ಮಡಿಕೇರಿ, ಮಾ. ೨೬: ಲೋಕಸಭಾ ಚುನಾವಣೆ ಸಂಬAಧ ಮತದಾನದ ಮಹತ್ವ ಕುರಿತು ಜಾಗೃತಿ ಅಭಿಯಾನವು ಈಗಾಗಲೇ ಆರಂಭವಾಗಿದೆ. ಆ ನಿಟ್ಟಿನಲ್ಲಿ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ(ಸ್ವೀಪ್) ವತಿಯಿಂದ ಜಿಲ್ಲೆಯಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಲಾಗಿದೆ.

ಪ್ರಥಮ ಹಂತದಲ್ಲಿ ಜಿಲ್ಲೆಯ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ ಎಲ್ಲಾ ವಸತಿ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ‘ಪೋಸ್ಟ್ ಕಾರ್ಡ್’ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಶೇಕಡವಾರು ಮತದಾನ ಪ್ರಮಾಣವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಾಥಾ ಕಾರ್ಯಕ್ರಮ, ಚಿತ್ರಕಲೆ, ಸೇರಿದಂತೆ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮತದಾನದ ಮಹತ್ವವನ್ನು ಸಾರುವಲ್ಲಿ ಪ್ರಯತ್ನಿಸಲಾಗುತ್ತದೆ ಎಂದು ವರ್ಣಿತ್ ನೇಗಿ ಅವರು ತಿಳಿಸಿದ್ದಾರೆ.