ಮಡಿಕೇರಿ, ಮಾ. ೨೬: ಕೊಡಗಿನ ಸಾಹಿತ್ಯ ಕ್ಷೇತ್ರಕ್ಕೆ ಯುವ ಬರಹಗಾರರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು, ಯುವ ಬರಹಗಾರರಿಗೆ ಪ್ರೋತ್ಸಾಹ ನೀಡಲು ಕೊಡವ ಮಕ್ಕಡ ಕೂಟ ಸದಾ ಸಿದ್ಧವಿದೆ ಎಂದು ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಕೊಡವ ಮಕ್ಕಡ ಕೂಟದ ೮೮ನೇ ಪುಸ್ತಕ ಹಾಗೂ ಲೇಖಕಿ ಯಶೋಧ ಪೇರಿಯಂಡ ಅವರ ಪ್ರಥಮ ಪುಸ್ತಕ "ಚುಪ್ಪಿ ಕತೆರ ಜೊಪ್ಪೆ" ಯ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ರಚನೆಗೊಂಡ ಒಟ್ಟು ೮೭ ಪುಸ್ತಕಗಳನ್ನು ಕೂಟದ ಮೂಲಕ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಹೊಸ ಬರಹಗಾರರೊಂದಿಗೆ ಯುವ ಬರಹಗಾರರನ್ನೂ ಪರಿಚಯಿಸುತ್ತಾ ಬರಲಾಗಿದೆ ಎಂದರು. ಕೊಡವ ಮಕ್ಕಡ ಕೂಟ ೧೦೦ ಪುಸ್ತಕಗಳ ಗಡಿ ಮುಟ್ಟುವ ಗುರಿ ಹೊಂದಿದೆ. ಉಳಿದಿರುವ ೧೨ ಪುಸ್ತಕಗಳು ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಮತ್ತಷ್ಟು ಬರಹಗಾರರು ಮುಂದೆ ಬಂದರೆ ಪ್ರೋತ್ಸಾಹ ನೀಡಲಾಗುವುದು ಎಂದರು.

“ಚುಪ್ಪಿ ಕತೆರ ಜೊಪ್ಪೆ” ಪುಸ್ತಕದ ಲೇಖಕಿ ಯಶೋಧ ಪೇರಿಯಂಡ ಮಾತನಾಡಿ, ಈ ಪುಸ್ತಕ ವಿಭಿನ್ನ ವಿಷಯಗಳ ಸಣ್ಣಕಥೆಗಳ ಸಂಗ್ರಹವಾಗಿದ್ದು, ಮಕ್ಕಳ ಸಾಹಸ, ಹೆಣ್ಣುಮಕ್ಕಳ ಸಬಲೀಕರಣ, ಜೀವನ ಪರಿವರ್ತನೆ ಮತ್ತಿತರ ವಿಚಾರಗಳ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಹೇಳಿದರು.

ಸಮಾಜ ಸೇವಕ ಚಂಗAಡ ಗಿರೀಶ್ ತಮ್ಮಯ್ಯ ಮಾತನಾಡಿ, ಬರಹವನ್ನು ಪುಸ್ತಕದ ರೂಪದಲ್ಲಿ ಹೊರತರುವುದು ಕಷ್ಟದ ಕೆಲಸ, ಆದರೆ ಕೊಡವ ಮಕ್ಕಡ ಕೂಟ ಇದನ್ನು ಸುಲಭ ಮಾಡಿಕೊಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಲೇಖಕಿ ಯಶೋಧ ಪೇರಿಯಂಡ ಅವರ ತಂದೆ ಪೇರಿಯಂಡ ಸುಬ್ರಮಣಿ ಹಾಗೂ ತಾಯಿ ಪೇರಿಯಂಡ ಕನ್ನು ಭೋಜಮ್ಮ ಅವರು ಪುಸ್ತಕ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಮುಕ್ಕಾಟಿರ ಅಂಜು ಸುಬ್ರಮಣಿ ಉಪಸ್ಥಿತರಿದ್ದರು.