*ಸಿದ್ದಾಪುರ, ಏ. ೨: ಕಾವೇರಿಯ ತವರು ಜಿಲ್ಲೆ ಕೊಡಗಿನ ನದಿಗಳು ಮತ್ತು ಜಲಮೂಲಗಳೇ ಮಳೆಗಾಗಿ ಆಕಾಶ ನೋಡುವ ಪರಿಸ್ಥಿತಿ ಎದುರಾಗಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದ್ದು, ನದಿ ನೀರು ಬರಿದಾಗಿದೆ.

ಕಾವೇರಿ ನದಿ ನೀರು ಹರಿಯುವ ಪ್ರದೇಶವೆಲ್ಲವೂ ಬಯಲಿನಂತಾಗಿದ್ದು, ಬಂಡೆ ಮತ್ತು ಮರಳು ಗೋಚರಿಸುತ್ತಿದೆ. ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲೂ ಬಿಸಿಲು ಮಿತಿ ಮೀರಿದೆ. ಭಾಗ ಮಂಡಲದ ತ್ರಿವೇಣಿ ಸಂಗಮದಲ್ಲಿ ನದಿ ನೀರು ಕ್ಷೀಣಿಸಿದ್ದು, ಭಕ್ತರ ಸ್ನಾನಕ್ಕೆ ಕಷ್ಟವಾಗಿದೆ. ನಾಪೋಕ್ಲು ಭಾಗದ ಒಂದೆರಡು ಕಡೆ ಹನಿ ಮಳೆ ಸುರಿದಿದೆಯೇ ಹೊರತು ಈ ವೇಳೆಗೆ ಆಗಬೇಕಾದಷ್ಟು ಪ್ರಮಾಣದಲ್ಲಿ ಮಳೆ ಜಿಲ್ಲೆಯ ಯಾವುದೇ ಭಾಗದಲ್ಲಿ ಆಗಿಲ್ಲ.

ಮಳೆ ಸುರಿಯದ ಕಾರಣ ಮತ್ತು ಕಳೆದ ಮಳೆಗಾಲದಲ್ಲಿ ಸಾಕಷ್ಟು ಮಳೆ ಕೊರತೆಯಾಗಿರುವುದರಿಂದ ಮಾರ್ಚ್ ತಿಂಗಳ ಬಿಸಿಲಿಗೆ ನದಿಗಳು ಬರಡಾಗಿವೆ. ಸಿದ್ದಾಪುರದ ಗುಹ್ಯ- ಅಗಸ್ತೇಶ್ವರ ದೇವಾಲಯ ವ್ಯಾಪ್ತಿಯ ನದಿ ಪ್ರದೇಶ ಮೈದಾನದಂತಾಗಿದೆ. ಸಾಕಷ್ಟು ನೀರು ಇರುತ್ತಿದ್ದ ದುಬಾರೆಯಲ್ಲಿ ನೀರೇ ಇಲ್ಲದೆ ಪ್ರವಾಸಿಗರು ಬರಿದಾದ ನದಿಯ ಬಂಡೆ ಕಲ್ಲುಗಳನ್ನು ನೋಡಿ ನಿರಾಶೆಯಿಂದ ಮರಳುತ್ತಿದ್ದಾರೆ. ಇಲ್ಲಿ ನಡೆಯುತ್ತಿದ್ದ ರ‍್ಯಾಫ್ಟಿಂಗ್ ಜಲ ಕ್ರೀಡೆಯನ್ನು ನೀರಿನ ಕೊರತೆಯಿಂದ ಸ್ಥಗಿತಗೊಳಿಸಲಾಗಿದೆ. ಮರಳಿನ ತಡೆಗೋಡೆ ನಿರ್ಮಿಸಿ ನೀರು ನಿಲ್ಲಿಸುವ ಪ್ರಯತ್ನ ಮಾಡ ಲಾಗಿತ್ತು. ಆದರೆ ಈಗ ನೀರೆ ಇಲ್ಲದ ಪರಿಸ್ಥಿತಿ ಉದ್ಭವಿಸಿದೆ.

ಚಿಕ್ಲಿಹೊಳೆ ಸಂಪೂರ್ಣವಾಗಿ ಬರಿ ದಾಗಿದ್ದು, ಅನೇಕ ವರ್ಷಗಳ ನಂತರ ಇಲ್ಲಿರುವ ವಿಶ್ವನಾಥ ದೇಗುಲ ಗೋಚರಿಸುತ್ತಿದೆ. ಪುರಾತನ ಕಾಲದ ಈ ದೇವಾಲಯವನ್ನು ನದಿ ನೀರು ಆವರಿಸಿಕೊಂಡೇ ಇರುತ್ತಿತ್ತು, ಆದರೆ ಇಂದು ದೇವಾಲಯದ ಬಳಿ ಒಂದು ಹನಿಯೂ ನೀರಿಲ್ಲ. ಚಿಕ್ಲಿಹೊಳೆ ಜಲಾಶಯವನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಈಗ ನೀರಿನ ಬದಲು ಈ ವಿಶ್ವನಾಥನ ದೇವಾಲಯವೇ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಕಾಫಿ ತೋಟಗಳ ಕೆರೆಗಳು ಬತ್ತಿ ಹೋಗಿದ್ದು, ಬೆಳೆಗಾರರು ಗಿಡಗಳಿಗೆ ನೀರು ಹಾಯಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನದಿಗಳಲ್ಲಿ ಕೂಡ ನೀರಿಲ್ಲದೆ ಇರುವುದರಿಂದ ಮತ್ತು ಮಳೆ ಬೀಳದ ಕಾರಣ ಗಿಡಗಳಿಗೆ ಹಾನಿಯಾಗಿ ಮುಂದಿನ ವರ್ಷ ಫಸಲು ಕ್ಷೀಣಿಸುವ ಆತಂಕ ಎದುರಾಗಿದೆ. ಕನಿಷ್ಟ ಮೂರು ನಾಲ್ಕು ದಿನ ಉತ್ತಮ ಮಳೆಯಾದರೆ ಒಳಿತು ಎಂದು ಬೆಳೆಗಾರರು ಆಕಾಶ ನೋಡುತ್ತಿ ದ್ದಾರೆ. ಈಗಾಗಲೇ ವಿವಿಧ ಸಂಘ-ಸAಸ್ಥೆಗಳು, ಭಕ್ತರು, ರೈತರು, ರಾಜಕಾರಣಿಗಳು ಸೇರಿದಂತೆ ಅನೇಕರು ತಲಕಾವೇರಿ ಹಾಗೂ ಮೈಸೂರು ಚಾಮುಂಡಿ ಬೆಟ್ಟದಲ್ಲಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಆದರೆ ಮಳೆ ಬಾರದೆ ಜನ ಕಂಗಾಲಾಗಿದ್ದಾರೆ.

ಜಿಲ್ಲೆಯ ನದಿ, ಜಲಮೂಲ ಗಳಂತೆ ಕೆರೆ, ಕೊಳವೆ ಬಾವಿಗಳು ಕೂಡ ಬತ್ತಿ ಹೋಗುತ್ತಿವೆ. ಅನೇಕ ಗ್ರಾ.ಪಂ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ತಲುಪಿಸುವ ಪರಿಕಲ್ಪನೆ ವಿಫಲವಾಗುತ್ತಿದೆ. ನೀರೇ ಇಲ್ಲದ ಮೇಲೆ ನೀರು ಸರಬರಾಜು ಮಾಡುವುದು ಹೇಗೆ ಎನ್ನುವುದು ಗ್ರಾ.ಪಂ ಗಳ ಅಸಹಾಯಕ ಪ್ರಶ್ನೆಯಾಗಿದೆ. ಒಂದೆರಡು ದಿನಗಳಲ್ಲಿ ಜಿಲ್ಲೆಗೆ ಉತ್ತಮ ಮಳೆಯಾಗದಿದ್ದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿ ಕುಡಿಯಲು ನೀರಿಲ್ಲದ ಪರಿಸ್ಥಿತಿ ಎದುರಾಗಬಹುದು.

ಕಾವೇರಿ ನಾಡಿನಲ್ಲೇ ನೀರಿಗಾಗಿ ಹಾಹಾಕಾರ ಆರಂಭಗೊAಡಿರುವುದರಿAದ ಕಾವೇರಿ ನದಿ ನೀರನ್ನು ಅವಲಂಬಿಸಿರುವ ಅಕ್ಕಪಕ್ಕದ ಜಿಲ್ಲೆಗಳ ಜನ ಕುಡಿಯಲು ಕೂಡ ನೀರಿಲ್ಲದೆ ಪರದಾಡುತ್ತಿದ್ದಾರೆ.

ಒಂದೆಡೆ ನದಿಗಳು ಬರಿದಾಗುತ್ತಿದ್ದರೆ ಮತ್ತೊಂದೆಡೆ ಬಿಸಿಲಿನ ಬೇಗೆ ಜನರನ್ನು ಹೈರಾಣಾಗಿಸಿದೆ. ಸದಾ ಹವಾಗುಣದ ಸಮತೋಲನವನ್ನು ಕಾಯ್ದುಕೊಂಡು ಬರುತ್ತಿದ್ದ ದಕ್ಷಿಣದ ಕಾಶ್ಮೀರ ಖ್ಯಾತಿಯ ಕೊಡಗಿನಲ್ಲಿ ಈ ಮಾರ್ಚ್ ತಿಂಗಳಿನಲ್ಲಿ ಉಷ್ಣಾಂಶ ೩೫ ರಿಂದ ೩೯ ಡಿಗ್ರಿ ಸೆಲ್ಷ್ಷಿಯಸ್‌ವರೆಗೆ ಏರಿಳಿತವಾಗುತ್ತಿದೆ. ಇಷ್ಟು ತಾಪಮಾನವನ್ನು ಹಿಂದೆ ಎಂದೂ ಅನುಭವಿಸಿಲ್ಲ ಎಂದು ಹಿರಿಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

‘ಕೂರ್ಗ್ ಕೂಲ್’ ಇರಬಹುದು ಎಂದು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಆದರೆ ಇಲ್ಲಿನ ಉಷ್ಣಾಂಶ ಮತ್ತು ನೀರಿಲ್ಲದ ಪರಿಸ್ಥಿತಿಯನ್ನು ಕಂಡು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮಾರ್ಚ್ ತಿಂಗಳಲ್ಲೇ ಹೀಗಾದರೆ ಏಪ್ರಿಲ್, ಮೇ ತಿಂಗಳ ಸ್ಥಿತಿ ಏನು ಎಂದು ನಿರಾಶೆಯಿಂದ ಮರಳುತ್ತಿದ್ದಾರೆ.

ವನ್ಯಜೀವಿಗಳು ಕೂಡ ಮನುಷ್ಯರಂತೆ ನೀರಿನ ಕೊರತೆಯನ್ನು ಎದುರಿಸುತ್ತಿದ್ದು, ಕಾಡಿನಲ್ಲಿ ಕೆರೆಗಳು ಬತ್ತಿ ಹೋಗಿರುವುದರಿಂದ ತೋಟಗಳ ಕೆರೆಗಳನ್ನು ಹುಡುಕಿ ಕೊಂಡು ಕಾಡಾನೆಗಳು ಬರುತ್ತಿವೆ. ಆದರೆ ಇಲ್ಲಿಯೂ ನದಿ, ಕೆರೆಗಳು ಬತ್ತಿ ಹೋಗಿದ್ದು, ಅಸಹಾಯಕ ಸ್ಥಿತಿ ಎದುರಾಗಿದೆ. ಅತಿಯಾದ ಬಿಸಿಲು ಮತ್ತು ಕಾಡ್ಗಿಚ್ಚಿನಿಂದ ಹಸಿರು ನಾಶವಾಗುತ್ತಿದ್ದು, ಕಾಡುಪ್ರಾಣಿಗಳಿಗೆ ಆಹಾರದ ಕೊರತೆಯೂ ಎದುರಾಗಿದೆ. ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಜನ ಆಯಾಸ ಮತ್ತು ಅನಾರೋಗ್ಯವನ್ನು ಎದುರಿಸುತ್ತಿದ್ದು, ಕೆಲಸ, ಕಾರ್ಯಗಳಲ್ಲಿ ಅಸಡ್ಡೆ ಕಾಡುತ್ತಿದೆ. ತುರ್ತಾಗಿ ಒಂದೆರಡು ಮಳೆಯಾದರೆ ಮಾತ್ರ ಮನುಷ್ಯ, ವನ್ಯಜೀವಿ ಮತ್ತು ಅರಣ್ಯದ ಪರಿಸ್ಥಿತಿ ಸುದಾರಿಸಬಹುದಾಗಿದೆ. ಇಲ್ಲದಿದ್ದಲ್ಲಿ ಆತಂಕದ ಛಾಯೆ ಎದುರಾಗಬಹುದು. - ಅಂಚೆಮನೆ ಸುಧಿ