(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಮಾ. ೨೫: ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ನಲ್ಲಿ ನೋಂದಾಯಿತ ಕ್ಲಬ್‌ಗಳ ನಡುವಿನ ೨೦೨೩-೨೪ನೇ ಸಾಲಿನ ಜಿಲ್ಲಾ ಮಟ್ಟದ ಫುಟ್ಬಾಲ್ ಲೀಗ್ ಪಂದ್ಯಾವಳಿಯು ತಾ. ೨೬ ರಿಂದ (ಇಂದಿನಿAದ) ೩೧ರವರೆಗೆ ಅಮ್ಮತ್ತಿಯ ಪ್ರೌಢ ಶಾಲಾ ಮೈದಾನದಲ್ಲಿ ನಡೆಯಲಿದೆ.
ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಸೂಪರ್ ಫೈವ್ಸ್ ಫುಟ್ಬಾಲ್ ಪಂದ್ಯಾವಳಿ ಅತೀ ಹೆಚ್ಚಾಗಿ ನಡೆಯುತ್ತಿದೆ. ಇದರಿಂದ ಆಟಗಾರರು ತಮ್ಮ ಫಿಟ್ನೆಸ್ ಕಳೆದುಕೊಂಡು ಗಾಯದ ಸಮಸ್ಯೆಗೆ ಸಿಲುಕಿ ತಮ್ಮ ಇಡೀ ಫುಟ್ಬಾಲ್ ಬದುಕಿಗೆ ವಿರಾಮ ಹಾಕುತ್ತಿದ್ದಾರೆ.
ಸೂಪರ್ ಇಲೆವೆನ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ತಮ್ಮ ಆಟದ ಪ್ರದರ್ಶನ ತೋರಿದರೆ ಮಾತ್ರ ರಾಜ್ಯ, ರಾಷ್ಟಿçÃಯ ಮಟ್ಟದ ಕ್ಲಬ್‌ಗಳಲ್ಲಿ ಆಡಲು ಅವಕಾಶ ಸಿಗುವುದು. ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕ್ಲಬ್‌ಗಳಿಗೆ ಸೂಪರ್ ಇಲೆವೆನ್, ಸೂಪರ್ ನೈನ್ಸ್ ಮತ್ತು ಸೂಪರ್ ಸೆವೆನ್ಸ್ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲು ಈಗಾಗಲೇ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್‌ನಿಂದ ಸೂಚನೆ ನೀಡಲಾಗಿದೆ.
ಸಂಪೂರ್ಣವಾಗಿ ಐದು ಜನರ ಫುಟ್ಬಾಲ್ ಆಟಕ್ಕೆ ಕಡಿವಾಣ ಹಾಕಿ ಜಿಲ್ಲೆಯ ಯುವ ಫುಟ್ಬಾಲ್ ಆಟಗಾರರನ್ನು ಸಂಪೂರ್ಣವಾಗಿ ಪ್ರೊಫೆಷನಲ್ ಫುಟ್ಬಾಲ್ ಆಟಗಾರರನ್ನಾಗಿ ರೂಪಿಸಿಕೊಳ್ಳಲು ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ದಿಟ್ಟ ಹೆಜ್ಜೆ ಇಟ್ಟಿದೆ.
೧೬ ತಂಡಗಳ ನಡುವೆ ಸೆಣಸಾಟ!
ಅಮ್ಮತ್ತಿಯ ಪ್ರೌಢಶಾಲಾ ಮೈದಾನದಲ್ಲಿ ಆರಂಭಗೊಳ್ಳಲಿರುವ ಜಿಲ್ಲಾ ಮಟ್ಟದ ಫುಟ್ಬಾಲ್ ಲೀಗ್ ಪಂದ್ಯಾವಳಿಯಲ್ಲಿ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ನಲ್ಲಿ ನೋಂದಾಯಿತ ೧೬ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ. ೧೬ ತಂಡಗಳನ್ನು ೪ ಗುಂಪುಗಳಾಗಿ ವಿಂಗಡಿಸಿದ್ದು, ಎಲ್ಲಾ ಗ್ರೂಪ್ ಗಳಿಂದ ತಲಾ ಮೊದಲ ಸ್ಥಾನ ಪಡೆಯುವ ಎರಡು ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಅರ್ಹತೆ ಪಡೆಯಲಿವೆ.
ಲೀಗ್ ಮಾದರಿಯಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಎಲ್ಲಾ ತಂಡಗಳು ತಲಾ ಮೂರು ಪಂದ್ಯಗಳನ್ನು ಆಡಬೇಕಾಗಿದೆ. ತಾ. ೩೦ ರಂದು ಕ್ವಾರ್ಟರ್ ಫೈನಲ್ ಮತ್ತು ತಾ. ೩೧ ರಂದು ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿದೆ. ಪ್ರತೀ ದಿನ ಒಟ್ಟು ಆರು ಪಂದ್ಯಗಳು ನಡೆಯಲಿದೆ. ೨೫+೨೫ ನಿಮಿಷಗಳಿಗೆ ಸೀಮಿತವಾಗಿ ಲೀಗ್ ಮಾದರಿಯ ಪಂದ್ಯಗಳು ನಡೆಯುತ್ತದೆ.
"ಎ" ಗ್ರೂಪ್ ನಲ್ಲಿ ಎನ್.ವೈ.ಸಿ ಕೊಡಗರಹಳ್ಳಿ, ಎಂ.ಸಿ.ಸಿ ಮಡಿಕೇರಿ, ಕ್ಯಾಪ್ಟನ್ಸ್ ಇಲೆವೆನ್ ಪಾಲಿಬೆಟ್ಟ ಮತ್ತು ಚೌಡೇಶ್ವರಿ ಎಫ್.ಸಿ ಅಮ್ಮತ್ತಿ ತಂಡಗಳು ಸ್ಥಾನ ಪಡೆದಿದೆ. " ಬಿ" ಗುಂಪಿನಲ್ಲಿ ಐಎನ್.ಎಸ್ ಗುಡ್ಡೆಹೊಸೂರು, ಅಮಿಟಿ ಎಫ್.ಸಿ ಗದ್ದೆಹಳ್ಳ, ಎಸ್.ಎಸ್.ಸಿ ಪೊನ್ನಂಪೇಟೆ ಮತ್ತು ಬಿ.ಎಫ್.ಸಿ ಬೋಯಿಕೇರಿ ತಂಡಗಳಿವೆ. "ಸಿ" ಗ್ರೂಪ್ ನಲ್ಲಿ ವೈಷ್ಣವಿ ಎಫ್‌ಸಿ ಮರಗೋಡು, ಸಹರಾ ಯೂತ್ ಅಸೋಸಿಯೇಷನ್ ಒಂಟಿಯAಗಡಿ, ಆಕ್ಸ್ಫರ್ಡ್ ಎಫ್‌ಸಿ ವಿರಾಜಪೇಟೆ ಮತ್ತು ವಿವೈಸಿ ಕೋಟೆಕೊಪ್ಪ ತಂಡಗಳ ನಡುವೆ ಸೆಣಸಾಟ ನಡೆಸಲಿದೆ. "ಡಿ" ಗ್ರೂಪ್ ನಲ್ಲಿ ಬಿವೈಸಿ ಹಾಲುಗುಂದ, ಮಿಲನ್ಸ್ ಎಫ್.ಸಿ ಅಮ್ಮತ್ತಿ, ಗಾಂಧಿ ಯೂತ್ ಕ್ಲಬ್ ಕಂಡಕರೆ ಮತ್ತು ಸಿಸಿಬಿ ವೀರಾಜಪೇಟೆ ತಂಡಗಳು ಸ್ಥಾನ ಪಡೆದಿವೆ.
ಯುವ ಆಟಗಾರರು ಜಿಲ್ಲಾ ತಂಡಕ್ಕೆ ಆಯ್ಕೆ!
ಜಿಲ್ಲಾ ಮಟ್ಟದ ಫುಟ್ಬಾಲ್ ಲೀಗ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಟವನ್ನು ಪ್ರದರ್ಶಿಸುವ ಯುವ ಆಟಗಾರರನ್ನು ಕೊಡಗು ಜಿಲ್ಲಾ ಫುಟ್ಬಾಲ್ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ನಂತರ ಆಯ್ಕೆಯಾದ ಆಟಗಾರರಿಗೆ ತರಬೇತಿ ನೀಡಿ, ರಾಜ್ಯ ಮಟ್ಟದಲ್ಲಿ ನಡೆಯುವ ಅಂತರ್ ಜಿಲ್ಲಾ, ಆಲ್‌ಇಂಡಿಯಾ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಕೊಡಗು ತಂಡದ ಮೂಲಕ ಅವಕಾಶ ನೀಡಲಾಗುತ್ತಿದೆ.
ಇತ್ತೀಚಿಗೆ ಮಂಗಳೂರಿನಲ್ಲಿ ನಡೆದಿದ್ದ ಆಹ್ವಾನಿತ ತಂಡಗಳ ನಡುವಿನ ಫುಟ್ಬಾಲ್ ಪಂದ್ಯಾವಳಿಯಲ್ಲಿ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ತಂಡ ಭಾಗವಹಿಸಿತ್ತು. ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಲೀಗ್ ಪಂದ್ಯಾವಳಿಯಲ್ಲಿ ಜಿಲ್ಲೆಯ ಆಟಗಾರರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಒಂದು ವಾರದ ಮುಂಚಿತವಾಗಿ ನೋಂದಾಯಿತ ಕ್ಲಬ್‌ಗಳು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್‌ಗೆ ನೀಡಿರುವ ಆಟಗಾರರ ಪಟ್ಟಿಯಲ್ಲಿರುವ ಆಟಗಾರ ರಿಗೆ ಮಾತ್ರ ಲೀಗ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
ಮಂಗಳೂರು, ಮೈಸೂರು, ಬೆಂಗಳೂರು ಹಾಗೂ ಇತರೆ ರಾಜ್ಯಗಳ ಲೀಗ್‌ನಲ್ಲಿ ಆಡಿರುವ ಆಟಗಾರರಿಗೆ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಲೀಗ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶವಿಲ್ಲ. ಒಂದು ವೇಳೆ ಇತರೆ ಜಿಲ್ಲೆಗಳಲ್ಲಿ ಕಳೆದ ಸಾಲಿನಲ್ಲಿ ಲೀಗ್ ಪಂದ್ಯಾವಳಿಯಲ್ಲಿ ಆಡಿ ಕೊಡಗು ಜಿಲ್ಲಾ ಮಟ್ಟದ ಲೀಗ್ ಪಂದ್ಯಾವಳಿಯಲ್ಲಿ ಕೂಡ ಆಡಿರುವುದು ಧೃಡಪಟ್ಟರೆ ಅಂತಹ ಆಟಗಾರ ಮತ್ತು ಕ್ಲಬ್‌ಅನ್ನು ರಾಜ್ಯ ಫುಟ್ಬಾಲ್ ಸಂಸ್ಥೆಯ ನಿಯಮದಂತೆ ಮುಂದಿನ ಒಂದು ವರ್ಷಗಳವರೆಗೆ ಬ್ಯಾನ್ ಮಾಡಲಾಗುತ್ತದೆ. ಕಳೆದ ವರ್ಷ ಇಬ್ಬರು ಆಟಗಾರರನ್ನು ಬ್ಯಾನ್ ಮಾಡಲಾಗಿತ್ತು.
ಬ್ಯಾನ್ ಮಾಡಲಾಗಿರುವ ಆಟಗಾರರಿಗೆ ರಾಜ್ಯ ಫುಟ್ಬಾಲ್ ಸಂಸ್ಥೆಯ ಯಾವುದೇ ಲೀಗ್ ಪಂದ್ಯಾವಳಿಯಲ್ಲಿ ಆಡಲು ಕೂಡ ಅವಕಾಶವಿರುವುದಿಲ್ಲ. ಅಮ್ಮತ್ತಿಯಲ್ಲಿ ನಡೆಯುವ ಲೀಗ್ ಫುಟ್ಬಾಲ್ ಪಂದ್ಯಾವಳಿಯು ಫೀಫಾ ನಿಯಮಗಳಂತೆ ನಡೆಯಲಿದೆ.