ಸಿದ್ದಾಪುರ, ಮಾ. ೨೪: ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹದ ಪ್ರಾಣಪ್ರತಿಷ್ಠಾಪನೆಯ ಹಿನ್ನೆಲೆ ದೇಶಾದ್ಯಂತ ರಾಮನ ಭಕ್ತರು ವಿಶೇಷ ಆಚರಣೆಗಳನ್ನು ಆರಂಭಿಸಿದ್ದಾರೆ. ಅದೇ ರೀತಿ ಪಿರಿಯಾಪಟ್ಟಣದ ೧೨ ವರ್ಷದ ಬಾಲಕನೊಬ್ಬ ರೂಬಿಕ್ಸ್ ಕ್ಯೂಬ್ನಲ್ಲಿ ರಾಮನ ಚಿತ್ರ ಬಿಡಿಸುವ ಮೂಲಕ ಜನರ ಗಮನ ಸೆಳೆದಿದ್ದಾನೆ. ಪಿರಿಯಪಟ್ಟಣದ ನಿವಾಸಿ ಮೃದುಲಾ ಮತ್ತು ಪಿ.ಎನ್ ವಿನಯ್ ದಂಪತಿ ಪುತ್ರ ಪ್ರಣವ್ ಈ ಸಾಧನೆ ಮಾಡಿದ ಬಾಲಕನಾಗಿದ್ದಾನೆ. ಪ್ರಣವ್ ಖಾಸಗಿ ಶಾಲೆಯಲ್ಲಿ ೭ನೇ ತರಗತಿ ಓದುತ್ತಿದ್ದು, ರೂಬಿಕ್ಸ್ ಕ್ಯೂಬ್ ಸಾಲ್ವ್ ಮಾಡುವುದರಲ್ಲಿ ಪರಿಣಿತನಾಗಿದ್ದಾನೆ. ಈತ ೨೨ ವಿವಿಧ ರೀತಿಯ ಕ್ಯೂಬ್ಗಳನ್ನು ಸಾಲ್ವ್ ಮಾಡಿ ಕರ್ನಾಟಕ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ್ದಾನೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿಯೂ ಈತನ ಸಾಧನೆ ದಾಖಲಾಗಿದೆ. ಕುಶಾಲನಗರದಲ್ಲಿ ಸ್ಮಾರ್ಟ್ ಬ್ರೈನ್ಸ್ ಅಬಾಕಸ್ ಆಕಾಡೆಮಿ ವತಿಯಿಂದ ನಡೆದ ೯ನೇ ವರ್ಷದ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಭಾಗವಹಿಸಿ ರಾಮನ ಚಿತ್ರ ರಚಿಸುವ ಮೂಲಕ ಗಣ್ಯರ ಮೆಚ್ಚುಗೆ ಗಳಿಸಿದ್ದಾನೆ. ಸತತ ೨ ಗಂಟೆ ಕಾಲ ಬರೋಬ್ಬರಿ ೪೯೮ ಕ್ಯೂಬ್ಗಳನ್ನು ಬಳಸಿ ಶ್ರೀರಾಮನ ಚಿತ್ರ ರಚಿಸಿದ್ದಾನೆ. ಈ ಮೂಲಕ ತನ್ನದೇ ಶೈಲಿಯಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದಾನೆ. ಈ ಹಿಂದೆಯೂ ರೂಬಿಕ್ಸ್ ಕ್ಯೂಬ್ನಲ್ಲಿ ಪ್ರಣವ್ ಶ್ರೀಕೃಷ್ಣ, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್, ಶಿವಕುಮಾರ ಸ್ವಾಮೀಜಿ ಮುಂತಾದ ಮಹನೀಯರು ಸೇರಿದಂತೆ ಪ್ರಧಾನಿ ಮೋದಿಯವರ ಜನ್ಮ ದಿನಾಚರಣೆ ವೇಳೆ ಅವರ ಭಾವಚಿತ್ರವನ್ನು ರೂಬಿಕ್ಸ್ ಕ್ಯೂಬ್ ಬಳಸಿ ರಚಿಸಿದ್ದಾನೆ. ಈತನ ಸಾಧನೆಗೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ. - ಎಸ್.ಎಂ. ಮುಬಾರಕ್