*ಗೋಣಿಕೊಪ್ಪ: ಶ್ರೀ ಮುತ್ತಪ್ಪ ದೇವರ ಉತ್ಸವ ಸಾವಿರಾರು ಭಕ್ತಾದಿಗಳ ಹರಕೆ ಪ್ರಾರ್ಥನೆಯೊಂದಿಗೆ ನೆರವೇರಿತು.

ಕರಡಿಕೊಪ್ಪದಲ್ಲಿನ ಮುತ್ತಪ್ಪ ದೇವಸ್ಥಾನದಲ್ಲಿ ಮೂರು ದಿನಗಳು ಜಾತ್ರಾ ಮಹೋತ್ಸವ ನಡೆಯಿತು. ಗಣಪತಿ ಹೋಮ ಮತ್ತು ಪುಟ್ಟ ಮಕ್ಕಳ ದಿವ್ಯ ಭವಿಷ್ಯಕ್ಕೆ ಮೌನ ಜ್ಞಾನಾ ವ್ರತ, ಕಳಸ ಮೆರವಣಿಗೆ ಜತೆಗೆ ವಸೂರಿ ಮಲ, ಕುಟ್ಟಿಚಾತನ್, ವಿಷ್ಣುಮೂರ್ತಿ, ಪೋದಿ ಗುಳಿಗನ್, ಕರ್ನಾವರ್, ತೆರೆಗಳು ಭಕ್ತಾದಿಗಳಿಗೆ ದರ್ಶನ ನೀಡಿದವು. ನೆರೆದ ಭಕ್ತಾದಿಗಳಿಗೆ ಅನ್ನ ಪ್ರಸಾದವನ್ನು ಏರ್ಪಡಿಸಲಾಯಿತು. ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪೊನ್ನು ಮತ್ತು ಸದಸ್ಯರುಗಳು, ಗ್ರಾಮಸ್ಥರು ಇದ್ದರು.ಕಿಗ್ಗಾಲು ಶ್ರೀ ಚಾಮುಂಡೇಶ್ವರಿ ತೆರೆ ಮಹೋತ್ಸವ

ಮೂರ್ನಾಡು: ಸಮೀಪದ ಕಿಗ್ಗಾಲು ಗ್ರಾಮದಲ್ಲಿ ಶ್ರೀ ಚಾಮುಂಡೇಶ್ವರಿ ತೆರೆ ಮಹೋತ್ಸವ ಏಪ್ರಿಲ್ ೧ ರಿಂದ ನಡೆಯಲಿದೆ.

ಏಪ್ರಿಲ್ ೧ ರಂದು ದೇವರ ಚರಿತ್ರೆ ಹಾಡುವುದು, (ಕೊಟ್ಟಿ ಪಾಡುವೊ), ತಾ.೨ ರಂದು ಮಧ್ಯಾಹ್ನ ೩ ಗಂಟೆಗೆ ತಕ್ಕರ ಮನೆಯಿಂದ ಭಂಡಾರ ಅಂಬಲಕ್ಕೆ ತಂದು ದೇವರ ದರ್ಶನದ ನಂತರ ಭಂಡಾರ ತೆಗೆದುಕೊಂಡು ಎತ್ತು ಪೋರಾಟವಾಗಿ ಬನಕ್ಕೆ ಹೋಗುವುದು. ಅಲ್ಲಿ ದೈವತಾ ಕಾರ್ಯ ನಡೆಯುವುದು. ತದನಂತರ ಕುಟ್ಟಿಚಾತ ತೆರೆ, ತೆಂಗಿನ ಕಾಯಿಗೆ ಗುಂಡು ಹೊಡೆಯುವುದು ಇತರ ದೈವತಾ ಕಾರ್ಯಗಳು ನಡೆಯುತ್ತದೆ. ಅದೇ ದಿನ ಸಂಜೆ ಭಂಡಾರ ಅಂಬಲಕ್ಕೆ ತೆಗೆದುಕೊಂಡು ಬಂದು ಅಂದೇ ರಾತ್ರಿ ೯.೦೦ ಗಂಟೆಗೆ ಶ್ರೀ ವಿಷ್ಣುಮೂರ್ತಿ ಮೇಲೆರಿಗೆ ಬೆಂಕಿ ಕೊಡುವುದು. ನಂತರ ರಾತ್ರಿ ಪೂರ್ತಿ ದೈವತ ಕಾರ್ಯ ನಡೆಯುವುದು.

ತಾ.೩ ರಂದು ಬೆಳಗ್ಗಿನ ಜಾವ ೫ ಗಂಟೆಗೆ ಶ್ರೀ ವಿಷ್ಣುಮೂರ್ತಿ ತೆರೆ (ಕೋಲ), ಮೇಲೇರಿ ಬೀಳುವುದು ಮತ್ತು ೧೧ ಗಂಟೆಗೆ ಶ್ರೀ ಚಾಮುಂಡೇಶ್ವರಿಯ ದೊಡ್ಡಮುಡಿ ತೆರೆ ನಡೆಯಲಿದೆ ಎಂದು ತಕ್ಕಮುಖ್ಯಸ್ಥರ ಮತ್ತು ಗ್ರಾಮಸ್ಥರ ಪರವಾಗಿ ಎನ್.ಕೆ. ಕುಂಞರಾಮ ಅವರು ತಿಳಿಸಿದ್ದಾರೆ.ಹರಕೆ ಚೌಡೇಶ್ವರಿ, ನಾಗದೇವರ ವಾರ್ಷಿಕೋತ್ಸವ

ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶ್ರೀ ಹರಕೆ ಚೌಡೇಶ್ವರಿ ದೇವಿ, ನಾಗದೇವರ ವಾರ್ಷಿಕೋತ್ಸವವು ಏಪ್ರಿಲ್ ೫ ರಂದು ನಡೆಯಲಿದೆ.

ಅದರ ಅಂಗವಾಗಿ ಬೆಳಿಗ್ಗೆ ಗಣಪತಿ ಹೋಮ, ದುರ್ಗಾಹೋಮ, ಕಲಾವೃದ್ಧಿ ಹೋಮ, ಅಭಿಷೇಕ, ಕಳಸ ಪ್ರತಿಷ್ಟೆ ಹಾಗೂ ದೇವಿಗೆ ವಿವಿಧ ಅಭಿಷೇಕ ನಡೆಯಲಿವೆ. ಮಧ್ಯಾಹ್ನ ೧ ಗಂಟೆಗೆ ಮಹಾಮಂಗಳಾತಿ, ಪ್ರಸಾದ ವಿನಿಯೋಗ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯುವುದು.

ಸಂಜೆ ೭ ಗಂಟೆಗೆ ದೇವಾಲಯದ ಆವರಣದಲ್ಲಿ ದೀಪಾಲಂಕಾರ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಕೆ.ಸಿ. ರವಿ ತಿಳಿಸಿದ್ದಾರೆ.ಕರಿಕೆ: ಇಲ್ಲಿಗೆ ಸಮೀಪದ ಎಳ್ಳು ಕೊಚ್ಚಿ ತೋಟಂ ಎಂಬಲ್ಲಿ ವಾರ್ಷಿಕ ವಾಗಿ ಆಚರಿಸಿಕೊಂಡು ಬರುತ್ತಿರುವ ಮುತ್ತಪ್ಪನ್ ದೇವರ ವೆಳ್ಳಾಟವು ಮಾರ್ಚ್ ೩೧ ರಂದು ನಡೆಯಲಿದೆ. ಬೆಳಿಗ್ಗೆ ೧೧ ಗಂಟೆಗೆ ಮುತ್ತಪ್ಪನ್ ದೇವರ ಕೋಲ ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿರುವುದಾಗಿ ಆಡಳಿತ ಮಂಡಳಿ ತಿಳಿಸಿದೆ.

ಆತ್ಮೋನ್ನತಿ ಶಿಬಿರ

ವೀರಾಜಪೇಟೆ : ವೀರಾಜಪೇಟೆ ವಿವೇಕ ಜಾಗೃತ ಬಳಗದ ವತಿಯಿಂದ ತಾ. ೨೯ ರಂದು ಆತ್ಮೋನ್ನತಿ ಶಿಬಿರ ನಡೆಯಲಿದೆ ಎಂದು ಬಳಗದ ಅಧ್ಯಕ್ಷರಾದ ಲೋಕೇಶ ಹೆಚ್.ಡಿ. ಅವರು ತಿಳಿಸಿದ್ದಾರೆ.

ವೀರಾಜಪೇಟೆಯ ಕಾವೇರಿ ಆಶ್ರಮದಲ್ಲಿ ಬೆಳಿಗ್ಗೆ ೯:೩೦ ರಿಂದ ಮಧ್ಯಾಹ್ನ ೧:೩೦ ರವರೆಗೆ ಶಿಬಿರ ನಡೆಯಲಿದೆ.