ಐಗೂರು, ಮಾ.೨೫: ಐಗೂರಿನ ಟಾಟಾ ಎಸ್ಟೇಟ್‌ನ ಕಿಬಿರಿ ಬೆಟ್ಟ ಡಿವಿಜನ್‌ನಲ್ಲಿ ಬೆಳಗಿನ ಜಾವ ಕಾಡಾನೆ ಲಗ್ಗೆ ಇಟ್ಟು ಕಾಫಿ ಗಿಡ , ಅಡಿಕೆ ಗಿಡ ,ಮತ್ತು ಮೆಣಸು ಬಳ್ಳಿಗಳನ್ನು ನಾಶಪಡಿಸಿದೆ.

ಅಲ್ಲಿಂದ ಪಲಾಯನ ಮಾಡಿ ಮುಂದೆ ಐಗೂರಿನ ಜಾನಕಿ ಅವರ ಮನೆಯ ಮುಂದೆ ಹೆದ್ದಾರಿ ರಸ್ತೆಗೆ ದಾಟಿ ಹೋಗಿರುವ ದೃಶ್ಯವನ್ನು ತೋಟದ ಕಾರ್ಮಿಕರು ಕಂಡಿದ್ದಾಗಿ ಮಾಹಿತಿ ನೀಡಿದ್ದಾರೆ. ಈ ಭಾಗದಲ್ಲಿ ಬೆಳಗಿನ ಜಾವ ಪ್ರತಿನಿತ್ಯ ಗ್ರಾಮಸ್ಥರು ವಾಕಿಂಗ್ ಹೋಗುವ ದೃಶ್ಯಗಳು ಕಂಡುಬರುತ್ತಿದ್ದು, ಎಲ್ಲರೂ ಭಯಭೀತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಭಾಗಗಳಲ್ಲಿ ಕಾಡಾನೆಗಳು ಆಹಾರವನ್ನು ಅರಸಿಕೊಂಡು ಗ್ರಾಮಗಳಿಗೆ ಲಗ್ಗೆ ಇಟ್ಟು ಬೆಳೆಗಳನ್ನು ನಾಶಪಡಿಸುತ್ತಿದ್ದು, ಈ ಭಾಗದ ಗ್ರಾಮಸ್ಥರು ಭಯದ ವಾತಾವರಣದಲ್ಲಿ ಕಾಲ ಕಳೆಯುವಂತಾಗಿದೆ.