*ಗೋಣಿಕೊಪ್ಪ, ಮಾ. ೨೫: ಪೊನ್ನಂಪೇಟೆ ತಾಲೂಕಿನ ತಿತಿಮತಿ ಅರಣ್ಯ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಗೆ ಸುಮಾರು ೧೦ ಎಕರೆಯಷ್ಟು ಕುರುಚಲು ಗಿಡ ಗಂಟಿಗಳು ಆಹುತಿಯಾಗಿವೆ.

ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಡಿಯ ನಿವಾಸಿಗಳ ಸಹಕಾರದೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ವ್ಯಾಪಕವಾಗಿ ಬೆಂಕಿ ಹರಡುವ ಸಾಧ್ಯತೆ ಇತ್ತು. ಆದರೆ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಬೆಂಕಿಯನ್ನು ಯಶಸ್ವಿಯಾಗಿ ನಂದಿಸಲಾಗಿದೆ.

ಅರಣ್ಯ ಸಿಬ್ಬಂದಿಗಳ ಜತೆಗೆ ಅರ್ಜುನ್, ಅಕ್ಷಯ್, ಆದರ್ಶ್ ಎಂಬ ಮೂವರು ವಿದ್ಯಾರ್ಥಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿ ಅರಣ್ಯ ಅಧಿಕಾರಿಗಳಿಂದ ಬೇಶ್ ಎನಿಸಿಕೊಂಡಿದ್ದಾರೆ. ಮತ್ತೆ ಬೆಂಕಿ ಕಾಣಿಸಿಕೊಳ್ಳಬಹುದು ಎಂಬ ಆತಂಕದಲ್ಲಿ ಅರಣ್ಯ ಸಿಬ್ಬಂದಿಗಳು ಬೆಂಕಿ ಹತ್ತಿಕೊಂಡ ಸಮೀಪದಲ್ಲಿ ಬೀಡು ಬಿಟ್ಟಿದ್ದಾರೆ.