ಕರಿಕೆ, ಮಾ. ೨೫: ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಪತ್ತೆಯಾದ ಹಿನ್ನೆಲೆಯಲ್ಲಿ ಕೊಡಗಿನ ಗಡಿಗ್ರಾಮ ಕರಿಕೆ - ಕೇರಳ ರಾಜ್ಯ ಹಾಗೂ ನೆರೆಯ ದ.ಕ.ಜಿಲ್ಲೆಯ ಸುಳ್ಯದ ಪೊಲೀಸ್ ಅಧಿಕಾರಿಗಳ ಸಭೆ ಕರಿಕೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಮುಂಬರುವ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಗಡಿಯ ಚೆಕ್ ಪೋಸ್ಟ್ನಲ್ಲಿ ಕಟ್ಟು ನಿಟ್ಟಿನ ತಪಾಸಣೆ, ಸಿಸಿ ಕ್ಯಾಮರಾಗಳ ಅಳವಡಿಕೆ, ಗಡಿವ್ಯಾಪ್ತಿಯ ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲಾ ಠಾಣೆಯ ವ್ಯಾಪ್ತಿಯಲ್ಲಿರುವ ಕ್ರಿಮಿನಲ್ ಹಿನ್ನೆಲೆಯುಳ್ಳವರ ಬಗ್ಗೆ ಮಾಹಿತಿ ಸಂಗ್ರಹ ಮಾಡುವ ಬಗ್ಗೆ ಚರ್ಚೆ ನಡೆಯಿತು.
ನಕ್ಸಲ್ ಚಟುವಟಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಪತ್ತೆ ಹಚ್ಚಲು ಸಹಕಾರಿಯಾಗುವ ನಿಟ್ಟಿನಲ್ಲಿ ಚಲನವಲನದ ಮೇಲೆ ನಿಗಾ ವಹಿಸಿ ಮಾಹಿತಿ ಕಂಡು ಬಂದಲ್ಲಿ ಸುಳ್ಯ , ಕೇರಳ ಹಾಗೂ ಕೊಡಗಿನ ಪೊಲೀಸ್ ಅಧಿಕಾರಿಗಳು ಪರಸ್ಪರ ಸೌಹಾರ್ದತೆಯಿಂದ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವುದು ಸೇರಿದಂತೆ ಸೂಕ್ತ ರೀತಿಯಲ್ಲಿ ಬಂದೋಬಸ್ತ್ನಲ್ಲಿ ಜನರು ನಿರ್ಭೀತಿಯಿಂದ ಮತದಾನದಲ್ಲಿ ಪಾಲ್ಗೊಳ್ಳಲು ಸಹಕಾರಿಯಾಗಲು ಸೂಕ್ತ ಗಡಿ ಭಾಗದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕಾನೂನು ಕ್ರಮಕೈಗೊಳ್ಳುವ ಕುರಿತು ಚರ್ಚಿಸಲಾಯಿತು.
ಮಡಿಕೇರಿ ಉಪ ವಿಭಾಗದ ಉಪ ಅಧೀಕ್ಷಕ ಮಹೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗಮಂಡಲ ಆರಕ್ಷಕ ಠಾಣೆಯ ಉಪ ನಿರೀಕ್ಷಕಿ ಶೋಭಾ ಲಮಾಣಿ ಸೇರಿದಂತೆ ಸುಳ್ಯ, ರಾಜಪುರಂ, ನಾಪೋಕ್ಲು ಠಾಣೆಯ ಉಪ ನಿರೀಕ್ಷಕರು ಪಾಲ್ಗೊಂಡಿದ್ದರು.