ಐಗೂರು, ಮಾ. ೨೬: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದಿಂದ ಯದುವೀರ ಅವರು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದು, ಐಗೂರು ವ್ಯಾಪ್ತಿಯಲ್ಲಿ ಕಾರ್ಯಕರ್ತರು ಶ್ರಮವಹಿಸಿ ಕಳೆದ ಚುನಾವಣೆಗಿಂತ ಪ್ರತಿ ಬೂತ್‌ನಲ್ಲಿ ೩೭೦ಕ್ಕೂ ಅಧಿಕ ಮತಗಳನ್ನು ಐಗೂರು ವ್ಯಾಪ್ತಿಯಲ್ಲಿ ಗಳಿಸಿಕೊಟ್ಟರೆ ಕಾರ್ಯಕರ್ತರನ್ನು ನೇರವಾಗಿ ಮೋದಿಜಿ ಅವರ ಬಳಿ ಭೇಟಿ ಮಾಡಿಸುವ ಕಾರ್ಯಕ್ರಮ ವನ್ನು ಪಕ್ಷ ಹಮ್ಮಿಕೊಂಡಿದ್ದು ಐಗೂರು ಭಾಗದ ಕಾರ್ಯಕರ್ತರು ಇದರ ಸದುಪಯೋಗವನ್ನು ಪಡೆಯಿರಿ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಜಿಲ್ಲಾಧ್ಯಕ್ಷರಾದ ಮಹೇಶ್ ತಿಮ್ಮಯ್ಯನವರು ಕರೆ ನೀಡಿದರು.

ಅವರು ಐಗೂರಿನಲ್ಲಿ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಿದ್ದ ಚುನಾವಣಾಪೂರ್ವ ತಯಾರಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ದರ್ಶನ್ ಜೋಯಪ್ಪನವರು ಮಾತನಾಡಿ ಮತ್ತೊಮ್ಮೆ ಮೋದಿಜಿಯವರ ಕೈ ಬಲಪಡಿಸಲು ಗ್ರಾಮ ಚಲೋ ಕಾರ್ಯಕ್ರಮಗಳ ಮೂಲಕ ಐಗೂರು ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಮೋದಿ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ತಿಳಿಸಬೇಕೆಂದರು.

ಮುAದುವರಿದು ಮಾತನಾಡಿದ ಅವರು ಐಗೂರು ವ್ಯಾಪ್ತಿಯ ನಾಲ್ಕು ಬೂತ್ ಗಳ ಅಧ್ಯಕ್ಷರು ಈಗಿನಿಂದಲೇ ಮೊಬೈಲ್ ನಲ್ಲಿ ಮೋದಿಜಿ ಅವರ ನಮೋ ಆ್ಯಪ್ ಮತ್ತು ಸರಳ ಆ್ಯಪನ್ನು ಬಳಸುವ ಬಗ್ಗೆ ಮತದಾರರಿಗೆ ಮಾಹಿತಿಯನ್ನು ನೀಡಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣದ ಕಾರ್ಯಕರ್ತನಾಗಿ ಐಗೂರಿನ ಎನ್.ಆರ್. ಹರೀಶ್ ಕುಮಾರ್ ಅವರನ್ನು ನೇಮಿಸ ಲಾಯಿತು. ತಾಲೂಕು ಉಪಾಧ್ಯಕ್ಷ ಎನ್.ಆರ್. ಅಜೀಶ್‌ಕುಮಾರ್ ಮಾತನಾಡಿ ಮಹಿಳಾ ಮೋರ್ಚಾ, ಎಸ್.ಟಿ. ಮೋರ್ಚಾ ಮತ್ತು ಕೃಷಿ ಮೋರ್ಚಾ, ಈ ಎಲ್ಲಾ ಮೋರ್ಚಾಗಳು ಸಕ್ರಿಯವಾಗಿ ಗುಂಪು ಕಟ್ಟಿಕೊಂಡು ಕೆಲಸ ನಿರ್ವಹಿಸಿದರೆ ಗೆಲುವು ಸುಲಭವಾಗಿದೆ ಎಂದರು. ಬಿಜೆಪಿ ತಾಲೂಕು ರೈತ ಮೋರ್ಚಾ ಅಧ್ಯಕ್ಷರಾದ ಮಚ್ಚಂಡ ಪ್ರಕಾಶ್ ಮಾತನಾಡಿ ಮುಂಬರುವ ಚುನಾವಣೆಯಲ್ಲಿ ಪ್ರತಿದಿನ ಪ್ರತಿ ಬೂತಿನಲ್ಲಿ ೧೦ ಹೆಚ್ಚು ಮತಗಳನ್ನು ಸಂಪಾದಿಸುವ ಗುರಿಯನ್ನು ರೈತ ಮೋರ್ಚಾ ಹಮ್ಮಿಕೊಂಡಿದ್ದು ಗುರಿಯನ್ನು ತಲುಪಲು ಕಾರ್ಯಕರ್ತರು ಸಹಕರಿಸಿ ಎಂದರು.

ಶಕ್ತಿ ಕೇಂದ್ರದ ಪ್ರಶಾಂತ್ ಮಾತನಾಡಿ ಎಲ್ಲಾ ಚುನಾವಣೆಯಲ್ಲಿ ಐಗೂರು ಬಿಜೆಪಿ ಶಕ್ತಿ ಕೇಂದ್ರ ಮತಗಳಿಸುವಿಕೆಯಲ್ಲಿ ಮುಂದಿದ್ದು ಯದುವೀರ ರನ್ನು ಈ ಬಾರಿ ಗೆಲ್ಲಿಸಿ ಎಂದರು. ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷರುಗಳನ್ನು ಬದಲಿಸುವ ಕುರಿತು ಚರ್ಚೆ ನಡೆಯಿತು. ಕಾರ್ಯಕ್ರಮದ ನಿರೂಪಕರಾಗಿ ಶಕ್ತಿ ಕೇಂದ್ರದ ಉಪಾಧ್ಯಕ್ಷ ಟಿ.ಆರ್. ವಿಜಯ ಕಾರ್ಯನಿರ್ವಹಿಸಿದರು.

ಈ ಕಾರ್ಯಕ್ರಮದಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ, ಗ್ರಾ.ಪಂ. ಅಧ್ಯಕ್ಷ ವಿನೋದ್, ಗ್ರಾ.ಪಂ. ಸದಸ್ಯ ಪ್ರಮೋದ್, ಜಾನಕ್ಕಿ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ದರ್ಶನ್ ಜೋಯಪ್ಪ, ತಾಲೂಕು ಉಪಾಧ್ಯಕ್ಷ ಅಜೀಸ್ ಕುಮಾರ್, ತಾಲೂಕು ಕಾರ್ಯದರ್ಶಿ ಲಿಖಿತ್, ಮಾಜಿ ತಾಲೂಕು ಉಪಾಧ್ಯಕ್ಷ ಪ್ರಭಾಕರ, ರೈತ ಮೋರ್ಚಾದ ಅಧ್ಯಕ್ಷ ಮಚ್ಚಂಡ ಪ್ರಕಾಶ್, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಪೊನ್ನಪ್ಪ, ಮುಖಂಡರಾದ ರಮೇಶ್, ಶಕ್ತಿಕೇಂದ್ರದ ಪ್ರಶಾಂತ್, ಬೂತ್ ಅಧ್ಯಕ್ಷ ಅಪ್ಪು ಪುರುಷೋತ್ತಮ, ಟಿ.ಆರ್. ವಿಜಯ, ಡಿ.ಎಸ್. ಚಂಗಪ್ಪ, ಮತ್ತು ಸುಜಾತ ಬಾಲಕೃಷ್ಣ ಉಪಸ್ಥಿತರಿದ್ದರು.