ವೀರಾಜಪೇಟೆ, ಮಾ. ೨೬: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆಗ್ಗರಿಕಾಡುವಿನ ನವೋದಯ ಯುವಕ ಸಂಘದ ವತಿಯಿಂದ ಶಿವರಾತ್ರಿ ಅಂಗವಾಗಿ ಗ್ರಾಮೀಣ ಕ್ರೀಡಾಕೂಟ ಆಯೋಜಿಸ ಲಾಗಿತ್ತು. ಕ್ರೀಡಾಕೂಟದಲ್ಲಿ ಗುಡ್ಡಗಾಡು ಓಟ, ಓಟದ ಸ್ಫರ್ಧೆ, ಚಿಕ್ಕ ಮಕ್ಕಳಿಗೆ ವಿವಿಧ ಸ್ಪರ್ಧೆಗಳು, ಮನೋರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಮತ್ತು ಸಾಂಸ್ಕöÈತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ ಈ ರೀತಿಯ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರಿಂದ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ದೊರೆತಂತಾಗುತ್ತದೆ ಎಂದರು.

ಮತ್ತೊರ್ವ ಮುಖ್ಯ ಅತಿಥಿ ಬಿಟ್ಟಂಗಾಲ ಎವರ್ ಗ್ರೀನ್ ಕೌಂಟಿಯ ಮಾಲೀಕ ಭಜನ್ ಬೋಪಣ್ಣ ಮಾತನಾಡಿ, ಯುವಕರು ದೇಶದ ಬೆನ್ನೆಲುಬು, ಪ್ರತಿಯೊಬ್ಬರೂ ಸಮಾಜಮುಖಿ ಕೆಲಸ ಮಾಡುವ ನಿಟ್ಟಿನಲ್ಲಿ ಚಿಂತಿಸÀಬೇಕು ಎಂದು ಹೇಳಿದರು.

ಮುಖ್ಯ ಭಾಷಣಗಾರರಾಗಿ ಆಗಮಿಸಿದ್ದ ಸಾಹಿತಿ ಬಡಕಡ ರಜಿತ ಕಾರ್ಯಪ್ಪ ಭಾರತದ ಯುವ ಜನತೆ ಮತ್ತು ಸಂಸ್ಕೃತಿ ಎಂಬ ವಿಷಯದ ಬಗ್ಗೆ ಮಾತನಾಡಿ, ಇಂದಿನ ಯುವಜನತೆ ತಮ್ಮ ಆಚಾರ ವಿಚಾರ ಪದ್ಧತಿಗಳನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿ ಕಡೆಗೆ ಮಾರುಹೋಗುತ್ತಿದ್ದಾರೆ. ಯುವಕರು ಭಾರತದ ಸಂಸ್ಕೃತಿಗೆ ತಲೆಬಾಗಿ ನಡೆಯುವ ಸಂಕಲ್ಪ ಮಾಡಬೇಕು ಎಂದರು. ನವೋದಯ ಯುವಕ ಸಂಘದ ಕಾರ್ಯದರ್ಶಿ ಕೆ.ಎಂ. ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭ ಗ್ರಾಮದ ಸ್ವಚ್ಛತೆಯನ್ನು ಕಾಪಾಡುತ್ತಿರುವ ಗ್ರಾಮ ಪಂಚಾಯಿತಿಯ ಇಬ್ಬರು ಸ್ವಚ್ಛತಾ ಸಿಬ್ಬಂದಿಯನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನವನ್ನು ವೇದಿಕೆಯಲ್ಲಿದ್ದ ಅತಿಥಿಗಳು ವಿತರಿಸಿದರು. ವೇದಿಕೆಯಲ್ಲಿ ನವೋದಯ ಯುವಕ ಸಂಘದ ಅಧ್ಯಕ್ಷ ಬಿ.ಎಂ. ದಿನೇಶ್, ಗ್ರಾಮ ಪಂಚಾಯಿತಿ ಸದಸ್ಯೆ ಪಿ.ಎನ್. ಶಾರದ, ನವೋದಯ ಯುವಕ ಸಂಘದ ಉಪಾಧ್ಯಕ್ಷ ಟಿ.ಪಿ. ಸುಬ್ಬಯ್ಯ ಉಪಸ್ಥಿತರಿದ್ದರು.

ಬಹುಮಾನ ವಿತರಣೆ ಕಾರ್ಯಕ್ರಮದ ಬಳಿಕ ಸಾಂಸ್ಕöÈತಿಕ ಕಾರ್ಯಕ್ರಮಗಳು, ಚಲನಚಿತ್ರ ಪ್ರದರ್ಶನ ನಡೆಯಿತು. ವಿನೋದ್ ಪಿ.ಎನ್ ಮತ್ತು ಅಜಿತ್ ಟಿ.ವಿ. ಕಾರ್ಯಕ್ರಮ ನಿರೂಪಿಸಿದರು. ತೇಜಾ ಡಿ.ಎಸ್ ಸ್ವಾಗತಿಸಿ, ಶ್ರೀಜಿತ್ ಟಿ.ಪಿ. ವಂದಿಸಿದರು.