ಸೋಮವಾರಪೇಟೆ, ಮಾ. ೨೭: ಕಳೆದ ಎರಡು ತಿಂಗಳ ಹಿಂದೆ ಸೋಮವಾರಪೇಟೆಗೆ ಆಗಮಿಸಿ ಇಲ್ಲಿನ ಲಾಡ್ಜ್ ವೊಂದರಲ್ಲಿ ತಂಗಿದ್ದ ತೆಲಂಗಾಣ ರಾಜ್ಯದ ದಂಪತಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಸಂಜೆ ನಡೆದಿದೆ.

ತೆಲಂಗಾಣ ರಾಜ್ಯದ ನಿಜಾಮಾಬಾದ್ ಗಾಯತ್ರಿನಗರ ನಿವಾಸಿ ಮೇದಾವರಪು ರಾಜು(೫೬) ಹಾಗೂ ಪತ್ನಿ ಸ್ವಾತಿ(೫೨) ಎಂಬವರುಗಳೇ ಸಾವಿಗೆ ಶರಣಾದ ದಂಪತಿ.

ಕಳೆದ ಎರಡು ತಿಂಗಳ ಹಿಂದೆ ಪಟ್ಟಣದ ಮುಖ್ಯರಸ್ತೆಯಲ್ಲಿರುವ ಲಾಡ್ಜ್ಗೆ ಆಗಮಿಸಿದ ಇವರುಗಳು, ನಾವುಗಳು ಸತಿಪತಿಗಳಾಗಿದ್ದು, ಸರ್ಪಸುತ್ತು ಖಾಯಿಲೆಗೆ ಇಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತೇವೆ ಎಂಬ ಕಾರಣ ನೀಡಿ ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದರು. ಇದಾದ ಕೆಲ ದಿನಗಳ ನಂತರ ಮಾದಾಪುರದಲ್ಲಿ ನಮ್ಮ ಜಮೀನಿದ್ದು, ಮಾರಾಟಕ್ಕೆ ಮಾತುಕತೆ ನಡೆಯುತ್ತಿದೆ. ಈ ವ್ಯವಹಾರ ಮುಗಿಸಿಕೊಂಡು ವಾಪಸ್ಸಾಗುತ್ತೇವೆ ಎಂದಿದ್ದರು. ಮೊನ್ನೆ ದಿನ ನಾವುಗಳು ತಾ.೨೯ ರಂದು ವಾಪಸ್ ಹೋಗುವುದಾಗಿ ಸಿಬ್ಬಂದಿಗಳಿಗೆ ತಿಳಿಸಿದ್ದರು. ಆದರೆ ಇಂದು ಸಂಜೆ ವೇಳೆಗೆ ಲಾಡ್ಜ್ ನ ಮೇಲ್ಭಾಗದಲ್ಲಿರುವ ಸೋಲಾರ್ ಪ್ಯಾನಲ್‌ನ ಸಮೀಪ ನಿರ್ಮಿಸಿರುವ ಕೊಠಡಿಯ ಪೈಪ್‌ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮಧ್ಯಾಹ್ನದವರೆಗೂ ಲಾಡ್ಜ್ ನ ಸಿಬ್ಬಂದಿಗಳೊAದಿಗೆ ಖುಷಿಯಿಂದಲೇ ಮಾತನಾಡಿಕೊಂಡಿದ್ದ ದಂಪತಿ, ಸಂಜೆ ವೇಳೆಗೆ ನೇಣಿಗೆ ಶರಣಾಗಿದ್ದಾರೆ. ರಾತ್ರಿಪಾಳಿಯ ಕೆಲಸಕ್ಕೆ ಆಗಮಿಸಿದ ಸಿಬ್ಬಂದಿ ಪ್ರೇಮ್ ನಾಥ್ ಅವರು ಸೋಲಾರ್ ಪ್ಯಾನಲ್ ಬಳಿ ತೆರಳಿದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿ, ಮೃತದೇಹವನ್ನು ಶವಾಗಾರಕ್ಕೆ ಸಾಗಿಸಿದರು.

ಕೊಠಡಿ ಪಡೆಯುವ ಸಂದರ್ಭ ನೀಡಿದ್ದ ಆಧಾರ್ ಕಾರ್ಡ್ನ ವಿಳಾಸ ಆಧರಿಸಿ ಅಲ್ಲಿನ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿಗಳ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.