ಮಡಿಕೇರಿ, ಮಾ. ೨೫: ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಮತ್ತು ವಿವಿಧೋದ್ದೇಶ ಸಹಕಾರ ಸಂಘಗಳು ಸಂಗ್ರಹಿಸುತ್ತಿರುವ ಠೇವಣಿಗೆ ಮತ್ತು ವಿತರಿಸುವ ಸಾಲದ ಬಡ್ಡಿ ದರಕ್ಕೆ ರಾಜ್ಯ ಸರಕಾರ ಕಡಿವಾಣ ಹಾಕಿ ಆದೇಶ ಹೊರಡಿಸಿದೆ. ಏ. ೧ರಿಂದಲೇ ಈ ಹೊಸ ನಿಯಮ ಜಾರಿಗೆ ಬರುವಂತೆ ನಿರ್ದೇಶಿಸಲಾಗಿದೆ.
ಸಾಲಗಾರರ ಹಾಗೂ ಸಾರ್ವಜನಿ ಕರ ಹಿತಾಸಕ್ತಿಯನ್ನು ಸಂರಕ್ಷಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಕೃಷಿಯೇ ತರ ಪತ್ತಿನ ಸಹಕಾರ ಸಂಘಗಳು, ವಿವಿಧೋದ್ದೇಶ ಸಹಕಾರ ಸಂಘಗಳಿಗೆ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮದಡಿ ಸರಕಾರಕ್ಕೆ ದತ್ತವಾಗಿ ರುವ ಅಧಿಕಾರವನ್ನು ಚಲಾಯಿಸಿ ಈ ಆದೇಶ ಹೊರಡಿಸಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ ೧೯೩೪ ಬ್ಯಾಂಕಿAಗ್ ರೆಗ್ಯುಲೇಷನ್ ಕಾಯಿದೆ ೧೯೪೯ ಹಾಗೂ ಸಹಕಾರ ಸಂಘಗಳ ನಿಬಂಧಕರ ಸೂಚನೆಗಳನ್ನು ಉಲ್ಲಂಘಿಸದಿರಲು ಕೃಷಿಯೇತರ ಪತ್ತಿನ ಸಹಕಾರ ಸಂಘಗಳಿಗೆ ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ. ಆದರೆ ಸೂಚನೆಗಳನ್ನು ಪಾಲಿಸದಿರುವುದು ಆರ್.ಬಿ.ಐ. ಗಮನಕ್ಕೆ ಬಂದಿದೆ.
ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಹಾಗೂ ವಿವಿಧೋದ್ದೇಶ ಸಹಕಾರ ಸಂಘಗಳು ಸದಸ್ಯರ ಸಾಲದ ಅವಶ್ಯಕತೆಗನುಗುಣವಾಗಿ ಠೇವಣಿ ಸಂಗ್ರಹಿಸದೆ ಅನಿಯಮಿತ ಬಡ್ಡಿ ದರ ನಿಗದಿಪಡಿಸಿ ಮನಸೋ ಇಚ್ಛೆ ಠೇವಣಿ ಸಂಗ್ರಹಿಸಲಾಗುತ್ತಿದೆ. ಸಾಲದ ಮೇಲೆ ಮಿತಿಮೀರಿದ ಬಡ್ಡಿದರವನ್ನು ನಿಗದಿಪಡಿಸಿ ಗುಣಮಟ್ಟದ ಹಣಕಾಸು ನಿರ್ವಹಣೆ ಮಾಡುತ್ತಿಲ್ಲ ಎಂಬ ಬಗ್ಗೆ ಸರಕಾರ, ಇಲಾಖೆಗೆ ದೂರುಗಳು ಬಂದಿದ್ದವು.
ಸಹಕಾರ ಸಂಘಗಳ ಹಣ ದುರುಪಯೋಗ ಹಾಗೂ ಠೇವಣಿದಾರರಿಗೆ ವಂಚನೆ ಮಾಡಿರುವ ಹಲವು ಪ್ರಕರಣವು ಸರಕಾರದ ಗಮನಕ್ಕೆ ಬಂದಿದ್ದು, ನಿಯಮ ಬಾಹಿರವಾಗಿ ಠೇವಣಿ ಸಂಗ್ರಹಿಸುತ್ತಿರುವುದು ಸಾಲದ ಮೇಲೆ ಮಿತಿ ಮಿರಿದ ಬಡ್ಡಿ ವಿಧಿಸುತ್ತಿರುವುದು ಸಹಕಾರ ಸಂಘಗಳಲ್ಲಿ ಹೂಡಿಕೆ ಮಾಡಲಾದ ಹಣವನ್ನು ಸ್ವಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.
ಆದೇಶದ ವಿವರ
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ೧೯೫೯ರಡಿ ನೋಂದಾಯಿಸಲಾದ ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಹಾಗೂ ವಿವಿಧೋದ್ದೇಶ ಸಹಕಾರ ಸಂಘಗಳು ಸಂಗ್ರಹಿಸುತ್ತಿರುವ ಠೇವಣಿಗಳಿಗೆ ರಾಷ್ಟçದಲ್ಲಿಯೇ ಹೆಚ್ಚು ವಹಿವಾಟನ್ನು ಹೊಂದಿರುವ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿವಿಧ ಪ್ರಕಾರದ ಠೇವಣಿಯ ಮೇಲೆ ವಿವಿಧ ಅವಧಿಗೆ ನಿಗಧಿಪಡಿಸುವ ಬಡ್ಡಿದರ ಅಥವಾ ಅದರ ಮೇಲೆ ಶೇಕಡ ಎರಡು (೨%) ರಷ್ಟು ಅಧಿಕ ಬಡ್ಡಿಯನ್ನು ಮಾತ್ರ ನಿಗಧಿಪಡಿಸತಕ್ಕದ್ದು.
ಹಿರಿಯ ನಾಗರೀಕರ ಠೇವಣಿಯ ಮೇಲೆ ಶೇ.೦.೫೦ ರಷ್ಟು ಅಧಿಕ ಬಡ್ಡಿಯನ್ನು ನಿಗಧಿಪಡಿಸಬಹುದಾಗಿದೆ. ಪಿಗ್ಮಿ ಠೇವಣಿಯ ಮೇಲೆ ಕೊಡುವ ಕಮಿಷನ್ ದರವು ಶೇಕಡ ಮೂರನ್ನು ಮೀರತಕ್ಕದ್ದಲ್ಲ. ಬೇರೆ ಯಾವುದೇ ಪ್ರಾಥಮಿಕ ಸಹಕಾರ ಸಂಘ ಹಾಗೂ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ ರಚಿಸಲಾದ ಫರ್ಮ್. ಕಂಪನಿ ಅಥವಾ ಯಾವುದೇ ಇತರೇ ನಿಗಮಿತ ನಿಕಾಯಗಳಲ್ಲಿ ಠೇವಣಾತಿಸುವ ದೃಷ್ಟಿಯಿಂದ ಠೇವಣಿ ಸಂಗ್ರಹಿಸತಕ್ಕದ್ದಲ್ಲ. ಸಂಘದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸತಕ್ಕದ್ದಲ್ಲ.
ಸಹಕಾರ ಸಂಸ್ಥೆಗಳು ಸ್ಥಾನಿಕ ಹಣಕಾಸು ಸಂಸ್ಥೆಗಳಾಗಿದ್ದು, ಇಂತಹ ಸಹಕಾರ ಸಂಸ್ಥೆಗಳಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಮುಖಾಂತರ ಕಮಿಷನ್/ಇನ್ಸೆಂಟೀವ್ ಕೊಡುವುದರ ಮೂಲಕ ಠೇವಣಿಗಳನ್ನು ಸ್ವೀಕರಿಸತಕ್ಕದ್ದಲ್ಲ.
ಹೆಚ್ಚುವರಿ ದ್ರವ ಸಂಪನ್ಮೂಲವನ್ನು ಕಡ್ಡಾಯವಾಗಿ ಸಹಕಾರ ಸಂಸ್ಥೆಗಳಾದ ಅಪೆಕ್ಸ್ ಬ್ಯಾಂಕ್ ಮತ್ತು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಲ್ಲಿ ಹೂಡಿಕೆ ಮಾಡತಕ್ಕದ್ದು.
ವಿತರಿಸುವ ಸಾಲಗಳಿಗೆ ಗರಿಷ್ಠ ಶೇಕಡ (೧೨%) ಹನ್ನೆರಡು ಬಡ್ಡಿದರ ಮೀರತಕ್ಕದ್ದಲ್ಲ. ಸುಸ್ತಿ ಪ್ರಕರಣಗಳಲ್ಲಿ ಹೆಚ್ಚುವರಿಯಾಗಿ ಗರಿಷ್ಠ ಶೇಕಡ(೨%)ಎರಡರಷ್ಟು ಬಡ್ಡಿದರ. ಪತ್ತಿನ ಸಹಕಾರ ಸಂಘಗಳು ವಿವಿಧ ಸ್ವರೂಪದ ಸಾಲ ಸೌಲಭ್ಯ ನೀಡುವುದಕ್ಕೆ ಮಾತ್ರ ಸೀಮಿತವಾಗಿರತಕ್ಕದ್ದು.
ಅವಶ್ಯವಿದ್ದಲ್ಲಿ ಸಂಘದ ಆಡಳಿತ ಮಂಡಳಿಯು ಬಡ್ಡಿದರವನ್ನು ಪರಿಷ್ಕರಿಸಿ ಈ ಕುರಿತು ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕರಿಗೆ ಕಡ್ಡಾಯವಾಗಿ ವರದಿಯನ್ನು ಸಲ್ಲಿಸತಕ್ಕದ್ದು. ಉಪ ವಿಭಾಗೀಯ ಮಟ್ಟದಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ, ಜಿಲ್ಲಾ ಮಟ್ಟದಲ್ಲಿ ಸಹಕಾರ ಸಂಘಗಳ ಉಪನಿಬಂಧಕರ, ಪ್ರಾಂತಿಯ ಮಟ್ಟದಲ್ಲಿ ಸಹಕಾರ ಸಂಘಗಳ ಜಂಟಿ ನಿಬಂಧಕರ ಅಧ್ಯಕ್ಷತೆಯಲ್ಲಿ ತ್ರೆöÊಮಾಸಿಕವಾಗಿ ಸಹಕಾರ ಸಂಘಗಳ ಸಭೆ ಜರುಗಿಸಿ ಈ ಆದೇಶದಲ್ಲಿ ನೀಡಿದ ನಿರ್ದೇಶನದಂತೆ ಬಡ್ಡಿದರ ಪರಿಷ್ಕರಿಸಿ ನಿಗಧಿಪಡಿಸುತ್ತಿರುವ ಕುರಿತು ಪರಾಮರ್ಶಿಸುವುದು ಹಾಗೂ ಉಲ್ಲಂಘನೆ ಮಾಡುವ ಸಹಕಾರ ಸಂಘಗಳ ಆಡಳಿತ ಮಂಡಳಿ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ವಿರುದ್ಧ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ೧೯೫೯ ಹಾಗೂ ನಿಯಮಾವಳಿಗಳು ೧೯೬೦ರ ಅವಕಾಶಗಳಂತೆ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು ಹಾಗೂ ಸಭೆಯ ನಿರ್ಣಯ ಮತ್ತು ತೆಗೆದುಕೊಂಡ ಕ್ರಮದ ಕುರಿತು ಮೇಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸತಕ್ಕದ್ದು.
ಈ ಆದೇಶದ ನಿರ್ದೇಶನಗಳನ್ನು ಅನುಷ್ಠಾನಗೊಳಿಸಲು ವಿಫಲರಾಗುವ ಇಲಾಖಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಎ.ಸಿ. ದಿವಾಕರ್ ತಿಳಿಸಿದ್ದಾರೆ.