ಶನಿವಾರಸಂತೆ, ಮಾ. ೨೭: ಕಾಡಾನೆಯೊಂದು ಶನಿವಾರಸಂತೆ ವ್ಯಾಪ್ತಿಯಲ್ಲಿ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಶನಿವಾರಸಂತೆ-ಚAಗಡಹಳ್ಳಿ ರಸ್ತೆಯಲ್ಲಿ ಸಮೀಪದ ವೆಂಕಟೇಶ್ವರ ಕಲ್ಯಾಣ ಮಂಟಪ ಹಾಗೂ ಕಾಜೂರು ಸೇತುವೆ ಬಳಿಯ ಕಾಫಿ ತೋಟದಲ್ಲಿ ಕಾಣಿಸಿಕೊಂಡ ಕಾಡಾನೆ ನಂತರ ತ್ಯಾಗರಾಜ ಕಾಲೋನಿ ಮತ್ತು ಸುಳುಗಳಲೆ ಕಾಲೋನಿಯ ರಸ್ತೆಯಲ್ಲಿ ಸಂಚರಿಸಿದ್ದು ಮನೆಯೊಂದರ ಮುಂದೆ ನಿಲ್ಲಿಸಿದ್ದ ಕಾರಿನ ಗಾಜಿಗೆ ಹಾನಿಪಡಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ನೆರೆಯ ಹಾಸನ ಜಿಲ್ಲೆಯ ಆಲೂರಿನಿಂದ ಬಂದ ಆನೆ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಲಕನಿ, ಅವರೆದಾಳು ಸುತ್ತಮುತ್ತ ಹಾನಿಪಡಿಸಿದ್ದು ಶನಿವಾರಸಂತೆ ವಲಯ ಅರಣ್ಯ ಇಲಾಖೆ ಕಾಜೂರಿನಲ್ಲಿ ನಿರ್ಮಿಸಿರುವ ನರ್ಸರಿ ಮುಂಭಾಗದ ಕಾಫಿ ತೋಟದಲ್ಲಿ ಸುತ್ತಾಡುತ್ತಿದ್ದಾಗ ಜನರ ಗಲಾಟೆಯಿಂದ ತಬ್ಬಿಬ್ಬಾಗಿ ಶನಿವಾರಸಂತೆ ಪಟ್ಟಣದ ತ್ಯಾಗರಾಜ ಕಾಲೋನಿ, ಸುಳುಗಳಲೆ ಕಾಲೋನಿಯಲ್ಲಿ ಸಂಚರಿಸಿ ಹೆಮ್ಮನೆ ಗ್ರಾಮದತ್ತ ಸಾಗಿ ಅಲ್ಲಿಂದ ಗೋಪಾಲಪುರ ಗ್ರಾಮದಿಂದ ಕಾಡಿನತ್ತ ಮುಖ ಮಾಡಿದೆ. ಇದು ಮಾಮೂಲಿ ಸಂಚರಿಸುವ ಆನೆಯಲ್ಲ ಎಂದು ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಗಾನಶ್ರೀ ತಿಳಿಸಿರುತ್ತಾರೆ.

ಕಾಜೂರಿನಲ್ಲಿ ಅನಿರೀಕ್ಷಿತವಾಗಿ ಕಾಣಿಸಿಕೊಂಡ ಆನೆ ಗುಂಪುಗೂಡಿದ ಜನರ ಗದ್ದಲದಿಂದ ಗೊಂದಲಕ್ಕೆ ಒಳಗಾಗಿ ಉದ್ರಿಕ್ತಗೊಂಡು ಶನಿವಾರಸಂತೆ ಪಟ್ಟಣದತ್ತ ಧಾವಿಸಿತ್ತು. ಕಾಡಾನೆಯಿಂದ ಯಾವುದೇ ತೊಂದರೆಯಿಲ್ಲ. ಕಾಡಾನೆಗಾದರೂ ಅರಣ್ಯ ಇಲಾಖೆಯವರ ಭಾಷೆ ಅರ್ಥವಾದೀತು. ಜನರಿಗೆ ಅರ್ಥವಾಗುವುದಿಲ್ಲ. ಆನೆಯನ್ನು ಕಂಡಾಗ ಜನ ಉದ್ರಿಕ್ತಗೊಳಿಸದೆ ಅದರ ಪಾಡಿಗೆ ಅದನ್ನು ಹೋಗಲು ಬಿಟ್ಟು ಶಾಂತವಾಗಿದ್ದರೆ ಯಾವುದೇ ಹಾನಿಯಾಗುವುದಿಲ್ಲ, ಸಾರ್ವಜನಿಕರು ಜಾಗರೂಕರಾಗಿರಬೇಕು. ಇಂತಹ ಸಂದರ್ಭಗಳಲ್ಲಿ ಜನಸಾಮಾನ್ಯರ ಸಹಕಾರ ಅತ್ಯಗತ್ಯವಾಗಿರುತ್ತದೆ ಎಂದು ವಲಯ ಅರಣ್ಯಾಧಿಕಾರಿ ಗಾನಶ್ರೀ ಅಭಿಪ್ರಾಯ ವ್ಯಕ್ತಪಡಿಸಿದರು.