ಸೋಮವಾರಪೇಟೆ, ಮಾ. ೨೮: ತಾಲೂಕಿನ ಮಾದಾಪುರದ ಹಿಂದೂ ಜಾಗರಣಾ ವೇದಿಕೆ ವತಿಯಿಂದ ತಾ. ೩೦ರಂದು ಆಯೋಜಿಸಿದ್ದ ಶ್ರೀರಾಮ ನವಮಿ ಉತ್ಸವ ಕಾರ್ಯಕ್ರಮದ ದಿಕ್ಸೂಚಿ ಭಾಷಣಕ್ಕೆ ತಡೆ ನೀಡಿದ್ದ ಚುನಾವಣಾ ಆಯೋಗದ ಕ್ರಮಕ್ಕೆ ಹೈಕೋರ್ಟ್ ತಡೆ ನೀಡಿ, ಭಾಷಣಕ್ಕೆ ಅವಕಾಶ ಕಲ್ಪಿಸಿ ಆದೇಶಿಸಿದೆ.

ಮಾದಾಪುರದ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಶ್ರೀರಾಮ ನವಮಿ ಅಂಗವಾಗಿ ತಾ. ೩೦ರಂದು ಮಾದಾಪುರದಲ್ಲಿ ಬೃಹತ್ ಶೋಭಾಯಾತ್ರೆಯನ್ನು ಮಧ್ಯಾಹ್ನ ೨ ಗಂಟೆಯಿAದ ಆಯೋಜಿಸಿದೆ. ಜಂಬೂರು ಶ್ರೀ ಬಸವೇಶ್ವರ ದೇವಾಲಯದಿಂದ ಶೋಭಾಯಾತ್ರೆ ಆರಂಭವಾಗಿ ಮಾದಾಪುರದ ಪ್ರಮುಖ ಮಾರ್ಗದಲ್ಲಿ ಸಂಚರಿಸಿ ಬಸ್ ನಿಲ್ದಾಣದಲ್ಲಿ ಸಮಾಪನಗೊಂಡ ನಂತರ, ಸಂಜೆ ೫ ಗಂಟೆಗೆ ಬಸ್ ನಿಲ್ದಾಣದಲ್ಲಿ ಸಭಾ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಫಿ ಬೆಳೆಗಾರ ಮಂಡೆಟ್ಟಿರ ಅನಿಲ್ ಪೊನ್ನಪ್ಪ ವಹಿಸಲಿದ್ದು, ದಿಕ್ಸೂಚಿ ಭಾಷಣಕಾರರಾಗಿ ಯುವ ವಾಗ್ಮಿ ಬೆಂಗಳೂರಿನ ಹಾರಿಕ ಮಂಜುನಾಥ್ ಭಾಗವಹಿಸಲಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆಯ ಸಂಚಾಲಕ ವಿನಯ್‌ಕುಮಾರ್ ಪ್ರಕಟಣೆ ಮೂಲಕ ಮಾಹಿತಿ ಹಂಚಿಕೊAಡಿದ್ದರು.

ಕಾರ್ಯಕ್ರಮಕ್ಕೆ ಅನುಮತಿ ನೀಡುವ ಸಂದರ್ಭ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಹಲವಷ್ಟು ನಿಬಂಧನೆಗಳನ್ನು ವಿಧಿಸಿದ್ದು, ಇದರಲ್ಲಿ ‘ಭಕ್ತಾದಿಗಳನ್ನು ಉದ್ದೇಶಿಸಿ ಭಾಷಣವನ್ನು ಮಾಡಲು ಅವಕಾಶವಿರುವುದಿಲ್ಲ’ ಎಂದು ಆದೇಶಿಸಿದ್ದರು.

ಚುನಾವಣಾಧಿಕಾರಿಗಳ ಈ ಕ್ರಮದ ವಿರುದ್ಧ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಯುವ ಪ್ರಮುಖ್ ಸುನಿಲ್ ಅವರು ಹೈಕೋರ್ಟ್ನಲ್ಲಿ ರಿಟ್ ಪಿಟಿಷನ್ ಸಲ್ಲಿಸಿದ್ದರು. ಅರ್ಜಿದಾರರ ಪರವಾಗಿ ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ಅರುಣ್ ಶ್ಯಾಂ, ಶುಯೋಗ್ ಹೇರಳೆ, ಶಾಂತೆಯAಡ ನಿಶಾಂತ್ ಕುಶಾಲಪ್ಪ ಅವರುಗಳು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದು, ಅಂತಿಮವಾಗಿ ಕೆಲವೊಂದು ನಿಬಂಧನೆಗಳನ್ನು ವಿಧಿಸಿ, ಸಭಾ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಹೈಕೋರ್ಟ್ ಅನುಮತಿ ನೀಡಿದೆ ಎಂದು ಜಾಗರಣಾ ವೇದಿಕೆ ಸಂಚಾಲಕ ವಿನಯ್‌ಕುಮಾರ್ ತಿಳಿಸಿದ್ದಾರೆ.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಭಾಷಣಕ್ಕೆ ಅವಕಾಶವಿಲ್ಲವೆಂದು ಆದೇಶ ನೀಡುವ ಮೂಲಕ ಸಂವಿಧಾನ ದತ್ತವಾದ ಧಾರ್ಮಿಕ ಹಕ್ಕನ್ನು ಚುನಾವಣಾ ಆಯೋಗ ಕಸಿದುಕೊಂಡಿದೆ. ಈ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದೆವು. ಇದೀಗ ಕಾರ್ಯಕ್ರಮದಲ್ಲಿ ರಾಜಕೀಯ ರಹಿತ ಭಾಷಣಕ್ಕೆ ಅವಕಾಶ ನೀಡಲಾಗಿದೆ. ತಾ. ೩೦ರಂದು ಬೆಂಗಳೂರಿನ ಯುವ ವಾಗ್ಮಿ ಹಾರಿಕ ಮಂಜುನಾಥ್ ಅವರು ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಸುನಿಲ್ ತಿಳಿಸಿದ್ದಾರೆ.