ಮಡಿಕೇರಿ, ಮಾ. ೨೭: ಮಹಿಳೆಯ ಅಶ್ಲೀಲ ಭಾವಚಿತ್ರಗಳನ್ನು ಫೇಸ್‌ಬುಕ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪದಡಿ ತನಿಖೆ ಎದುರಿಸುತ್ತಿದ್ದ ಪೊನ್ನಂಪೇಟೆ ಕೃಷ್ಣ ಕಾಲೋನಿ ನಿವಾಸಿ ಸುರೇಶ (೫೦) ಎಂಬಾತನಿಗೆ ಜಿಲ್ಲಾ ಸತ್ರ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ೨೦೨೦ರಲ್ಲಿ ಸುರೇಶ ಎಂಬಾತನ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಐಟಿ ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ಕೈಗೊಂಡು ೦೮-೦೯-೨೦೨೧ ರಂದು ಆರೋಪಿ ಸುರೇಶನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಪ್ರಕರಣದ ತನಿಖಾಧಿಕಾರಿಯಾದ ಅಂದಿನ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್, ಪ್ರಕರಣದ ಸಂಪೂರ್ಣ ತನಿಖೆ ಕೈಗೊಂಡು ಆರೋಪಿ ಸುರೇಶನ ಮೇಲೆ ದೋಷಾರೋಪಣ ಪತ್ರವನ್ನು ೩೦-೧೦-೨೦೨೧ ರಂದು ಜಿಲ್ಲಾ ಸತ್ರ ನ್ಯಾಯಾಲಯ, ಮಡಿಕೇರಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯನ್ನು ನಡೆಸಿ ೨೭-೦೩-೨೦೨೪ ರಂದು ಪ್ರಕರಣದ ಆರೋಪಿ ಸುರೇಶ್‌ಗೆ ಕಲಂ: ೩೫೪(ಸಿ) ಐಪಿಸಿ ಅಡಿಯಲ್ಲಿ ೩ ವರ್ಷ ಜೈಲು ಶಿಕ್ಷೆ ಹಾಗೂ ರೂ. ೨೦೦೦ ದಂಡ ಮತ್ತು ಕಲಂ: ೬೬(ಬಿ) ಐಟಿ ಆರ್ ಅಡಿಯಲ್ಲಿ ೩ ವರ್ಷ ಜೈಲು ಶಿಕ್ಷೆ ಹಾಗೂ ರೂ. ೩೦೦೦ ದಂಡ, ೬೭ ಐಟಿ ಆರ್ ಅಡಿಯಲ್ಲಿ ೩ ವರ್ಷ ಜೈಲು ಶಿಕ್ಷೆ ಹಾಗೂ ರೂ. ೩೦೦೦ ದಂಡ, ೬೭ (ಎ) ಐಟಿ ಆ್ಯಕ್ಟ್ ಅಡಿಯಲ್ಲಿ ೫ ವರ್ಷ ಜೈಲು ಶಿಕ್ಷೆ ಹಾಗೂ ರೂ. ೫೦೦೦ ದಂಡ & ೩(೧) (ಆರ್) ಎಸ್‌ಸಿ/ಎಸ್‌ಟಿ ಆ್ಯಕ್ಟ್ ಅಡಿಯಲ್ಲಿ ೧ ವರ್ಷ ಜೈಲು ಶಿಕ್ಷೆ ಹಾಗೂ ರೂ. ೩,೦೦೦ ದಂಡ ವಿಧಿಸಿ ಘನ ನ್ಯಾಯಾಲಯವು ತೀರ್ಪು ನೀಡಿದೆ. ಸರಕಾರದ ಪರ ಸರ್ಕಾರಿ ಅಭಿಯೋಜಕ ದೇವೇಂದ್ರ ಎನ್.ಪಿ ವಾದ ಮಂಡಿಸಿದರು.