ವೀರಾಜಪೇಟೆ, ಮಾ. ೨೬: ವೀರಾಜಪೇಟೆ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ಪುರಸಭಾ ಆಡಳಿತ ವೈಫಲ್ಯದಿಂದಾಗಿ ಪಟ್ಟಣ ವಾಸಿಗಳು ಹಾಗೂ ವಿವಿಧ ಉದ್ದೇಶಗಳಿಗೆ ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ನಾಗರಿಕರು ಹತ್ತು ಹಲವು ಸಂಕಷ್ಟಗಳನ್ನು ಎದುರಿಸುತ್ತಿರುವುದಾಗಿ ಚೇಂಬರ್ ಆಫ್ ಕಾಮರ್ಸ್ ವೀರಾಜಪೇಟೆ ಸ್ಥಾನೀಯ ಶಾಖೆ ಅಧ್ಯಕ್ಷ ಎಂ.ಪಿ. ಕಾಶಿ ಕಾವೇರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪುರಸಭಾ ಆಡಳಿತದ ವೈಫಲ್ಯದಿಂದಾಗಿ ಸಾರ್ವಜನಿಕರು ವಿಶೇಷವಾಗಿ ವಾಹನಗಳ ಮಾಲೀಕರುಗಳು ತೀವ್ರ ಬವಣೆ ಎದುರಿಸುವಂತಾಗಿದೆ. ದ್ವಿಚಕ್ರ ವಾಹನಗಳಿಗೆ ಸೂಕ್ತ ನಿಲುಗಡೆ ಜಾಗವಿಲ್ಲದುದ್ದರಿಂದ ನಾಲ್ಕು ಚಕ್ರ ವಾಹನಗಳ ನಿಲುಗಡೆ ಪ್ರದೇಶದಲ್ಲಿ ನಿಲ್ಲಿಸಬೇಕಾಗಿ ಬಂದಿದೆ. ಇದರಿಂದ ಪೋಲೀಸ್ ಕ್ರಮ ಎದುರಿಸಬೇಕಾಗಿ ಬರುತ್ತದೆ. ನಗರದಲ್ಲಿ ತಲೆಯೆತ್ತುತ್ತಿರುವ ಬಹುಮಹಡಿ ವಾಣಿಜ್ಯ ಸಂಕೀರ್ಣಗಳ ನೆಲ ಮಾಳಿಗೆಗಳು (ಸೆಲ್ಲರ್) ವಾಹನ ನಿಲುಗಡೆಗೆ ಎಂದು ನಿಗದಿಪಡಿಸಲಾಗಿದ್ದು ಅವುಗಳು ಅದೇ ಅಗತ್ಯಕ್ಕಾಗಿ ಉಪಯೋಗಿಸಲಾಗುತ್ತಿದೆಯೇ ಎಂದು ಪುರಸಭಾ ಅಧಿಕೃತರು ಖಚಿತ ಪಡಿಸಿಕೊಳ್ಳಬೇಕು. ಹೆಚ್ಚಿನ ವಾಣಿಜ್ಯ ಸಂಕೀರ್ಣಗಳ ನೆಲಮಾಳಿಗೆಗಳು ಇಂದು ಅಂಗಡಿಗಳಾಗಿ ಮಾರ್ಪಟ್ಟಿವೆ. ಈ ಬಗ್ಗೆ ಪುರಸಭಾ ಅಧಿಕೃತರು ಮೌನ ವಹಿಸುತ್ತಿದ್ದಾರೆ. ಪಟ್ಟಣದ ಮಾರುಕಟ್ಟೆ ಸಂಕೀರ್ಣ ಅವ್ಯವಸ್ಥೆಗಳಿಂದ ಕೂಡಿದ್ದು ಪರಿಣಾಮವಾಗಿ ಬೀದಿಬದಿ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಇದರಿಂದ ಪಾದಾಚಾರಿಗಳಿಗೆ ನಡೆದಾಡಲು ಸ್ಥಳಾವಕಾಶ ಇಲ್ಲದಂತಾಗಿದೆ. ಬೀದಿ ಬದಿ ಮತ್ತು ಗೂಡ್ಸ್ಗಳಲ್ಲಿ ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ಮಾರಾಟ ಮಾಡುವುದು ಸಂತೆ ದಿನವಾದ ಬುಧವಾರಕ್ಕೆ ಮಾತ್ರ ಸೀಮಿತಗೊಳಿಸಬೇಕು ಎಂಬುದು ತಮ್ಮ ಬೇಡಿಕೆಯಾಗಿದೆ ಎಂದರು.

ವೀರಾಜಪೇಟೆ ನಗರದ ವಾಹನ ದಟ್ಟಣೆ ನಿಯಂತ್ರಿಸಲು ಬೈಪಾಸ್ ರಸ್ತೆಗಳ ಬಗ್ಗೆ ಸರಕಾರದ ಇಲಾಖೆ ಚಿಂತಿಸಬೇಕಿದೆ. ಗೋಣಿಕೊಪ್ಪ ರಸ್ತೆಯ ಸರ್ವೋದಯ ಕಾಲೇಜಿನಿಂದ ಕಲ್ಲುಬಾಣೆಗಾಗಿ ಆರ್ಜಿಯ ಅನ್ವಾರುಲ್ ಹುದಾ ಮಾರ್ಗವಾಗಿ ಕೇರಳ ರಸ್ತೆಗೆ ಸೇರುವ ಪರ್ಯಾಯ ರಸ್ತೆ ಬಗ್ಗೆ ಚಿಂತನೆ ಆಗಬೇಕಿದೆ. ಅಂತೆಯೇ ಗೋಣಿಕೊಪ್ಪ ಕಡೆಯಿಂದ ಮಡಿಕೇರಿ-ಮೂರ್ನಾಡು-ನಾಪೋಕ್ಲು ಕಡೆಗೆ ತೆರಳುವ ವಾಹನಗಳ ಸುಗಮ ಸಂಚಾರಕ್ಕೆ ದೊಡ್ಡಟ್ಟಿ ಚೌಕಿಯಿಂದ ಅಪ್ಪಯ್ಯಸ್ವಾಮಿ ರಸ್ತೆ-ಚರ್ಚ್ ರಸ್ತೆಗಳ ಪರ್ಯಾಯ ಮಾರ್ಗ ಕಲ್ಪಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಡುತ್ತಿದ್ದೇವೆ. ಪೋಲೀಸ್ ಇಲಾಖೆ, ಪುರಸಭಾ ಆಡಳಿತ ಮತ್ತು ಲೋಕೋಪಯೋಗಿ ಇಲಾಖೆಗಳ ಸಮನ್ವಯದಿಂದ ಈ ಕೆಲಸಗಳು ಆಗಬೇಕು ಎಂದರು. ಉಪಾಧ್ಯಕ್ಷ ಶಾಹುಲ್ ಹಮೀದ್, ಪ್ರಧಾನ ಕಾರ್ಯದರ್ಶಿ ಅಮ್ಮುಣಿಚಂಡ ರವಿ ಉತ್ತಪ್ಪ, ಕೋಶಾಧಿಕಾರಿ ಬಿ.ಎಂ. ಸುರೇಶ್, ಸಹ ಕಾರ್ಯದರ್ಶಿ ಮಂಜುನಾಥ್ ಉಪಸ್ಥಿತರಿದ್ದರು.