ಸೋಮವಾರಪೇಟೆ, ಮಾ. ೨೫: ಪ್ರತಿ ಚುನಾವಣೆ ಸಂದರ್ಭವೂ ಪರವಾನಗಿ ಹೊಂದಿರುವ ಬಂದೂಕು ಗಳನ್ನು ಪೊಲೀಸ್ ಠಾಣೆಯಲ್ಲಿ ಠೇವಣಿ ಇಡುವ ನಿರ್ಧಾರವನ್ನು ಹಿಂಪಡೆದು, ರೈತರು ತಮ್ಮ ಮನೆಯಲ್ಲಿಯೇ ಕೋವಿಗಳನ್ನು ಇಟ್ಟುಕೊಳ್ಳಲು ಅವಕಾಶ ಕಲ್ಪಿಸಬೇಕೆಂದು ತಾಲೂಕು ರೈತ ಸಂಘ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ರೈತ ಸಂಘದ ತಾಲೂಕು ಉಪಾಧ್ಯಕ್ಷ ಜಿ.ಎಂ. ಹೂವಯ್ಯ ಅವರು, ಪ್ರಸ್ತುತ ಕಾಫಿ, ಕಾಳು ಮೆಣಸು ಫಸಲು ತೋಟ, ಮನೆಗಳಲ್ಲಿವೆ. ಇದರೊಂದಿಗೆ ವನ್ಯ ಪ್ರಾಣಿಗಳ ಹಾವಳಿಯೂ ಮಿತಿಮೀರುತ್ತಿದೆ. ಈ ನಡುವೆ ಕಳ್ಳರ ಕಾಟವೂ ಹೆಚ್ಚುತ್ತಿದ್ದು, ಇಂತಹ ಸಂದಿಗ್ಧತೆಯ ಸಂದರ್ಭದಲ್ಲಿ ಬಂದೂಕುಗಳನ್ನು ಠಾಣೆಯಲ್ಲಿ ಜಮೆ ಮಾಡಿಸಿಕೊಳ್ಳುವುದು ಸರಿಯಲ್ಲ ಎಂದರು.

ಜಿಲ್ಲೆಯಲ್ಲಿ ತೋಟದ ಮನೆಗಳು, ಒಂಟಿ ಮನೆಗಳು, ಕುಗ್ರಾಮಗಳು ಅಧಿಕವಿದೆ. ತೋಟಗಳಲ್ಲಿ ವನ್ಯಪ್ರಾಣಿಗಳ ಹಾವಳಿಯೂ ಹೆಚ್ಚಿದೆ. ವಾರ್ಷಿಕ ಒಮ್ಮೆ ಮಾತ್ರ ಲಭಿಸುವ ಕಾಫಿ ಹಾಗೂ ಕಾಳುಮೆಣಸು ಫಸಲು ಇದ್ದು, ಕಳ್ಳರಿಂದ ರಕ್ಷಣೆ ಪಡೆಯಲು ಬಂದೂಕಿನ ಅವಶ್ಯಕತೆ ಹೆಚ್ಚಿದೆ. ನೆರೆಯ ಹಾಸನ ಜಿಲ್ಲೆಯಲ್ಲಿ ಇಂತಹ ಸಮಸ್ಯೆಗಳಿರುವ ಮಂದಿ ತಮ್ಮ ಬಂದೂಕುಗಳ ಬಗ್ಗೆ ಮಾಹಿತಿ ನೀಡಿ, ಮನೆಯಲ್ಲಿಯೇ ಇಟ್ಟುಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅದೇ ರೀತಿಯ ಆದೇಶವನ್ನು ಕೊಡಗಿನ ಜಿಲ್ಲಾಧಿಕಾರಿಗಳೂ ಹೊರಡಿಸಬೇಕೆಂದು ಆಗ್ರಹಿಸಿದರು. ಗೋಷ್ಠಿಯಲ್ಲಿದ್ದ ರೈತ ಸಂಘದ ನಿರ್ದೇಶಕ ಮಚ್ಚಂಡ ಅಶೋಕ್ ಮಾತನಾಡಿ, ಚುನಾವಣೆ ನೆಪದಲ್ಲಿ ತಾಲೂಕು ಕಚೇರಿಯಲ್ಲಿ ರೈತರ ಕೆಲಸ ಕಾರ್ಯಗಳು ಆಗುತ್ತಿಲ್ಲ. ಅಧಿಕಾರಿಗಳು ಕಚೇರಿಯಲ್ಲಿಯೇ ಇರುವುದಿಲ್ಲ. ದುರಸ್ತಿ ಕಡತಗಳು ಮುಂದಕ್ಕೆ ಹೋಗುತ್ತಿಲ್ಲ. ರೈತರ ಕಡತಗಳು ಮೂಲೆಗುಂಪಾಗುತ್ತಲೇ ಇವೆ. ಈ ಬಗ್ಗೆ ತಹಶೀಲ್ದಾರ್ ಗಂಭೀರ ಚಿಂತನೆ ಹರಿಸಿ, ಕಚೇರಿ ಕೆಲಸ ಕಾರ್ಯಗಳಿಗೆ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಬೇಕೆಂದು ಒತ್ತಾಯಿಸಿದರು.

ಸಂಘದ ಸಂಚಾಲಕ ಗರಗಂದೂರು ಲಕ್ಷö್ಮಣ್ ಮಾತನಾಡಿ, ಬರಗಾಲದ ನೆಪವೊಡ್ಡಿ ಹೊಳೆಗಳಿಂದ ನೀರೆತ್ತಬಾರದು ಎಂಬ ಆದೇಶ ಅವೈಜ್ಞಾನಿಕ. ರೈತರು ತಮ್ಮ ತೋಟಗಳನ್ನು ಉಳಿಸಿಕೊಳ್ಳಬೇಕಾದರೆ ಇರುವ ನೀರನ್ನು ಬಳಸಿಕೊಳ್ಳಲು ಅವಕಾಶ ನೀಡಬೇಕು. ಈಗಾಗಲೇ ಕೊರೆಯಿಸಲಾಗಿರುವ ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಅಧಿಕಾರಿಗಳು ಮುಂದಾಗಬೇಕೆAದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಸಂಘದ ನಿರ್ದೇಶಕರುಗಳಾದ ಹೆಚ್.ಈ. ರಮೇಶ್, ಎ.ಆರ್. ಕುಶಾಲಪ್ಪ ಉಪಸ್ಥಿತರಿದ್ದರು.