ಬಿಜೆಪಿ ರಕ್ತ ನನ್ನ ದೇಹದಲ್ಲಿ ಯಾವಾಗಲೂ ಇತ್ತು: ಜನಾರ್ದನ ರೆಡ್ಡಿ

ಬೆಂಗಳೂರು, ಮಾ. ೨೫: ಮಾಜಿ ಸಚಿವ ಮತ್ತು ಗಣಿ ಉದ್ಯಮಿ ಜಿ. ಜನಾರ್ದನ ರೆಡ್ಡಿ ಅವರು ೨೦೨೪ ರ ಲೋಕಸಭೆ ಚುನಾವಣೆಗೆ ಮುನ್ನ ಸೋಮವಾರ ಬಿಜೆಪಿಗೆ ಮರು ಸೇರ್ಪಡೆಗೊಂಡಿದ್ದಾರೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಗಂಗಾವತಿ ಶಾಸಕ, ಕಳೆದ ವರ್ಷ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಸ್ಥಾಪಿಸಿ ಬಿಜೆಪಿಯೊಂದಿಗಿನ ಎರಡು ದಶಕಗಳ ಹಿಂದಿನ ಒಡನಾಟವನ್ನು ಮುರಿದುಕೊಂಡಿದ್ದರು. ರೆಡ್ಡಿ ಅವರು ಇಂದು ತಮ್ಮ ಕೆಆರ್‌ಪಿಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ್ದು, ಪತ್ನಿ ಅರುಣಾ ಲಕ್ಷಿö್ಮ ಮತ್ತು ಕೆಲವು ಕುಟುಂಬ ಸದಸ್ಯರೊಂದಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಇತರರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. ರೆಡ್ಡಿ ಇತ್ತೀಚೆಗೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಆದರೆ, ಫೆಬ್ರವರಿ ೨೭ ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದರು. ಮನೆಗೆ ಮರಳಿರುವೆ ಎಂದಿರುವ ರೆಡ್ಡಿ, ನರೇಂದ್ರ ಮೋದಿ ಅವರ ಕೈ ಬಲಪಡಿಸಿ ಮೂರನೇ ಬಾರಿ ಪ್ರಧಾನಿಯಾಗಲು ಕೆಆರ್‌ಪಿಪಿಯನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದಾಗಿ ತಿಳಿಸಿದ್ದಾರೆ. ಅಮಿತ್ ಶಾ ಅವರು ನನ್ನನ್ನು ದೆಹಲಿಗೆ ಆಹ್ವಾನಿಸಿದ್ದರು. ಪಕ್ಷಕ್ಕೆ ಬಾಹ್ಯ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ (ಎಲ್‌ಎಸ್ ಚುನಾವಣೆಯಲ್ಲಿ ಕೆಆರ್‌ಪಿಪಿ ಬಿಜೆಪಿಯನ್ನು ಬೆಂಬಲಿಸುತ್ತದೆ) ಬದಲಿಗೆ ನಾನು ಬಿಜೆಪಿಗೆ ಸೇರಬೇಕು ಮತ್ತು ಅದಕ್ಕಾಗಿ ಕೆಲಸ ಮಾಡಬೇಕು, ಏಕೆಂದರೆ ನಾನು ನನ್ನ ರಾಜಕೀಯ ಜನ್ಮವನ್ನು ಇಲ್ಲಿ ತೆಗೆದುಕೊಂಡಿದ್ದೇನೆ. ಪಕ್ಷ ಅದನ್ನು ಸ್ವೀಕರಿಸಿ, ನಾನು ಪಕ್ಷಕ್ಕೆ ಸೇರುತ್ತಿದ್ದೇನೆ ಎಂದು ಅವರು ಹೇಳಿದರು.

ಮಂಡ್ಯದಲ್ಲಿ ಪಟಾಕಿ ದುರಂತ: ಓರ್ವ ಕಾರ್ಮಿಕ ಸಾವು

ಮಂಡ್ಯ, ಮಾ. ೨೫: ಮಂಡ್ಯ ತಾಲೂಕಿನ ಜಿ. ಕೆಬ್ಬಳ್ಳಿ ಗ್ರಾಮದಲ್ಲಿ ಸಂಗ್ರಹಿಸಿಟ್ಟಿದ್ದ ಪಟಾಕಿ ಸ್ಫೋಟಗೊಂಡು ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಮೃತನನ್ನು ತಮಿಳುನಾಡು ಮೂಲದ ೬೭ ವರ್ಷದ ರಮೇಶ್ ಎಂದು ತಿಳಿದುಬಂದಿದೆ. ನಾಗಲಿಂಗ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಬ್ಬಳ್ಳಿ ಗ್ರಾಮದಲ್ಲಿ ಕಾಲಭೈರವೇಶ್ವರ ಹಬ್ಬಕ್ಕೆಂದು ಪಟಾಕಿ ಸಿಡಿಸಲು ತಮಿಳುನಾಡಿನಿಂದ ನಾಲ್ವರು ಆಗಮಿಸಿದ್ದರು. ನಿನ್ನೆ ರಾತ್ರಿ ಗ್ರಾಮದಲ್ಲಿ ಹಬ್ಬ ಮುಗಿದ ನಂತರ ಆಲೆಮನೆಯೊಂದರಲ್ಲಿ ನಾಲ್ವರು ಮಲಗಿದ್ದರು. ಇಂದು ಬೇರೊಂದು ಗ್ರಾಮಕ್ಕೆ ಹೋಗಲು ಪಟಾಕಿಗಳನ್ನು ತುಂಬುವಾಗ ಸ್ಫೋಟ ಸಂಭವಿಸಿದೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಇನ್ನು ಸ್ಥಳಕ್ಕೆ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್, ಎಸ್.ಪಿ. ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಡ್ರಗ್ಸ್ ಪ್ರಕರಣ : ೮ ಮಂದಿ ಬಂಧನ

ಬೆAಗಳೂರು, ಮಾ. ೨೫: ವ್ಯವಹಾರದಲ್ಲಿ ತನ್ನ ಸಹೋದರನ ಯಶಸ್ಸಿನಿಂದ ಕುಪಿತಗೊಂಡ ವ್ಯಕ್ತಿಯೊಬ್ಬ ಇತರ ಸಹೋದರರೊಂದಿಗೆ ಸೇರಿಕೊಂಡು ಡ್ರಗ್ಸ್ ಕಳ್ಳಸಾಗಣೆಯಲ್ಲಿ ತನ್ನ ಸಹೋದರ ಭಾಗಿಯಾಗಿದ್ದಾನೆ ಎಂದು ಪೊಲೀಸ್ ಮಾಹಿತಿದಾರರ ಮೂಲಕ ಸಿಸಿಬಿ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಫೆಬ್ರವರಿ ೨ ರಂದು, ಸುಳ್ಳು ಮಾಹಿತಿಯ ಆಧಾರದ ಮೇಲೆ ಸಿಸಿಬಿ ಪೊಲೀಸರು ಸಂತ್ರಸ್ತ ಚೋಗರಾಮ್ ಅವರ ಕಾರನ್ನು ಪರಿಶೀಲಿಸಿದಾಗ ೪೦೦ ಗ್ರಾಂ ಗಾಂಜಾ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ಆರ್‌ಆರ್ ನಗರ ಪೊಲೀಸರಿಗೆ ವರ್ಗಾಯಿಸಿದ ನಂತರ, ಎನ್‌ಡಿಪಿಎಸ್ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ, ಚೋಗರಾಮ್‌ನನ್ನು ಬಂಧಿಸಲಾಯಿತು. ವಿಚಾರಣೆಯ ಸಮಯದಲ್ಲಿ ಏನೂ ಖಚಿತವಾಗದಿದ್ದಾಗ, ಪೊಲೀಸರು ಮತ್ತೆ ತನಿಖೆಯನ್ನು ಪ್ರಾರಂಭಿಸಿದರು ಮತ್ತು ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಅರುಣ್ ಮತ್ತು ರವಿ ಎಂಬವರು ಚೋಗರಾಮ್ ಕಾರಿನೊಳಗೆ ಡ್ರಗ್ಸ್ ಇಟ್ಟಿರುವುದು ಕಂಡುಬAದಿದೆ. ಪೊಲೀಸರು ಪುನರಾಮ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೆ.ಆರ್. ಪುರಂ ಮೂಲದ ಪೊಲೀಸ್ ಮಾಹಿತಿದಾರರ ಮೂಲಕ ಸಿಸಿಬಿ ಪೊಲೀಸರಿಗೆ ಡ್ರಗ್ಸ್ ಮಾಹಿತಿ ನೀಡುವಂತೆ ಸೂಚಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ತನಿಖೆಯ ಸಮಯದಲ್ಲಿ, ಡ್ರಗ್ಸ್ ಅನ್ನು ಚೋಗರಾಮ್ ಅವರ ಹಿರಿಯ ಸಹೋದರ ಡೊಂಗರಾಮ್ ಹೊರತುಪಡಿಸಿ ಬೇರೆ ಯಾರೂ ವ್ಯವಸ್ಥೆ ಮಾಡಿಲ್ಲ ಎಂದು ಪೊಲೀಸರು ಕಂಡುಕೊAಡಿದ್ದಾರೆ. ಸರ್ಕಾರದ ನಿಷೇಧದ ಹೊರತಾಗಿಯೂ ಡೊಂಗರಾಮ್ ಪ್ಲಾಸ್ಟಿಕ್ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಚೋಗರಾಮ್ ಈ ಹಿಂದೆ ಮಾಧ್ಯಮಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ಸೋರಿಕೆ ಮಾಡಿದ್ದರು ಎಂದು ರಾಜಸ್ಥಾನದಿಂದ ಬಂಧಿಸಲ್ಪಟ್ಟ ಡೊಂಗರಾಮ್ ನಮಗೆ ತಿಳಿಸಿದ್ದಾರೆ. ಇದರಿಂದಾಗಿ ಡೊಂಗರಾಮ್, ಅವರ ಕಿರಿಯ ಸಹೋದರ ಜಗದೀಶ್ ಮತ್ತು ಸ್ನೇಹಿತ ಮಂಜುನಾಥ್ ಬಾಬು, ಪುನರಾಮ್ ಜೊತೆಗೂಡಿ ಸಂಚು ರೂಪಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಡೊಂಗರಾಮ್ ರಾಜಸ್ಥಾನದಿಂದ ಬಸ್‌ನಲ್ಲಿ ೪೦೦ ಗ್ರಾಂ ಗಾಂಜಾವನ್ನು ಸಾಗಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸೋಹೈಲ್, ಆಸಿಫ್, ಅರುಣ್, ರವಿ ಮತ್ತು ಮಂಜುನಾಥ್ ಬಾಬು ಸೇರಿದಂತೆ ರಾಜಸ್ಥಾನ ನಿವಾಸಿಗಳಾದ ಡೊಂಗರಾಮ್, ಪುನರಾಮ್ ಮತ್ತು ಜಗದೀಶ್ ಸೇರಿದಂತೆ ಎಂಟು ಜನರನ್ನು ಆರ್‌ಆರ್ ನಗರ ಪೊಲೀಸರು ಬಂಧಿಸಿದ್ದಾರೆ.

ಪರೀಕ್ಷೆಗೆ ಹೊರಟ್ಟಿದ್ದ ವಿದ್ಯಾರ್ಥಿನಿ ಸಾವು

ಶಿವಮೊಗ್ಗ, ಮಾ. ೨೫: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹೊರಟ್ಟಿದ್ದ ವಿದ್ಯಾರ್ಥಿನಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಮೂಡಲ ವಿಠಲಾಪುರದಲ್ಲಿ ನಡೆದಿದೆ. ಜಂಬರಘಟ್ಟ ಗ್ರಾಮದ ನಿವಾಸಿ ಉಮೈ ಖುಲ್ಸುಂ (೧೬) ಮೃತಪಟ್ಟ ವಿದ್ಯಾರ್ಥಿನಿ. ಶಿವಮೊಗ್ಗಕ್ಕೆ ತೆರಳಲು ಬಸ್ ಹತ್ತಲೆಂದು ಮೂಡಲ ವಿಠಲಾಪುರದಲ್ಲಿ ರಸ್ತೆ ದಾಟುವಾಗ ಚನ್ನಗಿರಿ ಕಡೆಯಿಂದ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರು ಡಿಕ್ಕಿ ಹೊಡೆದಿದೆ. ಇದರಿಂದಾಗಿ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ. ಈ ಬಗ್ಗೆ ಹೊಳೆಹೊನ್ನೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಂಡನ್‌ನಲ್ಲಿ ಟ್ರಕ್ ಹರಿದು ಭಾರತದ ಪಿಎಚ್‌ಡಿ ವಿದ್ಯಾರ್ಥಿನಿ ಸಾವು

ಲಂಡನ್, ಮಾ. ೨೫: ಗುರುಗಾಂವ್‌ನ ೩೩ ವರ್ಷದ ಪಿಎಚ್‌ಡಿ ವಿದ್ಯಾರ್ಥಿನಿ ಸೈಕಲ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಇವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಪಿಎಚ್‌ಡಿ ಪದವಿ ವ್ಯಾಸಂಗ ಮಾಡುತ್ತಿದ್ದರು. ಸೈಕಲ್ ತುಳಿಯುತ್ತ ಮನೆಗೆ ಹಿಂತಿರುಗುತ್ತಿದ್ದ ವೇಳೆ ಟ್ರಕ್ ಹರಿದು ೩೩ ವರ್ಷದ ಚೆಯಿಸ್ತಾ ಕೊಚ್ಚಾರ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಾರ್ಚ್ ೧೯ ರಂದು ಅಪಘಾತ ಸಂಭವಿಸಿದೆ. ಚೆಯಿಸ್ತಾ ಕೊಚ್ಚಾರ್ ಅವರು ನಿವೃತ್ತ ಲೆಫ್ಟಿನೆಂಟ್ ಜನರಲ್, ಸೆಲ್ಲುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ನಿರ್ದೇಶಕ ಡಾ. ಎಸ್.ಪಿ. ಕೊಚ್ಚಾರ್ ಅವರ ಪುತ್ರಿಯಾಗಿದ್ದಾರೆ. ಚೆಯಿಸ್ತಾ ಕೊಚ್ಚಾರ್ ಅವರು ಲಂಡನ್‌ಗೆ ತೆರಳುವ ಮೊದಲು ನೀತಿ ಆಯೋಗದಲ್ಲೂ ಕೆಲಸ ಮಾಡಿದ್ದರು. ಇವರು ಕಳೆದ ವರ್ಷವಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಎಂದು ತಿಳಿದುಬಂದಿದೆ. ಅಪಘಾತದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಪುತ್ರಿಯ ನಿಧನದ ಹಿನ್ನೆಲೆ ಡಾ. ಎಸ್.ಪಿ. ಕೊಚ್ಚಾರ್ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. “ನನ್ನ ಪುತ್ರಿಯು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಮನೆಗೆ ಹೊರಟಿದ್ದಳು. ಆಗ ಆಕೆಯ ಮೇಲೆ ಟ್ರಕ್ ಹರಿದಿದೆ. ನಮ್ಮೆಲ್ಲರನ್ನು ಚೆಯಿಸ್ತಾ ಕೊಚ್ಚಾರ್ ಅಗಲಿದ್ದಾಳೆ. ಅವಳ ನೆನಪುಗಳು ಮಾತ್ರ ನನ್ನಲ್ಲಿ ಉಳಿದಿವೆ” ಎಂದು ಭಾವುಕರಾಗಿದ್ದಾರೆ. ಮಗಳ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಚೆಯಿಸ್ತಾ ಕೊಚ್ಚಾರ್ ಅವರು ನೀತಿ ಆಯೋಗದಲ್ಲಿ ನನ್ನೊಂದಿಗೆ ಕಾರ್ಯನಿರ್ವಹಿಸಿದ್ದರು. ಆದರೆ, ಲಂಡನ್‌ನಲ್ಲಿ ಅವರು ಅಪಘಾತದಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ತಿಳಿದು ಅತೀವ ದುಃಖವಾಯಿತು. ದೇವರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬುದಾಗಿ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ನೀತಿ ಆಯೋಗದ ಮಾಜಿ ಸಿಇಓ ಅಮಿತಾಭ್ ಕಾಂತ್ ಪೋಸ್ಟ್ ಮಾಡಿದ್ದಾರೆ.