ಮೂಲಕ ಬಿಜೆಪಿ ತನ್ನ ಚುನಾವಣಾ ತಂತ್ರಗಾರಿಕೆಯ ಮೊದಲ ಹಂತ ಗೆದ್ದಿದೆ. ಸ್ವತಃ ಸಿದ್ದರಾಮಯ್ಯ ಅವರೇ ಕಾಂಗ್ರೆಸ್ಸಿಗರಿಗೆ, ಯಾವುದೇ ಕಾರಣಕ್ಕೂ ಯದುವೀರ್ ಅವರನ್ನು ಟೀಕಿಸಬೇಡಿ ಎಂದು ಹೇಳಿರುವುದು ಇಂದಿಗೂ ಮೈಸೂರು ಪ್ರಾಂತ್ಯದಲ್ಲಿ ರಾಜವಂಶಸ್ಥರಿಗೆ ಇರುವ ಗೌರವಕ್ಕೆ ನಿದರ್ಶನದಂತಿದೆ. ಮಾತ್ರವಲ್ಲ, ಈ ವಂಶಸ್ಥರ ವಿರುದ್ಧ ನೀಡುವ ಹೇಳಿಕೆ ಮತಗಳಿಕೆಗೆ ಡ್ಯಾಮೇಜ್ ತಂದೊಡ್ಡುವ ಬಗ್ಗೆ ಸಿದ್ದರಾಮಯ್ಯ ಅವರಂತಹ ನಿಪುಣ ರಾಜಕಾರಣಿಗೆ ಚೆನ್ನಾಗಿ ತಿಳಿದಿದೆ.

ಹೀಗಾಗಿ ಯದುವೀರ್ ವಿರೋಧಿ ಹೇಳಿಕೆಯಿಲ್ಲದೇ ೧೦ ವರ್ಷಗಳಲ್ಲಿ ಪ್ರತಾಪ್ ಸಿಂಹ ವೈಫಲ್ಯ ಮತ್ತು ಮೋದಿ ವಿರುದ್ಧವೇ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಟೀಕಾಸ್ತç ಪ್ರಚಾರ ನಡೆಸಲಿದೆ.

ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಕಳೆದ ವಿಧಾನಸಭಾ ಚುನಾವಣಾ ಸೋಲಿನ ಕಹಿಯಿಂದ ಹೊರಬರಲು ಈಗ ಗೆಲುವಿನ ರುಚಿ ಅಗತ್ಯವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಕಳೆದ ಚುನಾವಣೆಯ ಕಹಿನೆನಪುಗಳ ಸುಳಿವೇ ಇಲ್ಲದಂತೆ ಎಲ್ಲ ಭೇದ ಮರೆತು ಪ್ರಚಾರ ಕೈಗೊಂಡಿದ್ದಾರೆ. ತಮ್ಮೊಳಗಿನ ನೂರಾರು ಭಿನ್ನಾಭಿಪ್ರಾಯಗಳು, ಸ್ಥಳೀಯ ಸಂಸ್ಥೆಗಳಲ್ಲಿನ ಆಡಳಿತ ವೈಫಲ್ಯ ಜನರಿಗೆ ಗೊತ್ತೇ ಆಗದಂತೆ ಮೋದಿ ಹೆಸರನ್ನೇ ಮುಂದಿಟ್ಟುಕೊAಡು ಎಲ್ಲಾ ಲೋಪಗಳನ್ನು ಮರೆಸುವ ಸತತ ಪ್ರಯತ್ನ ಬಿಜೆಪಿ ಪಾಳಯದಲ್ಲಿ ನಡೆಯುತ್ತಿದೆ.

ರಾಜಕಾರಣಕ್ಕೆ ಮಾತ್ರವಲ್ಲ ಸಾರ್ವಜನಿಕ ವೇದಿಕೆಗೂ ಯದುವೀರ ಹೊಸಬರಾಗಿದ್ದಾರೆ. ಹೀಗಾಗಿ ಪ್ರತಾಪ್ ಸಿಂಹರAತೆ ಅಬ್ಬರದ ಮಾತುಗಳನ್ನು ಬಿಜೆಪಿ ಬೆಂಬಲಿಗರು ಕೇಳಲು ಸಾಧ್ಯವಿಲ್ಲದಂತಾಗಿದೆ. ಅರಮನೆ ಬಿಟ್ಟು ಸಾರ್ವಜನಿಕ ಅಖಾಡಕ್ಕೆ ಇಳಿದಿರುವ ಯದುವೀರ ಅವರನ್ನು ಜನರ ನಡುವೇ ಇರುವ ನಾಯಕ ಎಂದು ಬಿಂಬಿಸುವ ಪ್ರಯತ್ನ ಜೋರಾಗಿಯೇ ಸಾಗಿದೆ.

ಈ ಹಿಂದೆ ಅತ್ಯಂತ ಜನಪ್ರಿಯರಾಗಿದ್ದ ಶ್ರೀಕಂಠದತ್ತ ಒಡೆಯರ್ ಕೂಡ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಮತದಾರ ರಾಜವಂಶಸ್ಥ ಎಂದ ಕೂಡಲೇ ಅವರಿಗೆ ಮತಹಾಕಿ ಗೆಲ್ಲಿಸಲಿಲ್ಲ. ಮೂರನೇ ಸ್ಥಾನಕ್ಕೆ ಶ್ರೀಕಂಠದತ್ತರು ತಳ್ಳಲ್ಪಟ್ಟಿದ್ದರು ಎಂಬ ಅಂಶವೂ ಬಿಜೆಪಿಗರು ಮರೆಯುವಂತಿಲ್ಲ. ಯದುವೀರ ಗೆಲುವು ಸಾಧಿಸುವುದು ರಾಜವಂಶಕ್ಕೆ ಹಾಗೂ ಬಿ.ಜೆ.ಪಿ.ಗೆ ಪ್ರತಿಷ್ಠೆಯ ಪ್ರಶ್ನೆ ಎನಿಸಿದೆ.

ಮೈಸೂರು ಪ್ರಾಂತ್ಯದಲ್ಲಿ ಈ ಹಿಂದಿನ ವರ್ಷಗಳಂತೆ ಈಗಲೂ ರಾಜವಂಶಸ್ಥರ ಬಗ್ಗೆ ಆಕರ್ಷಣೆ ಇದೆಯೇ ಎಂಬುದನ್ನು ಮತದಾನವೇ ನಿರ್ಧರಿಸಲಿದೆ.

ಕೃಷ್ಣರಾಜ ಕ್ಷೇತ್ರ ಬಿಟ್ಟರೆ ಉಳಿದ ೭ ಕ್ಷೇತ್ರಗಳೂ ಬಿಜೆಪಿ ಹಿಡಿತದಲ್ಲಿಲ್ಲ. ಆದರೆ ಹುಣಸೂರು, ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿರುವುದು ಮತ್ತು ಜೆಡಿಎಸ್ ಇದೀಗ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದು ಕಮಲಪಡೆಯ ಬಲಕ್ಕೆ ಕಾರಣವಾಗಿದೆ.

ಬಿಜೆಪಿ ಪಾಲಿಗೆ ಪ್ರಧಾನಿ ಮೋದಿಯೇ ಗೆಲುವಿನ ಬ್ರಹ್ಮಾಸ್ತçದಂತಾಗಿದ್ದಾರೆ. ಹೀಗಾಗಿ ಕೇಂದ್ರದಲ್ಲಿ ಮೋದಿಯನ್ನು ತೋರಿಸಿಕೊಂಡು ಮತ ಕೇಳುವ ಅನಿವಾರ್ಯತೆ ಬಿಜೆಪಿಗಿದೆ. ಜೊತೆಯಲ್ಲಿ ಮೈಸೂರು ಅರಸ ಮನೆತನದ ಸಭ್ಯತೆ ಮತ್ತು ತಾನು ರಾಜಮನೆತನದವನಾದರೂ, ಮುಂದೆ ಜನನಾಯಕನಾಗಿರುತ್ತೇನೆ ಎನ್ನುವ ಭರವಸೆಗಳು, ಹೊಸ ಮುಖದತ್ತ ಮತದಾರನ ಆಕರ್ಷಣೆಯನ್ನು ಬಿ.ಜೆ.ಪಿ. ನಗದೀಕರಿಸಬೇಕಿದೆ.

ಮೈತ್ರಿ ಲೆಕ್ಕಾಚಾರ?

ಜಿ.ಟಿ. ದೇವೇಗೌಡ ಮತ್ತು ಹರೀಶ್ ಗೌಡರಂತಹ ಪ್ರಮುಖ ಒಕ್ಕಲಿಗ ನಾಯಕರು, ಜತೆಗೆ ಸಂಸದ ಪ್ರತಾಪ್ ಸಿಂಹ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಲೆಕ್ಕಾಚಾರ ಹಾಕಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಜೆಡಿಎಸ್ ಮುಖಂಡ ಹೆಚ್.ಡಿ. ಕುಮಾರಸ್ವಾಮಿಗೂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಯದುವೀರ ಗೆಲವು ಪ್ರತಿಷ್ಠೆಯಾಗಿರುವುದರಿಂದಾಗಿ ದೇವೇಗೌಡ, ಹರೀಶ್ ಗೌಡ ಅವರಿಗೆ ಗೆಲುವಿನ ಹೊಣೆ ಒಪ್ಪಿಸಿದ್ದಾರೆ. ಕಾಂಗ್ರೆಸ್ ಸೋತಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ರಾಜೀನಾಮೆ ನೀಡಿ ಎಂದು ಕೇಳುವ ಮೊದಲ ವ್ಯಕ್ತಿಯೇ ಕುಮಾರಸ್ವಾಮಿ ಆಗಿರುತ್ತಾರೆ. ಇಂತಹ ಅವಕಾಶವನ್ನು ಕುಮಾರಸ್ವಾಮಿ ಬಿಡಲಿಕ್ಕಿಲ್ಲ.

ಕೊಡಗಿನಲ್ಲಿ ಮೂಲೆಪಾಲಾಗಿರುವ ಜೆಡಿಎಸ್‌ಗೆ ಚುನಾವಣೆ ನೆಪದಲ್ಲಿ ಮತ್ತೆ ಕಾಯಕಲ್ಪ ನೀಡುವ ಪ್ರಯತ್ನ ನಡೆದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ನಾಪಂಡ ಮುತ್ತಪ್ಪ ಈಗ ಕೈ ಪಾಲಾಗಿದ್ದಾರೆ. ಹೀಗಾಗಿ ಕೊಡಗಿನಲ್ಲಿ ಮುತ್ತಪ್ಪ ಬೆಂಬಲಿತ ಜೆಡಿಎಸ್ ಕಾರ್ಯಕರ್ತರು ಯಾವ ನಿಲುವು ಕೈಗೊಳ್ಳುತ್ತಾರೆ ಎಂಬ ಕುತೂಹಲವೂ ಇದೆ.

ಮೂರನೇ ಅವಧಿಗೆ ಸ್ಪರ್ಧೆಯ ಅವಕಾಶ ತಪ್ಪಿಸಿಕೊಂಡ ಪ್ರತಾಪ್ ಸಿಂಹ ಬಿಜೆಪಿ ಅಭ್ಯರ್ಥಿಗೆ ಒಳಏಟಿನ ಮೂಲಕ ಪಾಠ ಕಲಿಸುತ್ತಾರೆ ಎಂಬ ವದಂತಿಯನ್ನು ಸಿಂಹ ಘರ್ಜನೆಯ ಮೂಲಕ ಅಲ್ಲಗಳೆದಿದ್ದಾರೆ. ಏಕೆಂದರೆ, ಪ್ರತಾಪ್ ಸಿಂಹ ಬದ್ಧ ವೈರಿಯಾದ, ನ್ಯಾಯಾಲಯದಲ್ಲಿ ಕಾನೂನು ಜಟಾಪಟಿಗೂ ಕಾರಣವಾಗಿರುವ ಎಂ. ಲಕ್ಷö್ಮಣ್ ಗೆಲುವನ್ನು ಖಂಡಿತಾ ಪ್ರತಾಪ್ ಸಿಂಹ ಬಯಸುವುದಿಲ್ಲ.

ಹೀಗಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ತಾನು ಬಿಜೆಪಿಯನ್ನು ಗೆಲ್ಲಿಸುವೆ ಎಂದು ಪ್ರತಾಪ್ ಸಿಂಹ ತನ್ನ ಎಲ್ಲಾ ಅಸಮಧಾನ, ಸಿಟ್ಟನ್ನು ಬದಿಗಿಟ್ಟು ಯದುವೀರ ಪರ ನೀಡುತ್ತಿರುವ ಹೇಳಿಕೆಗಳೇ ಕೊನೆಯವರೆಗೂ ವಾಸ್ತವವಾಗುವ ಸಾಧ್ಯತೆಯಿದೆ.

ಅರಮನೆ ನಗರದ ಯುವರಾಜ ಮತ್ತು ಪ್ರಜಾ ಲಕ್ಷö್ಮಣ ನಡುವಿನ ಲೋಕಯುದ್ಧದಲ್ಲಿ ಅಂತಿಮ ತೀರ್ಪು ಯಾರ ಪರ ಬರಲಿದೆ ಎಂಬುದಕ್ಕೆ ಏಪ್ರಿಲ್ ೨೬ ಮುಹೂರ್ತದ ದಿನವಾಗಿದೆ.!