ಕಣಿವೆ, ಮಾ. ೨೬: ಹಳ್ಳಿಗಾಡಿನ ಕೃಷಿಕರ ಮೈ ಮನಗಳನ್ನು ತೇಲಾಡಿಸಿ ಓಲಾಡಿಸಿದ ಮಾಯಾ ಬೆಳೆ, ವಾಣಿಜ್ಯ ಬೆಳೆ, ಅದೃಷ್ಟದ ಬೆಳೆ ಎಂದೇ ಕರೆಯ ಲ್ಪಡುವ ಶುಂಠಿ ಫಸಲಿಗೆ ಪ್ರಸಕ್ತ ಏಳು ಸಾವಿರ ರೂಗಳ ಧಾರಣೆ ಇದೆ. ಕಳೆದ ಜನವರಿಯಿಂದ ಫೆಬ್ರವರಿ, ಮಾರ್ಚ್ ಎರಡನೇ ವಾರದವರೆಗೂ ೬೦ ಕೆ.ಜಿ. ತೂಕದ ಶುಂಠಿಯ ಫಸಲನ್ನು ೬ ಸಾವಿರ ರೂ.ಗಳಿಂದ ೬೫೦೦ ರೂಗಳ ತನಕ ಬಿತ್ತನೆಗೆ ಮಾರಾಟ ಮಾಡಿದ ಶುಂಠಿ ಬೆಳೆಗಾರರಿಗೆ ಈಗ ಅದೇ ಶುಂಠಿಗೆ ಮಾರುಕಟ್ಟೆಯಲ್ಲಿ ಬರೋಬ್ಬರಿ ೭ ಸಾವಿರ ರೂಗಳ ಧಾರಣೆ ಇರುವ ಸಂಗತಿ ಹೊಲದಲ್ಲಿ ಶುಂಠಿ ಫಸಲು ಇಟ್ಟಿರುವ ಕೃಷಿಕರಿಗೆ ಸಂತಸ ತಂದಿದೆ.

ಸಾವಿರಾರು ಎಕರೆಯಲ್ಲಿ ಫಸಲು

ಕಳೆದ ವರ್ಷದ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಶುಂಠಿ ಬಿತ್ತನೆ ಮಾಡಿ ಭರಪೂರ ಫಸಲು ತೆಗೆದಿದ್ದ ಕೃಷಿಕರ ಪಾಲಿನ ಸಾವಿರಾರು ಎಕರೆ ಭೂಮಿಯಲ್ಲಿ ಕಟಾವು ಮಾಡಬೇಕಾದ ಶುಂಠಿ ಫಸಲಿದೆ.

ಹಾಗಾಗಿ ಈ ಶುಂಠಿ ಫಸಲು ಖಾಲಿಯಾಗುವ ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ಈ ಬಾರಿ ಬಿತ್ತನೆ ಮಾಡಿರುವ ಹಾಗೂ ಮಾಡಲಿರುವ ಕೃಷಿಕರ ಶುಂಠಿ ಫಸಲು ಮಾರುಕಟ್ಟೆಗೆ ಸಿದ್ದವಾಗುವ ಸಾಧ್ಯತೆಯಿದ್ದು, ಈಗ ಇರುವ ಶುಂಠಿಯ ದರ ಹೀಗೆಯೇ ಮುಂದುವರೆದಲ್ಲಿ ಮತ್ತೆ ಶುಂಠಿಗೆ ಶುಕ್ರದೆಸೆ ಕಟ್ಟಿಟ್ಟ ಬುತ್ತಿ ಎನ್ನುವ ಮಂದಹಾಸದಲ್ಲಿ ಕೃಷಿಕರಿದ್ದಾರೆ. ಆದರೆ ಈ ಬಾರಿಯ ಕೃಷಿಕರ ಭವಿಷ್ಯ ವರುಣ ದೇವನ ಕೈಯಲ್ಲಿದೆ.